ಇಂದ್ರಾಳಿಯ ರೈಲ್ವೆ ಮೇಲ್ಸೇತುವೆಯ ಬಳಿ ಕಲ್ಲುಗಳನ್ನೇರಿ ಗೋಡೆ ದಾಟಿ ರಸ್ತೆಯ ಇನ್ನೊಂದು ಕಡೆ ಸಾಗುತ್ತಿರುವ ಪ್ರಯಾಣಿಕರು.
ನಿಲ್ದಾಣಕ್ಕೆ ತೆರಳಲು ಜನಸಾಮಾನ್ಯರ ಹೆಣಗಾಟ
ರಾಜ್ಯದ ಕರಾವಳಿ ಭಾಗದಲ್ಲಿ ಉಡುಪಿಯನ್ನು 'ಬುದ್ಧಿವಂತರ ಜಿಲ್ಲೆ' ಎಂದು ಕರೆಯುತ್ತಾರೆ. ಇಲ್ಲಿನ ಜನನಾಯಕರೂ ಸಹ ತಮ್ಮ ಭಾಷಣದಲ್ಲೂ ಅದನ್ನೇ ಉಲ್ಲೇಖಿಸುತ್ತಾರೆ. ಆದರೆ, ಕೆಲವೊಂದು ಅಗತ್ಯ ಹಾಗೂ ಕನಿಷ್ಠ ಸೌಲಭ್ಯ ಪೂರೈಸಲಾಗದ ನಿರ್ಲಕ್ಷ್ಯ ಇಲ್ಲಿನ ಜಿಲ್ಲಾಡಳಿತಕ್ಕಿದೆ.
ಸಮುದ್ರವೂ ಸೇರಿದಂತೆ ಹಲವು ಪ್ರವಾಸಿ ತಾಣ ಹಾಗೂ ದೇವಾಲಯಗಳ ನಗರಿ ಉಡುಪಿಗೆ ರೈಲ್ವೆಯ ಮೂಲಕ ನಿತ್ಯವೂ ಸಾವಿರಾರು ಪ್ರವಾಸಿಗರು, ಪ್ರಯಾಣಿಕರು ಆಗಮಿಸುತ್ತಾರೆ. ಆದರೆ, ರೈಲ್ವೆ ನಿಲ್ದಾಣದಿಂದ ಬರುವ ಅಥವಾ ನಿಲ್ದಾಣಕ್ಕೆ ಹೋಗುವವರಿಗೆ ಸೂಕ್ತ ಸಂಪರ್ಕವಿಲ್ಲದೆ ಮೂರ್ನಾಲ್ಕು ತಿಂಗಳಿಂದ ಪರದಾಡುವಂತಾಗಿದೆ.
ಸ್ವಂತ ವಾಹನ ಇದ್ದವರು ಅಥವಾ ಆಟೋ ಮೂಲಕ ಬರುವ ಪ್ರಯಾಣಿಕರಿಗೆ ರೈಲ್ವೆ ನಿಲ್ದಾಣಕ್ಕೆ ಹೋಗಲು ತೊಂದರೆಯಿಲ್ಲ. ಆದರೆ, ಬಸ್ ಮೂಲಕ ಬಂದು ಇಂದ್ರಾಳಿಯಲ್ಲಿ ಇಳಿಯುವವರಿಗೆ ಹಾಗೂ ನಿಲ್ದಾಣದಿಂದ ಬಂದು ಮಣಿಪಾಲದ ಕಡೆಗೆ ಹೋಗುವವರಿಗೆ ಕಷ್ಟವಾಗುತ್ತಿದೆ. ಇಂದ್ರಾಳಿ ಮೇಲ್ಸೇತುವೆಯ ಬಳಿ, ಮಸೀದಿಯ ಎದುರು ರಸ್ತೆ ದಾಟಿ, ಚತುಷ್ಪಥ ರಸ್ತೆಯ ಇಬ್ಭಾಗ ಮಾಡಿದ ಗೋಡೆ ಏರಿ ಅಪಾಯಕರ ರೀತಿಯಲ್ಲಿ ಸಾಗಬೇಕಿದೆ.
ವೃದ್ಧರು ಹಾಗೂ ಮಹಿಳೆಯರು ಇಲ್ಲಿನ ಅವ್ಯವಸ್ಥೆಯಿಂದ ಪರದಾಡುವಂತಾಗಿದೆ. ಲಗೇಜ್ ಸಮೇತ ಚಿಕ್ಕ ಮಕ್ಕಳೊಂದಿಗೆ ಬರುವ ಮಹಿಳೆಯರು ನಿತ್ಯ ತೊಂದರೆ ಅನುಭವಿಸುವಂತಾಗಿದೆ. ರಸ್ತೆ ಇಬ್ಭಾಗ ಮಾಡಿರುವ ಗೋಡೆಯ ಕೆಳಗೆ ಒಂದರ ಮೇಲೊಂದು ಕಲ್ಲು ಇಟ್ಟಿದ್ದು, ಭಯದಿಂದಲೇ ಅದರ ಮೇಲೆ ಕಾಲಿಟ್ಟು, ಗೋಡೆ ಏರಿ ಅಥವಾ ಇಳಿದು ಮುಂದೆ ಸಾಗಬೇಕಿದೆ. ಕಲ್ಲನ್ನೇರಲು ಆಗದಿದ್ದವರು ಇಂದ್ರಾಳಿಯವರೆಗೆ ಅಥವಾ ಎಂಜಿಎಂ ಕಾಲೇಜಿನವರೆಗೆ ಮತ್ತೆ ನಡೆದು ಸುತ್ತು ಬಳಸಿ ಸಾಗಬೇಕಿದೆ.
ಶಾಲೆಗೆ ಬರುವ ಮಕ್ಕಳಿಗೂ ತೊಂದರೆ
ಇಂದ್ರಾಳಿಯಲ್ಲಿ ಅಂತೂ-ಇಂತೂ ಒಂಬತ್ತು ವರ್ಷದ ಬಳಿಕ ರೇಲ್ವೆ ಮೇಲ್ಸೇತುವೆ (ಗರ್ಡರ್ ಬ್ರಿಡ್ಜ್) ಕಾಮಗಾರಿ ಮುಗಿದು ಸಂಚಾರಕ್ಕೆ ಮುಕ್ತವಾಗಿದೆ. ಆದರೆ, ಅಲ್ಲಿಯೇ ಇದ್ದ ಸಗ್ರಿ ವಾರ್ಡ್ ಸಂಪರ್ಕಿಸುವ ಕ್ರಾಸ್ ಶಾಶ್ವತವಾಗಿ ಬಂದ್ ಆಗಿದೆ. ಅಲ್ಲಿಗೆ ತೆರಳುವ ಜನರೆಲ್ಲ ಸುತ್ತುಬಳಸಿ ಸಾಗುತ್ತಿದ್ದಾರೆ. ಗರ್ಡರ್ ಸೇತುವೆಯ ಪಕ್ಕದಲ್ಲೇ ಇಂದ್ರಾಳಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ಇದ್ದು, ಬಸ್ನ ಮೂಲಕ ಆಗಮಿಸುವ ಮಕ್ಕಳೂ ಸಹ ಇಲ್ಲಿಯೇ ಕಲ್ಲುಗಳನ್ನೇರಿ ಗೋಡೆ ಹತ್ತಿಯೇ ಶಾಲೆಗೆ ತೆರಳಬೇಕು. ಜನರು, ಮಕ್ಕಳೂ ಸಹ ಬಿದ್ದು ಸಣ್ಣ-ಪುಟ್ಟ ಗಾಯ ಮಾಡಿಕೊಳ್ಳುತ್ತಿದ್ದಾರೆ. ಇಲ್ಲೊಂದು ಸೂಕ್ತ ವ್ಯವಸ್ಥೆ ಆಗಬೇಕು ಎನ್ನುತ್ತಾರೆ ಸಮಾಜ ಸೇವಕ ಗಣೇಶರಾಜ್ ಸರಳಬೆಟ್ಟು.
ಸಮರ್ಪಕವಾಗಿ ಮೆಟ್ಟಿಲು ನಿರ್ಮಿಸಿ
ಇದೀಗ ಕಲ್ಲು ಏರಿ ಗೋಡೆ ದಾಟುವ ಸ್ಥಳದಲ್ಲೇ ಮೂರು ಸಾಲಿನ ಮೆಟ್ಟಿಲು ನಿರ್ಮಿಸಿ, ಎರಡೂ ಕಡೆಗಳಲ್ಲಿ ಆಧಾರಕ್ಕಾಗಿ ಸ್ಟೀಲ್ ರಾಡ್ ಅಳವಡಿಸಿದರೆ ಜನರು ಸುಲಭವಾಗಿ ರಸ್ತೆ ದಾಟಿ ತೆರಳಬಹುದಾಗಿದೆ. ಕೋಟ್ಯಂತರ ರೂ. ಅನುದಾನದಲ್ಲಿ ಗರ್ಡರ್ ಬ್ರಿಡ್ಜ್ ನಿರ್ಮಿಸಿರುವಾಗ 10ರಿಂದ 15 ಸಾವಿರ ರೂ. ವ್ಯಯಿಸಿ ವ್ಯವಸ್ಥಿತವಾಗಿ ಮೆಟ್ಟಿಲು ನಿರ್ಮಿಸಲು ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಅಸಾಧ್ಯವೇ?
ನಾನು ಮುಂಬಯಿಯಿಂದ ರೈಲ್ವೆಯಲ್ಲಿ ಬಂದೆ. ಕಾರ್ಕಳಕ್ಕೆ ಹೋಗಬೇಕು. ಇಲ್ಲಿ ರಸ್ತೆ ದಾಟಿ ಆಚೆ ಹೋಗಲು ಸ್ಥಳವೇ ಇಲ್ಲ. ಇಷ್ಟೊಂದು ಲಗೇಜ್ ಇದೆ. ಇಲ್ಲಿ ಕಲ್ಲು ಹತ್ತಿ, ಗೋಡೆ ಏರಿ ದಾಟಬೇಕು. ಚಿಕ್ಕ ಮಕ್ಕಳಾದರೆ ಹತ್ತಿಹೋಗಬಹುದು. ನಮ್ಮಂತಹ ವಯಸ್ಸಾದವರು ಈ ರೀತಿ ಹೋಗಲು ಸಾಧ್ಯವೇ? ಉಡುಪಿಯಲ್ಲಿ ಇದೆಂತಹ ಅವ್ಯವಸ್ಥೆ?