ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗಾಗಿ ಪೆರಿಯಾದಲ್ಲಿ ಜಿಲ್ಲಾಧಿಕಾರಿ ನೇತೃತ್ವದ ತಂಡ ಸ್ಥಳಪರಿಶೀಲನೆ ನಡೆಸಿತು.
ಕಾಸರಗೋಡು: ಜಿಲ್ಲೆಯಲ್ಲಿ ‘ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ’(ಎಐಐಎಂಎಸ್) ಸ್ಥಾಪಿಸಲು ಜಿಲ್ಲೆಯ ಪೆರಿಯಾದಲ್ಲಿರುವ ‘ಕೇರಳ ತೋಟಗಾರಿಕಾ ನಿಗಮ’(ಪಿಸಿಕೆ)ದ ಅಧೀನದಲ್ಲಿರುವ ಭೂಮಿ ಅತ್ಯಂತ ಸೂಕ್ತ ಸ್ಥಳವಾಗಿದೆ ಎಂದು ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ಸಮಗ್ರ ವರದಿಯಲ್ಲಿ ತಿಳಿಸಿದ್ದಾರೆ.
ವರದಿಯನ್ನು ಆರೋಗ್ಯ ಇಲಾಖೆಯ ಕಾರ್ಯದರ್ಶಿಗೆ ಸಲ್ಲಿಸಲಾಗಿದೆ. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಹಾಗೂ ರಾಜ್ಯ ಸರ್ಕಾರದ ಸೂಚನೆಗಳನ್ವಯ ಜಿಲ್ಲಾಧಿಕಾರಿ ಸ್ಥಳಕ್ಕೆ ಖುದ್ದು ಭೇಟಿ ನೀಡಿದ ನಂತರ, ಹತ್ತು ದಿನಗಳ ಅವಧಿಯಲ್ಲಿ ವಿವರವಾದ ಪ್ರಸ್ತಾವನೆಯನ್ನು ಸಿದ್ಧಪಡಿಸಿದ್ದಾರೆ.
ಏಮ್ಸ್ ಮಾದರಿಯ ವೈದ್ಯಕೀಯ ಕಾಲೇಜು ಮತ್ತು ಸೂಪರ್-ಸ್ಪೆಷಾಲಿಟಿ ಆಸ್ಪತ್ರೆ ಆರಂಭಕ್ಕೆ ಕೇಂದ್ರ ಸರ್ಕಾರ ನಿಗದಿಪಡಿಸಿರುವ ಎಲ್ಲ ಮಾನದಂಡಗಳನ್ನು ಕಾಸರಗೋಡು ಜಿಲ್ಲೆಯ ಪೆರಿಯಾ ಒಳಗೊಂಡಿದೆ. ಈ ಪ್ರದೇಶದಲ್ಲಿ 200 ಎಕರೆ ಸುಸಜ್ಜಿತ ಭೂಮಿ ಲಭ್ಯತೆ, ರಸ್ತೆ ಸಂಪರ್ಕ ಹಾಗೂ ಸಮರ್ಪಕ ನೀರು ಮತ್ತು ವಿದ್ಯುತ್ ಪೂರೈಕೆ ಸೌಲಭ್ಯ ಹೊಂದಿಗೆ ಎಂದು ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ರಾಜ್ಯ ಸರ್ಕಾರದ ಅಧೀನದಲ್ಲಿ ಪೆರಿಯಾದಲ್ಲಿರುವ ‘ಪ್ಲಾಂಟೇಷನ್ ಕಾರ್ಪೊರೇಷನ್ ಆಫ್ ಕೇರಳ’(ಪಿಸಿಕೆ) ಬ್ಲಾಕ್‌ಗಳಿಗೆ ಜಿಲ್ಲಾಧಿಕಾರಿ ನೇತೃತ್ವದ ಅಧಿಕಾರಿಗಳ ತಂಡ ಖುದ್ದು ಭೇಟಿ ನೀಡಿತ್ತು.