ಹೆದ್ದಾರಿ ಅಗಲೀಕರಣ ಕಾಮಗಾರಿಗಾಗಿ ಬೆಳ್ತಂಗಡಿಯಲ್ಲಿ ತೆರವಾಗಲಿರುವ ಅಂಗಡಿಗಳು.
ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಪುಂಜಾಲಕಟ್ಟೆ-ಚಾರ್ಮಾಡಿ ನಡುವಿನ ಸುಮಾರು 32 ಕಿ.ಮೀ. ರಸ್ತೆ ಅಭಿವೃದ್ಧಿ ಕಾಮಗಾರಿ ಅಂತಿಮ ಹಂತ ತಲುಪುತ್ತಿದ್ದಂತೆ ಬೆಳ್ತಂಗಡಿ ಪಟ್ಟಣದ ಚಿತ್ರಣ ವೇಗವಾಗಿ ಬದಲಾಗುತ್ತಿದೆ. ಗ್ರಾಮೀಣ ಭಾಗಗಳಲ್ಲಿ ಬಹುತೇಕ ಪೂರ್ಣಗೊಂಡಿರುವ ಕಾಮಗಾರಿ ಇದೀಗ ಪಟ್ಟಣ ಪ್ರದೇಶಕ್ಕೆ ಕಾಲಿಟ್ಟಿದ್ದು, ರಸ್ತೆ ಅಗಲೀಕರಣಕ್ಕಾಗಿ ಕಟ್ಟಡಗಳ ತೆರವು ಕಾರ್ಯ ಭರದಿಂದ ಸಾಗುತ್ತಿದೆ. ಇದರೊಂದಿಗೆ ಹಲವು ದಶಕಗಳಿಂದ ಹೆದ್ದಾರಿ ಬದಿಯಲ್ಲಿ ವ್ಯಾಪಾರ ನಡೆಸುತ್ತಿದ್ದ ವರ್ತಕರ ಭವಿಷ್ಯ ತೂಗುಯ್ಯಾಲೆಯಲ್ಲಿದೆ.
ಬೆಳ್ತಂಗಡಿ ಸೇತುವೆ ಪ್ರದೇಶದಿಂದ ಚರ್ಚ್ ರಸ್ತೆವರೆಗೆ ಸುಮಾರು 2 ಕಿ.ಮೀ. ವ್ಯಾಪ್ತಿಯಲ್ಲಿರುವ ಹಲವು ವಾಣಿಜ್ಯ ಕಟ್ಟಡಗಳು, ಹೋಟೆಲ್‌ಗಳು, ಅಂಗಡಿಗಳು ಹಾಗೂ ರಸ್ತೆ ವ್ಯಾಪ್ತಿಗೆ ಬರುವ ಮನೆಗಳ ತೆರವು ಕಾರ್ಯ ನಡೆಯುತ್ತಿದೆ. ಹಲವು ವರ್ಷಗಳಿಂದ ಪಟ್ಟಣದ ಗುರುತಾಗಿದ್ದ ಕಟ್ಟಡಗಳು ಒಂದೊಂದಾಗಿ ಮಾಯವಾಗುತ್ತಿದ್ದು, ಬೆಳ್ತಂಗಡಿಯ ಹಳೆಯ ಸ್ವರೂಪ ಇತಿಹಾಸದ ಪುಟ ಸೇರುತ್ತಿದೆ. ಚರ್ಚ್ ರಸ್ತೆಯಿಂದ ಗುರುವಾಯನಕೆರೆ ಕಡೆಗಿನ ರಸ್ತೆ ಅಗಲೀಕರಣ ಕಾಮಗಾರಿ ಪೂರ್ಣಗೊಂಡಿದ್ದರೂ, ಸರ್ವೀಸ್ ರಸ್ತೆ ನಿರ್ಮಾಣ ಇನ್ನೂ ಬಾಕಿಯಿದೆ.
ವರ್ತಕರಿಗೆ ತೀವ್ರ ಸಂಕಷ್ಟ: ಹಲವು ವಷರ್ಗಳಿಂದ ವ್ಯಾಪಾರ ನಡೆಸುತ್ತಿದ್ದ ಅಂಗಡಿಗಳನ್ನು ಕಳೆದುಕೊಳ್ಳುತ್ತಿರುವ ವರ್ತಕರು ಹೊಸ ಜಾಗದ ಹುಡುಕಾಟದಲ್ಲಿದ್ದಾರೆ. ಇತ್ತೀಚೆಗಷ್ಟೇ ನವೀಕರಣಗೊಂಡಿದ್ದ ಕೆಲವು ಅಂಗಡಿಗಳೂ ತೆರವಾಗುತ್ತಿದ್ದು ವ್ಯಾಪಾರಿಗಳಿಗೆ ಹೆಚ್ಚುವರಿ ಆರ್ಥಿಕ ನಷ್ಟ ಉಂಟಾಗಿದೆ. ಹೆದ್ದಾರಿ ಅಭಿವೃದ್ಧಿ ಸಾರ್ವಜನಿಕ ಹಿತದೃಷ್ಟಿಯಿಂದ ಅಗತ್ಯವಾದರೂ, ಅದರ ಪರಿಣಾಮ ನೇರವಾಗಿ ಸಣ್ಣ ವ್ಯಾಪಾರಿಗಳ ಜೀವನೋಪಾಯದ ಮೇಲೆ ಬೀಳುತ್ತಿದೆ.
ರಸ್ತೆ ಅಗಲೀಕರಣಕ್ಕೆ ಪರ್ಯಾಯ ಮಾರ್ಗ ಕಂಡುಹಿಡಿದು ಈಗಿರುವ ಅಂಗಡಿಗಳನ್ನು ಉಳಿಸಬೇಕು ಎಂದು ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ವರ್ತಕರು ಹೇಳುತ್ತಾರೆ.
ರಸ್ತೆಗಳು ಅಭಿವೃದ್ಧಿ ಆಗಬೇಕಾಗಿರುವುದು ಸಹಜ. ಆದರೆ ಹೊಸ ಕಟ್ಟಡ ನಿರ್ಮಿಸಲು ಸಾಕಷ್ಟು ಸಮಸ್ಯೆಗಳಿವೆ. ಈಗಿರುವ ಅಂಗಡಿ-ಮುಂಗಟ್ಟುಗಳನ್ನು ತೆರವು ಮಾಡುತ್ತಿರುವುದರಿಂದ ಬಹುತೇಕ ವರ್ತಕರ ಬದುಕಿಗೆ ಹೊಡೆತ ಬೀಳಲಿದೆ.
— ಪುಷ್ಪರಾಜ್ ಶೆಟ್ಟಿ, ಬೆಳ್ತಂಗಡಿ ವರ್ತಕರ ಸಂಘದ ಸ್ಥಾಪಕಾಧ್ಯಕ್ಷ
ತೆರವುಗೊಳ್ಳುತ್ತಿರುವ ಎಲ್ಲ ಕಟ್ಟಡಗಳ ಸಮರ್ಪಕ ದಾಖಲೆಗಳನ್ನು ಸಲ್ಲಿಸಿದ ಮಾಲೀಕರಿಗೆ ಈಗಾಗಲೇ ಪರಿಹಾರ ಪಾವತಿಸಲಾಗಿದೆ. ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಬಹುತೇಕ ಅಂತಿಮ ಹಂತ ತಲುಪಿದ್ದು, ಶೀಘ್ರದಲ್ಲೇ ಪೂರ್ಣಗೊಳಿಸುವ ಗುರಿ ಹೊಂದಿದ್ದೇವೆ.
— ಗುರು ಪ್ರಸಾದ್, ಎಇಇ, ರಾಷ್ಟ್ರೀಯ ಹೆದ್ದಾರಿ ಇಲಾಖೆ