ಕೃಷ್ಣಾಷ್ಟಮಿ ಉತ್ಸವದ ಆಮಂತ್ರಣ ಪತ್ರಿಕೆಯನ್ನು ಸುಬ್ರಹ್ಮಣ್ಯ ಠಾಣಾಧಿಕಾರಿ ಆಂಜನೇಯ ರೆಡ್ಡಿ ಬಿಡುಗಡೆ ಮಾಡಿದರು. ಪ್ರಮುಖರಾದ ಉಮೇಶ್ ಕೆ.ಎನ್., ರತ್ನಾಕರ ಸುಬ್ರಹ್ಮಣ್ಯ, ಡಾ.ರವಿ ಕಕ್ಕೆಪದವು, ರಾಜೇಶ್ ಎನ್.ಎಸ್. ಮತ್ತಿತರರು ಉಪಸ್ಥಿತರಿದ್ದರು.
ಸುಬ್ರಹ್ಮಣ್ಯ: ಭಗವದ್ಗೀತೆಯು ಜೀವನ ಮೌಲ್ಯಗಳ ಸಾರವನ್ನು ಹೊಂದಿದೆ. ಭಗವದ್ಗೀತೆ ಸಂದೇಶವು ಮನುಷ್ಯನ ಜೀವನಕ್ಕೆ ದಾರಿದೀಪವಾಗಿದೆ. ಗೀತೆಯನ್ನು ಓದಿ ಅರ್ಥೈಸಿಕೊಂಡು ಅವುಗಳನ್ನು ನಮ್ಮ ದೈನಂದಿನ ಬದುಕಿನಲ್ಲಿ ಅಳವಡಿಸಿಕೊಂಡಾಗ ಉತ್ತಮ ಸಮಾಜ ನಿರ್ಮಾಣವಾಗುತ್ತದೆ. ಧಾರ್ಮಿಕ ಮತ್ತು ಸಾಂಸ್ಕೃತಿಕ ಉತ್ಸವಗಳ ಆಚರಣೆಗಳು ಶಾಂತಿ, ಸೌಹಾರ್ದ ಮತ್ತು ಭಕ್ತಿಭಾವದಿಂದ ನಡೆಯಬೇಕು. ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರತಿಯೊಬ್ಬರೂ ಕಾನೂನು ಮತ್ತು ಶಿಸ್ತನ್ನು ಪಾಲಿಸುವ ಮೂಲಕ ಆಚರಣೆಯ ಘನತೆ ಕಾಪಾಡಬೇಕು ಎಂದು ಸುಬ್ರಹ್ಮಣ್ಯ ಠಾಣೆಯ ಉಪನಿರೀಕ್ಷಕ ಆಂಜನೇಯ ರೆಡ್ಡಿ ಹೇಳಿದರು.
ಸುಬ್ರಹ್ಮಣ್ಯ ಶ್ರೀಕೃಷ್ಣ ಜನ್ಮಾಷ್ಠಮಿ ಉತ್ಸವ ಸಮಿತಿಯ ಆಶ್ರಯದಲ್ಲಿ ಸುಬ್ರಹ್ಮಣ್ಯದಲ್ಲಿ ನಡೆಯುವ 22ನೇ ವರ್ಷದ ಮೊಸರು ಕುಡಿಕೆ ಉತ್ಸವದ ಆಮಂತ್ರಣ ಪತ್ರಿಕೆಯನ್ನು ಶನಿವಾರ ಕಾಶಿಕಟ್ಟೆ ಮಹಾಗಣಪತಿ ಸನ್ನಿಧಿಯಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು.
ಸಮಿತಿ ಅಧ್ಯಕ್ಷ ರತ್ನಾಕರ ಸುಬ್ರಹ್ಮಣ್ಯ, ಸ್ಥಾಪಕಾಧ್ಯಕ್ಷ ಉಮೇಶ್ ಕೆ.ಎನ್., ಪೂರ್ವಾಧ್ಯಕ್ಷರಾದ ರಾಜೇಶ್ ಎನ್.ಎಸ್., ಡಾ.ರವಿ ಕಕ್ಕೆಪದವು, ಲೋಕೇಶ್ ಬಿ.ಎನ್., ಲೋಕೇಶ್ ಎನ್.ಎಸ್., ದೀಪಕ್ ನಂಬಿಯಾರ್, ಪ್ರಕಾಶ್ ಸುಬ್ರಹ್ಮಣ್ಯ, ನಿತೀನ್ ಭಟ್ ನೂಚಿಲ, ವೇಣುಗೋಪಾಲ್ ಎನ್.ಎಸ್,. ಸಮಿತಿಯ ಉಪಾಧ್ಯಕ್ಷ ಭುವನೇಶ್ ಅಗೋಳಿಕಜೆ, ಮಹೇಶ್ ಗುಡ್ಡೆಮನೆ, ಕಾರ್ಯದರ್ಶಿ ಜಯರಾಮ್ ಎಚ್.ಎಲ್., ಸಹಕೋಶಾಧಿಕಾರಿ ಗಗನ್ ಅಗೋಳಿಕಜೆ, ಜತೆಕಾರ್ಯದರ್ಶಿ ಸುಹಾಸ್ ಎಚ್.ಎಸ್., ಟ್ರಸ್ಟ್ ಸದಸ್ಯರಾದ ದಿನೇಶ್ ಮೊಗ್ರ, ಉದಯ ಕುಮಾರ್ ನೂಚಿಲ ಉಪಸ್ಥಿತರಿದ್ದರು.
ಕಾಶಿಕಟ್ಟೆ ಶ್ರೀ ಮಹಾಗಣಪತಿ ಸನ್ನಿಧಿಗೆ ಆಮಂತ್ರಣ ಪತ್ರಿಕೆಯನ್ನು ಅರ್ಪಿಸಲಾಯಿತು. ದೇವಳದ ಅರ್ಚಕ ಶ್ರೀನಿವಾಸ್ ಭಟ್ ನೂಚಿಲ ದೇವರಿಗೆ ಪೂಜೆ ನೆರವೇರಿಸಿ ಕಾರ್ಯಕ್ರಮದ ಯಶಸ್ಸಿಗೆ ಪ್ರಾರ್ಥಿಸಿದರು. ನಂತರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳಕ್ಕೆ ತೆರಳಿ ಆಮಂತ್ರಣ ಪತ್ರಿಕೆಯನ್ನು ದೇವರಿಗೆ ಸಮರ್ಪಿಸಲಾಯಿತು. ಕುಕ್ಕೆ ದೇವಳದ ಅರ್ಚಕ ರಮೇಶ್ ನೂರಿತ್ತಾಯ ದೇವರಲ್ಲಿ ಪ್ರಾರ್ಥಿಸಿ ಪ್ರಸಾದ ನೀಡಿ ಹರಸಿದರು. ಶಿಷ್ಟಾಚಾರ ವಿಭಾಗದ ಪ್ರಮೋದ್ ಕುಮಾರ್.ಎಸ್. ಉಪಸ್ಥಿತರಿದ್ದರು.
ಧಾರ್ಮಿಕ ಆಚರಣೆಗಳು ನಮ್ಮ ಪರಂಪರೆ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಿಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಇಂತಹ ಕಾರ್ಯಕ್ರಮಗಳಲ್ಲಿ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಅರಿಯಬೇಕು.
— ಆಂಜನೇಯ ರೆಡ್ಡಿ, ಪೊಲೀಸ್ ಉಪನಿರೀಕ್ಷಕ