ಶ್ರೀ ಜನಾರ್ದನ ಸ್ವಾಮಿ ದೇವರ ಬ್ರಹ್ಮಕಲಶೋತ್ಸವದ ಅನ್ನಸಂತರ್ಪಣೆಗೆ ಉಜಿರೆಯಲ್ಲೇ ಬೆಳೆಸಿದ ಮಟ್ಟುಗುಳ್ಳವನ್ನು ಸಮರ್ಪಿಸಲಾಯಿತು. 
ಉಡುಪಿ

ಉಜಿರೆ ಬ್ರಹ್ಮಕಲಶೋತ್ಸದಲ್ಲಿ ‘ಮಟ್ಟುಗುಳ್ಳ’ದ ಘಮ

ಬೆಳ್ತಂಗಡಿ: ಉಜಿರೆ ಶ್ರೀ ಜನಾರ್ದನಸ್ವಾಮಿ ದೇವಸ್ಥಾನದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವ ಅನೇಕ ವಿಶೇಷತೆಗಳಿಂದ ನಾಡಿನ ಗಮನ ಸೆಳೆಯುತ್ತಿದೆ. ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಸಂದರ್ಭದಲ್ಲಿ ಅನ್ನಪ್ರಸಾದದಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ‘ಮಟ್ಟುಗುಳ್ಳ’ ಈಗ ಉಜಿರೆ ಬ್ರಹ್ಮಕಲಶೋತ್ಸವದ ಭೋಜನ ಪ್ರಸಾದಲ್ಲೂ ತನ್ನ ಘಮಲು ಬೀರುತ್ತಿದೆ.
ಶ್ರೀಕೃಷ್ಣ ದೇವರ ಮೂಲರೂಪನಾದ ಶ್ರೀ ಜನಾರ್ದನ ಸ್ವಾಮಿಗೆ ಮಟ್ಟುಗುಳ್ಳವನ್ನು ಸಮರ್ಪಿಸಲಾಗಿದೆ. ಈ ಮಟ್ಟುಗುಳ್ಳವನ್ನು ಉಜಿರೆಯಲ್ಲೇ ಬೆಳೆದಿದ್ದಾರೆಂಬುದು ಮತ್ತೊಂದು ವಿಶೇಷ.
ಉಡುಪಿ ಜಿಲ್ಲೆಯ ಮಟ್ಟು ಗ್ರಾಮದಲ್ಲಿ ಮಾತ್ರವೇ ಬೆಳೆಯುವ ಮಟ್ಟುಗುಳ್ಳ ತನ್ನ ವಿಶಿಷ್ಟ ರುಚಿಯಿಂದಲೇ ಪ್ರಸಿದ್ಧಿ ಪಡೆದಿದೆ. ಉಜಿರೆ ಬ್ರಹ್ಮಕಲಶದಲ್ಲಿ ಏನಾದರೂ ಹೊಸತನ ತರಬೇಕೆಂಬ ಉದ್ದೇಶದೊಂದಿಗೆ ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಭರತ್ ಕುಮಾರ್ ಅವರ ಜಮೀನಿನಲ್ಲಿ ಉಜಿರೆಯ ಜಯರಾಂ, ಅವರ ಪತ್ನಿ ಸುಮಾ ಹಾಗೂ ರೋಹಿತ್ ಅವರು ಉಡುಪಿಯ ಹೆಸರಾಂತ ಮಟ್ಟುಗುಳ್ಳವನ್ನು ಸಾವಯವ ಪದ್ಧತಿಯಲ್ಲಿ ಬೆಳೆದು ಉಜಿರೆ ಬ್ರಹ್ಮಕಲಶೋತ್ಸವಕ್ಕೆ ಅರ್ಪಿಸಿದ್ದಾರೆ.
ಉಡುಪಿಯ ಮಟ್ಟುವಿನಲ್ಲಿ ಬೆಳೆಯುವ ಮಟ್ಟುಗುಳ್ಳದ ಪೇಟೆಂಟ್ ಪಡೆದವರಿಂದ ಅನುಮತಿ ಪಡೆದು ಅಲ್ಲಿಂದ ಬೀಜಗಳನ್ನು ತಂದು ಉಜಿರೆಯಲ್ಲಿ ಅಂದಾಜು 1 ಎಕರೆ ಜಾಗದಲ್ಲಿ 250 ಗಿಡಗಳನ್ನು ಬೆಳೆಯಲಾಗಿದೆ. 3 ತಿಂಗಳು ಕಾಲ ಪೋಷಿಸಿ, 2 ಕ್ವಿಂಟಾಲ್‌ಗಿಂತಲೂ ಹೆಚ್ಚು ಮಟ್ಟುಗುಳ್ಳಗಳನ್ನು ಉಜಿರೆಯ ಬ್ರಹ್ಮಕಲಶದ ಅನ್ನಸಂತರ್ಪಣೆಗೆ ನೀಡಿದ್ದಾರೆ.

400 ವರ್ಷಗಳ ಇತಿಹಾಸ

ಶ್ರೀ ವಾದಿರಾಜ ತೀರ್ಥ ಶ್ರೀಪಾದರು 400 ವರ್ಷಗಳ ಹಿಂದೆ ಉಡುಪಿಯ ಮಟ್ಟು ಗ್ರಾಮದ ಬ್ರಾಹ್ಮಣರಿಗೆ ಬೀಜಗಳನ್ನು ನೀಡಿ ಬೆಳೆಯಲು ಹೇಳಿದರು. ಮೊದಲ ಫಸಲನ್ನು ಶ್ರೀಕೃಷ್ಣನಿಗೆ ನೈವೇದ್ಯ ಮಾಡಲಾಯಿತು. ಇದಕ್ಕೆ ವಾದಿರಾಜ ಗುಳ್ಳ ಎಂಬ ಹೆಸರೂ ಇದೆ. ಉಡುಪಿ ಪರ್ಯಾಯದಲ್ಲಿ ಶ್ರೀಕೃಷ್ಣ ದೇವರಿಗೂ, ಕೃಷ್ಣ ಭಕ್ತರಿಗೂ ಅತಿ ಮುಖ್ಯವಾಗಿ ಇರಬೇಕಾದ ಖಾದ್ಯವಾಗಿದೆ. ಮಟ್ಟುಗುಳ್ಳ ಕೇವಲ ತರಕಾರಿಯಾಗಿರದೆ ಶ್ರೀಕೃಷ್ಣನ ಪೂಜಾ ಪರಂಪರೆ ಭಾಗವಾಗಿದೆ. ಈ ಹಿನ್ನೆಲೆಯಲ್ಲಿ ಶ್ರೀಕೃಷ್ಣ ದೇವರ ಮೂಲ ರೂಪನಾದ ಶ್ರೀ ಜನಾರ್ದನ ಸ್ವಾಮಿಗೆ ಮಟ್ಟುಗುಳ್ಳವನ್ನು ಬೆಳೆದು ಅರ್ಪಿಸುವ ಜಯರಾಂ ಹಾಗೂ ರೋಹಿತ್ ತಂಡದ ಕನಸು ಸಾಕಾರಗೊಂಡಿದೆ.

ಹದಿಮೂರನೇ ಶತಮಾನದಲ್ಲಿ ದ್ವೈತ ಸಿದ್ಧಾಂತ ಪ್ರತಿಪಾದಕ ಶ್ರೀ ಮಧ್ವಾಚಾರ್ಯರು ಉಚ್ಛಭೂತಿಯೆಂದೇ ಕರೆಯಲ್ಪಡುತ್ತಿದ್ದ ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಳವನ್ನು ಸಂದರ್ಶಿಸಿದ್ದರು. ಉಡುಪಿ ಹಾಗೂ ಉಜಿರೆ ಕ್ಷೇತ್ರ ಅನಾದಿ ಕಾಲದಿಂದಲೂ ಅವಿನಾಭಾವ ಸಂಬಂಧ ಹೊಂದಿದೆ. ಇದೀಗ ಮಟ್ಟುಗುಳ್ಳನವನ್ನು ಉಜಿರೆಯಲ್ಲಿ ಬೆಳೆಸಿ ದೇವರಿಗೆ ಸಮರ್ಪಿಸುವ ಮೂಲಕ ಮತ್ತೊಮ್ಮೆ ಸಂಬಂಧ ಗಟ್ಟಿಗೊಳಿಸುವ ಕಾರ್ಯವಾಗಿದೆ.