ಸಂಚಾರಕ್ಕೆ ಅಯೋಗ್ಯವಾಗಿರುವ ಅಮ್ಟಾಡಿ ಗ್ರಾಮದ ಪಚ್ಚಿನಡ್ಕ-ನೋರ್ಣಡ್ಕ ರಸ್ತೆ. 
ಉಡುಪಿ

ಡಾಂಬರು ಕಾಣದ ಪಚ್ಚಿನಡ್ಕ-ನೋರ್ಣಡ್ಕ ರಸ್ತೆ

ಬಂಟ್ವಾಳ: ಅಮ್ಟಾಡಿ ಗ್ರಾಮದ ಪಚ್ಚಿನಡ್ಕ-ನೋರ್ಣಡ್ಕ ರಸ್ತೆಯಲ್ಲಿ ಕೆಸರು ತುಂಬಿಕೊಂಡು ರಸ್ತೆ ಸಂಪೂರ್ಣ ಅಧ್ವಾನಗೊಂಡಿದೆ. ಈ ರಸ್ತೆಯಲ್ಲಿ ಡಾಂಬರು ಕಿತ್ತು ಹೋಗಿದ್ದು ಕೆಸರಿನಿಂದ ಸಂಚಾರ ದುಸ್ತರವಾಗಿದೆ.
ಪಚ್ಚಿನಡ್ಕದಿಂದ ಕೆಂಪುಗುಡ್ಡೆ, ಅಜೆಕಲ ಹಾಗೂ ಬಂಟ್ವಾಳ ಬೈಪಾಸ್‌ಗೆ ಸಂಪರ್ಕ ಕಲ್ಪಿಸುವ ಸುಲಭ ಮಾರ್ಗವಾಗಿದ್ದ ಈ ರಸ್ತೆ ಇಂದು ವಾಹನ ಸಂಚಾರಕ್ಕೆ ಅಯೋಗ್ಯವಾಗಿದೆ. ದ್ವಿಚಕ್ರ ವಾಹನ ಸವಾರರು ಎಲ್ಲಿ ಜಾರಿಬೀಳುತ್ತೇವೆಯೋ ಎನ್ನುವ ಭಯದಲ್ಲೇ ವಾಹನ ಚಲಾಯಿಸಬೇಕಾಗಿದೆ. ಮಳೆಗೆ ರಸ್ತೆಯ ಇನ್ನಷ್ಟು ಹದಗೆಟ್ಟು ಪ್ರಯಾಣ ನರಕಯಾತನೆಯಾಗಿದೆ.
ಈ ರಸ್ತೆಯನ್ನು ಸ್ಥಳೀಯ ನೂರಾರು ಕುಟುಂಬಗಳು ಅವಲಂಬಿಸಿವೆ. ಈ ರಸ್ತೆಯಲ್ಲಿ ಸಂಚರಿಸುವ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಿಗಳು, ಹಿರಿಯ ನಾಗರಿಕರು ಹಾಗೂ ಮಹಿಳೆಯರು ಪರದಾಡುವಂತಾಗಿದೆ. ರಸ್ತೆಯ ದುಸ್ಥಿತಿಯ ಬಗ್ಗೆ ಸಾರ್ವಜನಿಕರು ಹಲವು ಬಾರಿ ಸಂಬಂಧಪಟ್ಟವರ ಗಮನಕ್ಕೆ ತಂದರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಕಳೆದ ಕೆಲವು ದಿನಗಳಿಂದ ಪಚ್ಚಿನಡ್ಕ-ನೋರ್ಣಡ್ಕ ರಸ್ತೆಯಲ್ಲೊಂದು ಕೆಸರ್‌ಡೊಂಜಿ ದಿನ ಎನ್ನುವ ವಿಡಂಬಣೆಯ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಮೂಲಸೌಲಭ್ಯವಾದ ಸಂಪರ್ಕ ರಸ್ತೆಯ ದುಸ್ಥಿತಿಯಿಂದಾಗಿರುವ ಜನರ ಆಕ್ರೋಶ, ಆಡಳಿತ ವ್ಯವಸ್ಥೆಯ ನಿರ್ಲಕ್ಷೃ ಪೋಸ್ಟರ್ ಮೂಲಕ ಹೊರಹೊಮ್ಮಿದೆ. ಅತಿ ಕೆಟ್ಟ ರಸ್ತೆ, ಸಾರ್ವಜನಿಕರು ಎಚ್ಚರಿಕೆಯಿಂದ ಸಂಚರಿಸಿ, ಪ್ರಯಾಣಿಕರ ಜೀವಕ್ಕೆ ಅಪಾಯ ಒಕ್ಕಣೆಯ ಪೋಸ್ಟರ್‌ಗಳು ವೈರಲ್ ಆಗುತ್ತಿವೆ.

ಈ ರಸ್ತೆಯಲ್ಲಿ ಪ್ರತಿದಿನ ಸಂಚರಿಸುವವರು ಮಾತ್ರ ಇಲ್ಲಿನ ಕಷ್ಟ ಅರ್ಥ ಮಾಡಿಕೊಳ್ಳಬಹುದು. ರಸ್ತೆ ಸಂಪೂರ್ಣ ಹಾಳಾಗಿರುವುದರಿಂದ ದ್ವಿಚಕ್ರ ವಾಹನದಲ್ಲಿ ಹೋಗುವಾಗ ಯಾವ ಕ್ಷಣದಲ್ಲಿ ಜಾರಿಬೀಳುತ್ತೇವೋ ಎಂಬ ಭಯ ಇರುತ್ತದೆ. ಮಳೆಗಾಲದಲ್ಲಿ ಪರಿಸ್ಥಿತಿ ಇನ್ನೂ ಹದಗೆಡುತ್ತದೆ. ಮಣ್ಣು ಹಾಕಿ ಹೋಗುವುದು ಸಮಸ್ಯೆಗೆ ಪರಿಹಾರವಲ್ಲ. ಗುಣಮಟ್ಟದ ಡಾಂಬರು ರಸ್ತೆ ನಿರ್ಮಾಣ ಮಾಡಿ ಶಾಶ್ವತ ಪರಿಹಾರ ನೀಡಬೇಕು.

— ದಿನೇಶ್ ಸ್ಥಳೀಯ ನಿವಾಸಿ

ನಮ್ಮ ಭಾಗದ ಜನರಿಗೆ ಈ ರಸ್ತೆ ಜೀವನಾಡಿಯಾಗಿದೆ. ಆದರೆ ಈಗ ಇದು ರಸ್ತೆಯೋ, ಕೆಸರುಗುಂಡಿಯೋ ಎಂಬುದೇ ಗೊತ್ತಾಗದ ಸ್ಥಿತಿ ನಿರ್ಮಾಣವಾಗಿದೆ. ತರಕಾರಿ ತರಲು, ಮಕ್ಕಳನ್ನು ಶಾಲೆಗೆ ಕಳುಹಿಸಲು, ಆಸ್ಪತ್ರೆ ಅಥವಾ ಕಚೇರಿಗೆ ಹೋಗಲು ಪ್ರತಿದಿನ ತೊಂದರೆ ಅನುಭವಿಸುತ್ತಿದ್ದೇವೆ. ರಸ್ತೆ ಸ್ಥಿತಿ ನೋಡಿದರೆ ಮನೆಯಿಂದ ಹೊರಡಲು ಭಯವಾಗುತ್ತದೆ. ಸಂಬಂಧಪಟ್ಟವರು ನಮ್ಮ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಪರಿಹಾರ ಕಲ್ಪಿಸಬೇಕು.

— ಪ್ರೇಮಾ, ಗೃಹಿಣಿ