ಕಾಸರಗೋಡು ಭಾಗದ ಗದ್ದೆಯಲ್ಲಿ ಕಾರ್ಯನಿರತ ಡ್ರೋನ್ ದೀದಿ ತಂಡ.
ವಿಜಯವಾಣಿ ಸುದ್ದಿಜಾಲ ಬದಿಯಡ್ಕ
ಕೃಷಿಗೆ ಕಾರ್ಮಿಕರ ಕೊರತೆ ಕಾಡುತ್ತಿರುವ ಸಂದರ್ಭದಲ್ಲಿ ‘ಡ್ರೋನ್ ದೀದಿ’ ರೈತರಿಗೆ ವರದಾನವಾಗಿದೆ. ಜಿಲ್ಲೆಯಲ್ಲಿರುವ ಭತ್ತ ಗದ್ದೆಗಳಲ್ಲಿ ಡ್ರೋನ್ ದೀದಿಯರು ಕಾರ್ಯೋನ್ಮುಖರಾಗಿದ್ದು ಕಾಸರಗೋಡಿನ ಕೃಷಿಕರು ತುಸು ನಿಟ್ಟುಸಿರು ಬಿಡುವಂತಾಗಿದೆ.
ಕೇಂದ್ರ ಸರ್ಕಾರದ ‘ನಮೋ ಡ್ರೋನ್ ದೀದಿ’ ಯೋಜನೆ ಭಾಗವಾಗಿ ಜಿಲ್ಲೆಯ ಏಳು ಸದಸ್ಯರ ಮಹಿಳಾ ತಂಡವು ರಾಜ್ಯ ಕುಟುಂಬಶ್ರೀ ಮಿಷನ್ ನೇತೃತ್ವದಲ್ಲಿ ಡ್ರೋನ್‌ಗಳ ಸಹಾಯದಿಂದ ಕೃಷಿ ಕಾರ್ಯ ಕೈಗೆತ್ತಿಕೊಂಡಿದ್ದು, ಈ ಯೋಜನೆಯು ಎರಡು ವರ್ಷಗಳಿಂದ ಜಿಲ್ಲೆಯ ರೈತರಿಗೆ ಹೆಚ್ಚಿನ ಪ್ರಯೋಜನ ನೀಡಿದೆ.
ಡ್ರೋನ್ ದಿದಿ ಸೇವೆಯನ್ನು ಈಗಾಗಲೇ ಜಿಲ್ಲೆಯ 228 ರೈತರ 600 ಎಕರೆ ಕೃಷಿ ಭೂಮಿಯಲ್ಲಿ ಆರಂಭಿಸಲಾಗಿದೆ. ಕಾರ್ಮಿಕರ ಮೂಲಕ ದಿನಗಟ್ಟಲೇ ನಡೆಯುತ್ತಿದ್ದ ಕೃಷಿ ಚಟುವಟಿಕೆಗಳು ಡ್ರೋನ್ ದೀದಿ ಮೂಲಕ ಕೆಲವೇ ನಿಮಿಷಗಳಲ್ಲಿ ಪೂರ್ಣಗೊಳ್ಳುತ್ತಿರುವುದರಿಂದ ಸಮಯವೂ ಉಳಿತಾಯವಾಗುತ್ತಿದೆ. ಡ್ರೋನ್ ದೀದಿಯರು ಸೂಕ್ತ ತರಬೇತಿ ಪಡೆದು ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುತ್ತಿರುವುದರಿಂದ ಕಾಸರಗೋಡಿನ ಕೃಷಿ ಕ್ಷೇತ್ರದಲ್ಲಿ ಭಾರಿ ಬದಲಾವಣೆಯಾಗುತ್ತಿದೆ. ತರಬೇತಿ ಪಡೆದ ಡ್ರೋನ್ ದೀದಿಯರು ರೈತರ ಗದ್ದೆಗಳಿಗೆ ತೆರಳಿ ಡ್ರೋನ್ ಮೂಲಕ ಬಿತ್ತನೆ, ಗೊಬ್ಬರ ಸಿಂಪಡಣೆ ಮತ್ತಿತರ ಕಾರ್ಯಗಳನ್ನು ಮಾಡುತ್ತಾರೆ. ಮಹಿಳೆಯರೇ ನಿರ್ವಹಣೆ ಮಾಡುವುದರಿಂದ ಗ್ರಾಮೀಣ ಭಾಗದ ಮಹಿಳೆಯರ ಸ್ವಾವಂಬಲನೆಗೆ ಯೋಜನೆ ಒತ್ತು ನೀಡುತ್ತದೆ.
ಏನು ಉಪಯೋಗ?
ಇಂದಿನ ಆಧುನಿಕ ಕೃಷಿಯಲ್ಲಿ ಡ್ರೋನ್‌ಗಳು ಮಹತ್ವದ ಪಾತ್ರ ವಹಿಸುತ್ತಿವೆ. ಬೆಳೆಗಳಿಗೆ ಕೀಟನಾಶಕಗಳನ್ನು ಸಿಂಪಡಿಸುವುದು, ಬೆಳೆಗಳ ಸಮೀಕ್ಷೆ, ಬೆಳೆಗಳ ರಕ್ಷಣೆ, ಗೊಬ್ಬರ ಸಿಂಪಡಣೆ ಹೀಗೆ ಡ್ರೋನ್‌ಗಳಿಂದ ಹಲವು ಉಪಯೋಗಗಳಿವೆ. ರೈತರಿಗೆ ಅದರಲ್ಲೂ ಮಹಿಳಾ ರೈತರಿಗೆ ಡ್ರೋನ್‌ಗಳನ್ನು ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ನಮೋ ಡ್ರೋನ್ ದೀದಿ ಯೋಜನೆ ಜಾರಿಗೆ ತಂದಿದೆ. ಕೈಗಳಿಂದ ಕೀಟನಾಶಕಗಳು ಮತ್ತು ರಸಗೊಬ್ಬರಗಳನ್ನು ಸಿಂಪಡಿಸುವುದು ಅಪಾಯ ತಂದೊಡ್ಡುತ್ತವೆ. ಡ್ರೋನ್‌ಗಳು ಈ ಅಪಾಯಗಳನ್ನು ಕಡಿಮೆ ಮಾಡುತ್ತದೆ ಮತ್ತು ದಕ್ಷತೆಯನ್ನು ಹೆಚ್ಚಿಸುತ್ತದೆ. ಅಲ್ಲದೆ ಬೆಳೆ ಇಳುವರಿ ಹೆಚ್ಚಳ ಹಾಗೂ ವೆಚ್ಚವನ್ನು ಕಡಿಮೆ ಮಾಡುತ್ತದೆ.
ಮಹಿಳೆಯರಿಗೆ ತರಬೇತಿ
ಸ್ವಸಹಾಯ ಗುಂಪುಗಳ ಸದಸ್ಯರಲ್ಲಿ ಒಬ್ಬರಿಗೆ ಕೃಷಿ ಉದ್ದೇಶಗಳಲ್ಲಿ ಡ್ರೋನ್ ಹಾರಾಟ ಕೌಶಲ, ಪೋಷಕಾಂಶ ಮತ್ತು ಕೀಟನಾಶಕ ಸಿಂಪಡಣೆಯ ಬಗ್ಗೆ ತರಬೇತಿ ನೀಡಲಾಗುತ್ತದೆ. ಇನ್ನೊಬ್ಬ ಸದಸ್ಯರಿಗೆ ಡ್ರೋನ್ ತಂತ್ರಜ್ಞರಾಗಿ ತರಬೇತಿ ನೀಡಲಾಗುತ್ತದೆ. ಇದು ಅವರಿಗೆ ಡ್ರೋನ್ ನಿರ್ವಹಿಸಲು ಮಾತ್ರವಲ್ಲದೆ ಅದನ್ನು ದುರಸ್ತಿ ಮಾಡಲು ಮತ್ತು ನಿರ್ವಹಿಸಲು ನೆರವಾಗುತ್ತದೆ.
ಯೋಜನೆ ಉದ್ದೇಶ
ಕೃಷಿ ಕ್ಷೇತ್ರಕ್ಕೆ ಹೊಸ ರೂಪು ಹಾಗೂ ಉತ್ತೇಜನ ನೀಡುವುದು, ಮಹಿಳೆಯರಿಗೆ ಸ್ವ-ಉದ್ಯೋಗ ಮತ್ತು ಆದಾಯಕ್ಕೆ ದಾರಿ ಮಾಡಿಕೊಡುವುದು ಈ ಯೋಜನೆಯ ಉದ್ದೇಶ. ಕಳೆದ ಎರಡು ವರ್ಷಗಳ ಯಶಸ್ವಿ ಪ್ರಗತಿಯ ನಂತರ ಕುಟುಂಬಶ್ರೀ ಮಿಷನ್ ಯೋಜನೆಯನ್ನು ಮತ್ತಷ್ಟು ವಿಸ್ತರಿಸಲು ಪ್ರಯತ್ನಿಸಲಾಗುತ್ತಿದೆ. ಡ್ರೋನ್ ದೀದಿ ಸೇವೆಯ ಅಗತ್ಯವಿರುವ ರೈತರು ಕಾಸರಗೋಡಿನಲ್ಲಿರುವ ಕುಟುಂಬಶ್ರೀ ಜಿಲ್ಲಾ ಮಿಷನ್ ಸಂಪರ್ಕಿಸಬಹುದಾಗಿದೆ.
ಜಿಲ್ಲೆಯಲ್ಲಿ ಈಗ ಏಳು ಮಂದಿ ಏಳು ಡ್ರೋನ್‌ಗಳನ್ನು ಬಳಸಿ ಔಷಧ ಸಿಂಪಡಿಸಲಾಗುತ್ತಿದೆ. ಸಿಪಿಸಿಆರ್‌ಐ ಮತ್ತು ಕೇರಳ ತಾಂತ್ರಿಕ ವಿವಿ ಸಹಾಯದಿಂದ ಡ್ರೋನ್ ನಿರ್ವಹಣೆ ತರಬೇತಿ ನೀಡಲಾಗುತ್ತದೆ. ಎರಡು ವರ್ಷಗಳ ಹಿಂದೆ ಅನುಷ್ಠಾನಕ್ಕೆ ಬಂದ ಈ ಯೋಜನೆ ಯಶಸ್ವಿಯಾಗಿದೆ. ಪರಪ್ಪ ಹಾಗೂ ಕಾರಡ್ಕ ಬ್ಲಾಕ್ ವ್ಯಾಪ್ತಿಯಲ್ಲಿ ಈ ಯೋಜನೆ ಹೆಚ್ಚು ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಮಂಜೇಶ್ವರ ತಾಲೂಕು ವ್ಯಾಪ್ತಿಗೂ ವಿಸ್ತರಿಸುವ ಚಿಂತನೆಯಿದೆ.
— ಆದಿರಾ, ಕುಟುಂಬಶ್ರೀ ಜಿಲ್ಲಾ ಕಾರ್ಯಕ್ರಮ ಹಾಗೂ ಕೃಷಿ ವಿಭಾಗ ಅಧಿಕಾರಿ.