ಗೋಕರ್ಣದ ಅಶೋಕೆಯ ಶ್ರೀರಾಮಚಂದ್ರಾಪುರ ಮಠದಲ್ಲಿ (Anna Brahma)ಚಾತುರ್ಮಾಸ್ಯ ವ್ರತಬದ್ಧರಾದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಅವರಿಂದ ಉದ್ಯಮಿಗಳಾದ ಡಾ.ನಾರಾಯಣ ದೇಶಪಾಂಡೆ ಮತ್ತು ಡಾ. ಗುರುರಾಜ ದೇಶಪಾಂಡೆ ಆಶೀರ್ವಾದ ಪಡೆದರು. 
ಉಡುಪಿ

ಅಗ್ನಿಯ ಒಲುಮೆಗಿದೆ ಅಸಾಧ್ಯವನ್ನು ಸಾಧಿಸುವ ಶಕ್ತಿ Anna Brahma

ಪ್ರಮುಖ ಮುಖ್ಯಾಂಶಗಳು

  • ಅನ್ನಬ್ರಹ್ಮ ಚತುರ್ಮಾಸ್ಯ ಪ್ರವಚನ
  • ರಾಘವೇಶ್ವರ ಶ್ರೀಗಳಿಂದ ಪಂಚಾವತಾರ ವರ್ಣನೆ
  • ಅಶೋಕೆಯ ಶ್ರೀರಾಮಚಂದ್ರಾಪುರ ಮಠದಲ್ಲಿ ಆಯೋಜನೆ
ಗೋಕರ್ಣ: ತಪಸ್ಸು ಅಂದರೆ ಅಗ್ನಿ. ಅಗ್ನಿಯೇ ತಪಸ್ಸು. ಈ ಬ್ರಹ್ಮಾಂಡದಲ್ಲಿ ತಪಸ್ಸಿನಿಂದ ಆಗದೆ ಇರುವುದು ಮತ್ತು ತಪಸ್ಸಿಗೆ ನಿಲುಕದೆ ಇರುವುದು ಯಾವುದೂ ಇಲ್ಲ.
ಕಾರಣ ಅಗ್ನಿಯ ಒಲುಮೆಗೆ ಅಸಾಧ್ಯವಾದುದನ್ನು ಕೂಡ ಸಾಧಿಸುವ ಮಹಾಶಕ್ತಿ ಇದೆ ಎಂದು ಅನ್ನಬ್ರಹ್ಮ ಚತುರ್ಮಾಸ್ಯ ವ್ರತಬದ್ಧರಾದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.
ಇಲ್ಲಿನ ಅಶೋಕೆಯ ಶ್ರೀರಾಮಚಂದ್ರಾಪುರ ಮಠದಲ್ಲಿ ಸೋಮವಾರ ಆಯೋಜಿಸಿದ್ದ (

Anna Brahma)

ಧರ್ಮಸಭೆಯಲ್ಲಿ ಶ್ರೀಗಳು ಅಗ್ನಿಯ ಪಂಚಾವತಾರಗಳನ್ನು ವರ್ಣಿಸಿದರು.

ಒಳಗಿದೆ ಪಂಚಾಗ್ನಿ: ನಮ್ಮ ಶರೀರಕ್ಕೆ ಪರಿಪೂರ್ಣ ಆರೋಗ್ಯವನ್ನು ಅನುಗ್ರಹಿಸಬಲ್ಲ ದೇಹದ ಅಂತರಾಗ್ನಿಗೆ ಐದು ಅವತಾರಗಳಿವೆ.
ವೈಶ್ವಾನರಾಗ್ನಿಯಾಗಿ ಕರೆಯಲಾಗುವ ಜಠರದ ಅಗ್ನಿಯ ಮೊದನೆಯ ಪ್ರಮುಖ ಅವತಾರಕ್ಕೆ ಪಾಚಕಾಗ್ನಿ ಎನ್ನಲಾಗಿದೆ. ಮುಖ್ಯವಾಗಿ ನಾಲ್ಕು ಪ್ರಕಾರದ ಆಹಾರವನ್ನು ಜೀರ್ಣಿಸುವ ಕಾರ್ಯ ನಿರ್ವಹಿಸುವ ಪಾಚಕಾಗ್ನಿ ಉಳಿದ ನಾಲ್ಕು ಅಗ್ನಿಗಳಿಗೆ ಬಲವೀಯುವ ಮೂಲ ಅಗ್ನಿ.
ಹೀಗಾಗಿ ಈ ಅಗ್ನಿ ಕೆಟ್ಟರೆ, ಅಸಾಮ್ಯದಲ್ಲಿದ್ದರೆ ಉಳಿದವುಗಳು ಯಾವುದೇ ಕೆಲಸ ಮಾಡಲಾರವು.
ರಂಜಕಾಗ್ನಿ: ಈ ಅಗ್ನಿಯಿಂದ ದೇಹಕ್ಕೆ ವರ್ಣ ಪ್ರಾಪ್ತಿ. ಆಹಾರ ರಸ ರಕ್ತವಾಗುವುದರಲ್ಲಿ ರಂಜಕಾಗ್ನಿಯ ಕಾರ್ಯ ಹಿರಿದು. ರಂಜಕ ಎಂದರೆ ಕೆಂಬಣ್ಣ. ರಂಜಕಾಗ್ನಿಯಿಂದ ರಕ್ತ ಕೆಂಪು.
ಇದರ ಜತೆಗೆ ಶರೀರದಲ್ಲಿ ಉತ್ಪತ್ತಿಯಾಗುವ ಅನುರಾಗ. ಪ್ರೀತಿ,ಪ್ರೇಮ ಇವುಗಳು ಈ ರಂಜಕಾಗ್ನಿಯ ಕೃಪಾಶ್ರಿತ.
ಸಾಧಕಾಗ್ನಿ: ಈ ಅಗ್ನಿ ಧೈರ್ಯ ಸ್ಥೈರ್ಯಗಳನ್ನಿತ್ತು, ಹೃದಯ ಭಾವಗಳನ್ನು ಒದಗಿಸಿ ಜೀವನದ ಸರ್ವಸಾಧನೆಗೆ ಕಾರಣವಾಗುತ್ತದೆ.ಮೋಕ್ಷಕ್ಕೆ ಮಾರ್ಗವಾದ ಇದನ್ನು ಆತ್ಮಾಗ್ನಿ,ಪರಮಾತ್ಮಾಗ್ನಿ ಎಂದೂ ಹೆಸರಿಸಲಾಗಿದೆ.
ಆಲೋಚಕಾಗ್ನಿ: ಬುದ್ಧಿಯ ಕೆಲಸ ಆಲೋಚಾಗ್ನಿಯಿಂದ ನಿಗ್ರಹಿತ. ಇದು ಏರುಪೇರಾದರೆ ಬುದ್ಧಿಯ ಅಸಮತೋಲನದ ಅಪಾಯವಿದೆ. ಜತೆಗೆ ಕಣ್ಣಿಗೆ ಬೆಳಕಿನ ಬಲ ಇದರಿಂದ ದೊರೆಯುತ್ತದೆ.
ಈ ಅಗ್ನಿಗೆ ಹಾನಿ ತಟ್ಟಿದರೆ ಬಾಳು ಕತ್ತಲಾಗುವ ಸಾಧ್ಯತೆ ಎದುರಾಗ ಬಹುದಾಗಿದೆ.
ಭಾಜಕಾಗ್ನಿ: ಕೊನೆಯದಾದ ಭಾಜಕಾಗ್ನಿ ನಮ್ಮನ್ನು ಆವರಿಸಿರುವ ಚರ್ಮದ ಮೇಲೆ ನೀರು, ಎಣ್ಣೆ, ಲೇಪ ಇತ್ಯಾದಿ ಏನೇ ಅಂಟಲಿ, ಬೀಳಲಿ ಅದನ್ನು ಶುಷ್ಕವಾಗಿಸುವುದು ಈ ಭಾಜಕ ಅಗ್ನಿಯ ಕಾರ್ಯ.
ಶರೀರದ ಕಾಂತಿ, ಸೌಂದರ್ಯ, ಹೊಳಪು ಮತ್ತು ಪ್ರಭೆ ಇತ್ಯಾದಿ ಆಕರ್ಷಣೆಗಳು ಈ ಭಾಜಕಾಗ್ನಿಯಿಂದ ಎಂದು ಶ್ರೀಗಳು ವಿವರಿಸಿ ಶರೀರದಲ್ಲಿ ರಸಗಳ ಮಹತ್ವವನ್ನು ತಿಳಿಸಿದರು.
ಅಯಂ ಅನ್ನಾತ್ ಪುರುಷೋ: ಶರೀರ ಸೇರಿದ ಅನ್ನ ಅಥವಾ ಅನ್ನರಸದಿಂದ ಪುರುಷ. ಆರೋಗ್ಯಶಾಸ್ತ್ರ ಹೆಣ್ಣನ್ನು ಒಳಗೊಂಡಂತೆ ಸಕಲ ಜೀವಿಗಳನ್ನು ಪುರುಷ ಎಂಬುದಾಗಿ ಉಲ್ಲೇಖಿಸಿದೆ.
ಹುಟ್ಟು,ಬದುಕು ಕೊನೆಗೆ ಸಮಾಧಿ ಕೂಡ ರಸದಿಂದ. ರಸಗಳನ್ನು ಅನುಚಿತವಾಗಿ ಅಥವಾ ತಪ್ಪಾಗಿ ಬಳಸಿದರೆ ಸಮಸ್ಯೆಗಳು ಉದ್ಭವವಾಗುತ್ತವೆ.
ಇದಕ್ಕೆ ಅನೇಕಾನೇಕ ಪ್ರಾಚೀನ ಆಯುರ್ವೇದ ಶಾಸ್ತ್ರಜ್ಞರ ಉದಾಹರಣೆಗಳ ಉಲ್ಲೇಖಗಳಿವೆ. ಕಾರಣ ನಮ್ಮ ಬಗ್ಗೆ ನಾವು ತಿಳಿಯುವ ಕಾರ್ಯ ಮುಖ್ಯವಾಗದೆ ಜಗತ್ತಿನ ಬಗ್ಗೆ ಜಗತ್ತಿನ ಆಗುಹೋಗುಗಳ ಬಗ್ಗೆ ಲಕ್ಷ್ಯ ಕೊಡುವುದು ವ್ಯರ್ಥಕಾರ್ಯ.
ನಮ್ಮ ಶರೀರದಲ್ಲಿ ಏನೇನಿದೆ ಮತ್ತು ಅಲ್ಲಿ ಏನಾಗುತ್ತಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನವಾಗಬೇಕು. ಇದಕ್ಕೆ ಅಗ್ನಿಯನ್ನು ಒಲಿಸಿಕೊಳ್ಳುವ ಅಗ್ನಿಯ ಉಪಾಸನೆ ಸರ್ವೋತ್ತಮ ದಾರಿ ಎಂದು ಶ್ರೀಗಳು ಸರ್ವರನ್ನು ಆಶೀರ್ವದಿಸಿದರು.
ಧರ್ಮಸಭೆಯಲ್ಲಿ ಉದ್ಯಮಿಗಳಾದ ಡಾ.ನಾರಾಯಣ ದೇಶಪಾಂಡೆ, ಡಾ.ಗುರುರಾಜ ದೇಶಪಾಂಡೆ, ಪ್ರಕಾಶ ಪಿ.ಎಸ್. ಶ್ರೀಗಳಿಂದ ಆಶೀರ್ವಾದ ಪಡೆದರು.
ಹರ್ಷ ಮಾಂಕನಮೂಲೆ ಕುಟುಂಬದವರಿಂದ ಶ್ರೀಗುರುಭಿಕ್ಷಾ ಸೇವೆ ಸಮರ್ಪಿತವಾಯಿತು. ಮೋಹನ ಹರಿಹರ ದಿನಪ್ರಧಾನರಾಗಿ ಉಪಸ್ಥಿತರಿದ್ದರು.