ಉಡುಪಿ: ದೇಶದಲ್ಲಿರುವ ವಿವಿಧ ಕಲೆಗಳ ಬಗ್ಗೆ ಇಂದಿನ ಯುವ ಸಮೂಹ ತಿಳಿದುಕೊಳ್ಳುವುದು ಅತ್ಯಗತ್ಯ. ಏಕೆಂದರೆ, ಇತರೆಲ್ಲ ದೇಶಗಳಿಗಿಂತ ನಮ್ಮ ದೇಶದ ಸಂಸ್ಕೃತಿಯು ಉತ್ಕೃಷ್ಟವಾಗಿದೆ. ಯಕ್ಷಗಾನ ಸ್ಪರ್ಧೆಯಿಂದ ವಿದ್ಯಾರ್ಥಿಗಳಿಗೆ ಪೌರಾಣಿಕ ಜ್ಞಾನ, ಪರಂಪರೆಯ ಅರಿವಿನಿಂದ ಅಧ್ಯಾತ್ಮದ ಸೆಳೆತ ಹೆಚ್ಚಾಗಿ ಸಾಧನೆಯ ಮಾರ್ಗ ಪ್ರಾಪ್ತವಾಗುತ್ತದೆ ಎಂದು ಶ್ರೀ ಪೂರ್ಣಪ್ರಜ್ಞ ಶಿಕ್ಷಣ ಸಮೂಹ ಸಂಸ್ಥೆಯ ಅಧ್ಯಕ್ಷ ಹಾಗೂ ಅದಮಾರು ಮಠದ ಕಿರಿಯ ಯತಿ ಈಶಪ್ರಿಯ ತೀರ್ಥ ಶ್ರೀಪಾದರು ನುಡಿದರು.
ಉಡುಪಿಯ ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜ್ನ ವಜ್ರಮಹೋತ್ಸವದ ಸಂದರ್ಭದಲ್ಲಿ ಯಕ್ಷಗಾನ ಅಕಾಡೆಮಿ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಯಕ್ಷಗಾನ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಆಶೀರ್ವಚನ ನೀಡಿದರು.
ಶೀಕ್ಷೇತ್ರ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಆನುವಂಶಿಕ ಅರ್ಚಕ ಹರಿನಾರಾಯಣ ಅಸ್ರಣ್ಣ ಅವರು ಯಕ್ಷಗಾನ ಕಲೆ ಹಾಗೂ ವಿಶೇಷತೆ ಕುರಿತು ಮಾತನಾಡಿದರು. ಉದಯೋನ್ಮುಖ ಪ್ರತಿಭೆ ಶ್ರೀರಕ್ಷಾ ಹೆಗಡೆ ಸಿದ್ಧಾಪುರ ಅವರಿಗೆ ಯಕ್ಷ ಪ್ರತಿಭಾ ಗೌರವ ನೀಡಿ ಸನ್ಮಾನಿಸಲಾಯಿತು.
ಶಾಸಕ ಯಶ್ಪಾಲ್ ಸುವರ್ಣ, ಉಡುಪಿ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರು, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಉಡುಪಿ ವಿಶ್ವನಾಥ ಶೆಣೈ, ಕಾಲೇಜ್ನ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಸಿಎ ಟಿ.ಪ್ರಶಾಂತ ಹೊಳ್ಳ, ಪ್ರಾಂಶುಪಾಲ ಡಾ.ಚಂದ್ರಕಾಂತ ಭಟ್ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಕಾಲೇಜ್ನ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳಿಂದ ರುಕ್ಮಿಣಿ ಕಲ್ಯಾಣ ಯಕ್ಷಗಾನ ಪ್ರದರ್ಶನಗೊಂಡಿತು.
ಜಿಲ್ಲೆಯ ಆರು ಪದವಿ ಕಾಲೇಜ್ಗಳು ಯಕ್ಷಗಾನ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜ್ ಪ್ರಥಮ ಸ್ಥಾನ ಗಳಿಸಿತು. ಬ್ರಹ್ಮಾವರದ ಎಸ್.ಎಂ.ಎಸ್. ಕಾಲೇಜ್ ದ್ವಿತೀಯ, ಉಡುಪಿ ಎಂಜಿಎಂ ಕಾಲೇಜ್ ತೃತೀಯ ಸ್ಥಾನ ಗಳಿಸಿ ಬಹುಮಾನ ಸ್ವೀಕರಿಸಿದವು. ತೀರ್ಪುಗಾರರಾಗಿ ಹಾವಂಜೆ ಮಂಜುನಾಥಯ್ಯ, ಸುಬ್ರಹ್ಮಣ್ಯ ಪ್ರಸಾದ ಮುದ್ರಾಡಿ ಹಾಗೂ ಪ್ರತೀಶ ಬ್ರಹ್ಮಾವರ ಸಹಕರಿಸಿದರು.