ಮೂಡುಬಿದಿರೆ ಗಾಣಿಗ ಸಮಾಜದಿಂದ ಆಟಿಡ್ ಕೆಸರ್ಡೊಂಜಿ ದಿನ ಕಾರ್ಯಕ್ರಮದಲ್ಲಿ ಕಾಂತಾವರ ಕ್ಷೇತ್ರದ ಧರ್ಮದರ್ಶಿ ಡಾ.ಜೀವಂಧರ್ ಬಲ್ಲಾಳ್ ಬಾರಾಡಿ ಬೀಡು ಅವರನ್ನು ಸನ್ಮಾನಿಸಲಾಯಿತು. ಕೃಷಿ ವಿಶ್ವವಿದ್ಯಾಲಯದ ಪದವೀಧರೆ ಭಕ್ತಿಶ್ರೀ ಆಚಾರ್ಯ, ಯಕ್ಷದೇಗುಲ ಸಂಸ್ಥಾಪಕ ಮಹಾವೀರ ಪಾಂಡಿ, ಸಂಘ ಅಧ್ಯಕ್ಷ ರಾಜೇಶ್ ಬಂಗೇರ ಮೊದಲಾದವರಿದ್ದರು.
ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ತುಳುನಾಡಿನ ಹಿರಿಯರು ವರ್ಷಕ್ಕೆ ಮೂರು ಬೆಳೆ ಬೆಳೆಯುವ ಮೂಲಕ ಮಣ್ಣಿನ ಲವತ್ತತೆ ಕಾಪಾಡಿಕೊಂಡಿದೆ. ಆ ಪರಂಪರೆಯನ್ನು ಮುಂದುವರಿಸುವ ಅಗತ್ಯವಿದೆ. ಕೃಷಿಯಲ್ಲಿ ಎಐ, ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಯುವ ಜನರನ್ನು ಕೃಷಿಯತ್ತ ಆಕರ್ಷಿಸಬಹುದು ಎಂದು ಕೃಷಿ ವಿಶ್ವವಿದ್ಯಾಲಯದ ಪದವೀಧರೆ ಭಕ್ತಿಶ್ರೀ ಆಚಾರ್ಯ ಹೇಳಿದರು.
ಸಪಲಿಗ ಮತ್ತು ಗಾಣಿಗ ಸೇವಾ ಸಂಘ, ಗಾಣಿಗ ಯುವಕ ವೇದಿಕೆ, ಮಹಿಳಾ ವೇದಿಕೆ ಬೆದ್ರ ಅವರ ಆಶ್ರಯದಲ್ಲಿ ಕಾಂತಾವರ ಬಾರಾಡಿ ಶಾಲೆ ಸಮೀಪದ ಗದ್ದೆಯಲ್ಲಿ ಭಾನುವಾರ ನಡೆದ ‘ಆಟಿಡ್ ಕೆಸರ್ಡೊಂಜಿ ದಿನ’ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಕಾಂತಾವರ ಕ್ಷೇತ್ರ ಧರ್ಮದರ್ಶಿ ಡಾ.ಜೀವಂಧರ್ ಬಲ್ಲಾಳ್ ಬಾರಾಡಿ ಬೀಡು ಕಾರ್ಯಕ್ರಮ ಉದ್ಘಾಟಿಸಿದರು. ಯಕ್ಷದೇಗುಲ ಸಂಸ್ಥಾಪಕ ಮಹಾವೀರ ಪಾಂಡಿ ಮಾತನಾಡಿದರು. ಸಂಘ ಅಧ್ಯಕ್ಷ ರಾಜೇಶ್ ಬಂಗೇರ ಅಧ್ಯಕ್ಷತೆ ವಹಿಸಿದ್ದರು. ಶ್ರೀ ನಾಗಬ್ರಹ್ಮ ಕ್ಷೇತ್ರ ಪುತ್ರನ್ ಆದಿ ಮೂಲಸ್ಥಾನದ ಅಧ್ಯಕ್ಷ ಸೂರ್ಯ ಪುತ್ರನ್, ಸುಳ್ಯ ಅಗ್ನಿಶಾಮಕ ಠಾಣಾಧಿಕಾರಿ ಕಿರಣ್ ಕುಮಾರ್ ಎಸ್. ಶುಭಹಾರೈಸಿದರು. ಮಹಿಳಾ ಘಟಕ ಅಧ್ಯಕ್ಷೆ ರೂಪಾ ಪ್ರದೀಪ್, ಯುವ ಘಟಕ ಅಧ್ಯಕ್ಷ ಸತೀಶ್ ಸಪಳಿಗ ಬಾರಾಡಿ, ವಿದ್ಯಾರ್ಥಿ ಸಂಘ ಅಧ್ಯಕ್ಷ ಪ್ರೀತಮ್ ಪುತ್ರನ್ ಉಪಸ್ಥಿತರಿದ್ದರು.
ಮಾಧವ ಮಾರ್ನಾಡು ಅವರಿಗೆ ಅಪಘಾತ ನಿಧಿ ಹಸ್ತಾಂತರಿಸಲಾಯಿತು. ಕಳೆದ ವರ್ಷ ವಿತರಿಸಿದ್ದ ಸಸಿಗಳನ್ನು ಉತ್ತಮವಾಗಿ ಪೋಷಿಸಿದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ರಾಜೇಶ್ ಬಂಗೇರ ಸ್ವಾಗತಿಸಿದರು. ಜಗನ್ನಾಥ ಸಪಳಿಗ ಸನ್ಮಾನ ಪತ್ರ ವಾಚಿಸಿದರು. ರಶ್ಮಿತಾ ಬಂಗೇರ ನಿರೂಪಿಸಿದರು. ಪ್ರತಾಪ್ ಬೆಟ್ಕೇರಿ ವಂದಿಸಿದರು.