ಗುತ್ಯಡ್ಕದಲ್ಲಿ ಉದ್ಘಾಟನೆಗೆ ಸಿದ್ಧಗೊಂಡ ಟವರ್. 
ಉಡುಪಿ

ಎಳನೀರು ಜನರ ಬಹು ವರ್ಷದ ಕನಸು ನನಸು

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಎಳನೀರು ಪ್ರದೇಶದ ಜನರ ಬಹು ವರ್ಷದ ಕನಸಾಗಿದ್ದ ಮೊಬೈಲ್ ಟವರ್ ಸೌಲಭ್ಯಕ್ಕೆ ಜು.19ರಂದು ಚಾಲನೆ ಸಿಗಲಿದೆ. ಬೆಳ್ತಂಗಡಿ ತಾಲೂಕಿನ ಹಾಗೂ ದ.ಕ. ಜಿಲ್ಲೆಯ ಕೊನೆಯ ಊರು, ಚಿಕ್ಕಮಗಳೂರಿಗೆ ತೀರಾ ಸಮೀಪದ ಸ್ಥಳವಾದ ಎಳನೀರು ಪ್ರದೇಶ ಅತ್ಯಂತ ದುರ್ಗಮವಾಗಿದೆ.
ಒಂದೊಮ್ಮೆ ಇಲ್ಲಿ ಯಾವುದೇ ಮೂಲ ಸೌಕರ್ಯಗಳಿಲ್ಲದೆ ಅಕ್ಷರಶಃ ಈ ಸ್ಥಳ ದ್ವೀಪದಂತಾಗಿತ್ತು. ಶಾಸಕ ಹರೀಶ್ ಪೂಂಜ ಸಮಾರೋಪಾದಿಯಲ್ಲಿ ಇಲ್ಲಿನ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಿದರು. ಅನಂತರದ ದಿನಗಳಲ್ಲಿ ರಸ್ತೆ ಕಾಂಕ್ರೀಟೀಕರಣ, ತಡೆಗೋಡೆ ರಚನೆ, ಮುಖ್ಯ ಸೇತುವೆ, ಕಿರು ಸೇತುವೆ ನಿರ್ಮಾಣ, ಕಿಂಡಿ ಅಣೆಕಟ್ಟು ರಚನೆ, ವಿದ್ಯುತ್ ಸೌಲಭ್ಯ ಮೊದಲಾದ ಸೌಲಭ್ಯಗಳನ್ನು ಜನರು ಕಾಣುವಂತಾಯಿತು.
600ಕ್ಕಿಂತ ಅಧಿಕ ಜನಸಂಖ್ಯೆ ಹೊಂದಿರುವ ಎಳನೀರು ಪ್ರದೇಶ ಕೋವಿಡ್ ಅವಧಿಯಲ್ಲಿ ದೇಶವೇ ಗುರುತಿಸುವಂತಾಗಿತ್ತು. ಇಲ್ಲಿ ಒಂದೇ ಒಂದು ಕೋವಿಡ್ ಪೀಡಿತರು ಪತ್ತೆಯಾಗಿರಲಿಲ್ಲ. ಎಳನೀರು ಪರಿಸರ ಸಂಸೆಯಿಂದ 5 ಕಿ.ಮೀ. ದಿಡುಪೆಯಿಂದ 8 ಕಿ.ಮೀ. ದೂರದಲ್ಲಿದೆ. ದಿಡುಪೆಯಿಂದ ಇಲ್ಲಿಗೆ ಹೋಗಲು ಮಳೆಗಾಲದಲ್ಲಿ ಸ್ಥಳೀಯರು ಹೊರತುಪಡಿಸಿ ಇತರರಿಗೆ ಅವಕಾಶ ಇರುವುದಿಲ್ಲ.

ಸಂಪರ್ಕಕ್ಕೆ ಪರದಾಡುತ್ತಿದ್ದ ಜನರು

ಎಳನೀರು ಅಲ್ಲದೆ ಸುತ್ತಲ ಪ್ರದೇಶಗಳಲ್ಲಿ ಸಾವಿರಾರು ಜನ ವಾಸಿಸುತ್ತಿದ್ದಾರೆ. ಆದರೆ ಈ ಭಾಗದ ಜನರಿಗೆ ಮೊಬೈಲ್ ಉಪಯೋಗಕ್ಕೆ ಬೇಕಾದ ಟವರ್ ವ್ಯವಸ್ಥೆ, ಯಾವುದೇ ನೆಟ್ವರ್ಕ್ ಸಿಗ್ನಲ್ ಇಲ್ಲದೆ ಅಗತ್ಯ ಸಂಪರ್ಕಕ್ಕೆ ಪರದಾಡುವ ಸ್ಥಿತಿ ಉಂಟಾಗಿತ್ತು. ಇದೀಗ ಇಲ್ಲಿನ ಗುತ್ಯಡ್ಕ ಪ್ರದೇಶದಲ್ಲಿ ಬಿಎಸ್ಸೆನ್ನೆಲ್ ಮೊಬೈಲ್ ಟವರ್ ನಿರ್ಮಾಣವಾಗಿದೆ. ಇದರಿಂದ ದಿಡುಪೆ, ಕಡಮಗುಂಡಿ, ಗುತ್ಯಡ್ಕ ಕುರೆಕಲ್ಲು, ಬಡಾಮನೆ, ಬಂಗಾರಪಲಿಕೆ, ಉಕ್ಕುಡ ಹಾಗೂ ಸಂಸೆಯ ಹಲವು ಪ್ರದೇಶದ ಗ್ರಾಹಕರಿಗೆ ಸಂಪರ್ಕಕ್ಕೆ ಅನುಕೂಲ ನೀಡಲಿದೆ. ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕ ಹರೀಶ್ ಪೂಂಜ ಭಾಗವಹಿಸಲಿದ್ದಾರೆ.

ಈ ಹಿಂದೆ ನಮ್ಮ ಕಡೆ ಲ್ಯಾಂಡ್‌ಲೈನ್ ಫೋನ್‌ಗಳಿದ್ದು ಅವು ಹೆಚ್ಚಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಕೆಲವು ವರ್ಷಗಳ ಹಿಂದೆ ಅವುಗಳೂ ಸಂಪೂರ್ಣ ಸ್ಥಗಿತಗೊಂಡವು. ಬಳಿಕ ಇಲ್ಲಿನ ಜನರಿಗೆ ಅಗತ್ಯ ಸಂಪರ್ಕ ಗಗನ ಕುಸುಮವಾಗಿತ್ತು. ಇದೀಗ ನಮ್ಮ ಎರಡು ದಶಕಗಳ ಮೊಬೈಲ್ ಟವರ್‌ನ ಕನಸು ನನಸಾಗಿದೆ. ಇದರಿಂದ ನಮ್ಮ ಪರಿಸರದ ಜನರ ಸಂಪರ್ಕಕ್ಕೆ ಹೆಚ್ಚಿನ ಅನುಕೂಲ ದೊರಕಲಿದೆ.

— ಪ್ರಕಾಶ್ ಜೈನ್ ಎಳನೀರು, ಮಾಜಿ ಅಧ್ಯಕ್ಷ, ಗ್ರಾಪಂ ಮಲವಂತಿಗೆ