ಬ್ರಹ್ಮಾವರ: ಉಡುಪಿ ಜಿಲ್ಲೆಯ ಸರ್ಕಾರಿ ಶಾಲೆ ವಿದ್ಯಾರ್ಥಿಗಳ ಮಧ್ಯಾಹ್ನದ ಬಿಸಿಯೂಟಕ್ಕೆ ತೊಗರಿ ಬೇಳೆ ಸರಬರಾಜು ಇಲ್ಲದೆ ತಿಂಗಳು ಕಳೆದರೂ ಸರ್ಕಾರ ಮತ್ತು ಇಲಾಖೆ ಸ್ಪಂದಿಸುತ್ತಿಲ್ಲ.
ಪ್ರತಿ ಮಕ್ಕಳಿಗೆ 30 ಗ್ರಾಂನಂತೆ ತೊಗರಿ ಬೇಳೆ ನೀಡಲಾಗುತ್ತಿತ್ತು. ಆದರೆ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳ ಬಿಸಿಯೂಟದಲ್ಲಿ ಕಳೆದ ಒಂದು ತಿಂಗಳಿಂದ ಬೇಳೆ ಇಲ್ಲವಾಗಿದೆ.
ಕೆಲವು ಸರ್ಕಾರಿ ಪ್ರೌಢಶಾಲೆಗಳಲ್ಲಿ 700ಕ್ಕಿಂತ ಅಧಿಕ ವಿದ್ಯಾರ್ಥಿಗಳಿದ್ದು, ಇಲ್ಲಿ ಪ್ರತಿ ದಿನ 25 ಕೆ.ಜಿ.ಯಷ್ಟು ತೊಗರಿ ಬೇಳೆ ಅವಶ್ಯಕತೆ ಇದೆ. ಆದರೆ ಬೇಳೆ ಇಲ್ಲದೆ ಮಕ್ಕಳ ಊಟಕ್ಕೆ ಪಾಲಕರು ಮತ್ತು ಶಿಕ್ಷಕರ ಅಸೋಸಿಯೇಶನ್ ಮೂಲಕ ಭರಿಸಲಾಗುತ್ತಿದೆ. ತೊಗರಿ ಬೇಳೆಗೆ ಹಿಂದೆ 60 ರೂ. ಇತ್ತು, ಇದೀಗ 130 ರೂ. ಇದೆ. ಹೀಗಾಗಿ ಸರಬರಾಜು ಮಾಡುವವರು ನಿಗದಿತ ಬೆಲೆಗಿಂತ ದುಪ್ಪಟ್ಟು ಹಣ ಭರಿಸಬೇಕಾಗಿದ್ದು ನಷ್ಟ ಎದುರಿಸುವ ಕಾರಣ ಸರಿಯಾಗಿ ಪೂರೈಕೆ ಮಾಡದಿರಲು ಕಾರಣವಾಗಿರಬಹುದು ಎನ್ನಲಾಗಿದೆ.
ಕಳೆದ ವರ್ಷವೂ ಇದೇ ರೀತಿ ಸಮಸ್ಯೆಯಾಗಿ ಬಳಿಕ ಮಕ್ಕಳಿಗೆ ರಜೆ ಸಂದರ್ಭ ಬೇಳೆ ಸರಬರಾಜು ಮಾಡಲಾಗಿತ್ತು. ಈ ಬಾರಿ ಕೂಡ ಶಾಲೆ ರಜೆಗೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಶೀಘ್ರದಲ್ಲೇ ಎಲ್ಲ ಶಾಲೆಗಳಿಗೆ ತೊಗರಿ ಬೇಳೆ ಪೂರೈಸುವಂತೆ ಆಗ್ರಹಿಸಲಾಗಿದೆ.
ಸರ್ಕಾರ ರಾಜ್ಯಕ್ಕೆ ಒಂದೇ ಟೆಂಡರ್ ಮಾಡುವ ಕಾರಣ ಕೆಲವು ಭಾಗಕ್ಕೆ ಸರಬರಾಜು ಕಡಿಮೆ ಇರುತ್ತದೆ. ನಮ್ಮ ಬೇಡಿಕೆಯಷ್ಟು ಬೇಳೆ ಸರಬರಾಜು ಇರುವುದಿಲ್ಲ ಮತ್ತು ಹೆಚ್ಚು ದಿನ ಬೇಳೆಯನ್ನು ಇರಿಸಲು ಕಷ್ಟವಾದ ಕಾರಣ ಸರ್ಕಾರಿ ಮಟ್ಟದಲ್ಲಿ ಈ ಸಮಸ್ಯೆ ತಿಳಿಸಿದ್ದೇವೆ. ಇತ್ತೀಚೆಗೆ ಜಿಲ್ಲಾ ಮುಖ್ಯಶಿಕ್ಷಕರ ಸಭೆಯಲ್ಲಿ ಗಮನ ಸೆಳೆಯಲಾಗಿದೆ. ಆದಷ್ಟು ಶೀಘ್ರ ಪ್ರತಿ ಶಾಲೆಗೆ ಬೇಳೆ ಸರಬರಾಜು ಮಾಡುವ ಪ್ರಯತ್ನದಲ್ಲಿ ಇದ್ದೇವೆ.