ಎಡಪದವು ಗ್ರಾಮ ಪಂಚಾಯಿತಿಯ 2026-27ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆಯಲ್ಲಿ ಮೆಸ್ಕಾಂ ಅಧಿಕಾರಿ ವೀರಭದ್ರಪ್ಪ ಮಾಹಿತಿ ನೀಡಿದರು. ಪಿಡಿಒ ರಾಜೀವಿ ಡಿ. ನಾಯ್ಕ, ಆಡಳಿತಾಧಿಕಾರಿ ಸುಕನ್ಯಾ, ಇಸ್ಮಾಯಿಲ್ ಮತ್ತಿತರರು ಇದ್ದರು.  
ಉಡುಪಿ

ಎಡಪದವು ಪೇಟೆಗೆ ಬಾರದ ಬಸ್

ಗುರುಪುರ: ಎಡಪದವು ಗ್ರಾಮ ಪಂಚಾಯಿತಿಯ 2026-27ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆ ಶನಿವಾರ ಪಂಚಾಯಿತಿ ಆಡಳಿತಾಧಿಕಾರಿ ಸುಕನ್ಯಾ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಭವನದಲ್ಲಿ ನಡೆಯಿತು.
ವಿಸ್ತರಣೆಗೊಳ್ಳುತ್ತಿರುವ ಎನ್‌ಎಚ್(169) ಎಡಪದವು ಪೇಟೆಯ ಹೊರಭಾಗದಿಂದ ಹಾದು ಹೋಗುತ್ತಿದ್ದು, ಪರಿಣಾಮವಾಗಿ ಬಸ್ಸುಗಳು ಪೇಟೆಗೆ ಬರುತ್ತಿಲ್ಲ. ಇದರಿಂದ ಈ ಭಾಗದ ಜನರಿಗೆ ಸಮಸ್ಯೆಯಾಗಿದೆ. ಸರ್ವೀಸ್ ಮತ್ತು ಎಕ್ಸ್‌ಪ್ರೆಸ್ ಬಸ್ಸುಗಳು ಎಡಪದವು ಪೇಟೆ ಮೂಲಕ ಸಂಚರಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು. ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಾರಿಗೆ ಇಲಾಖೆಗೆ ಪತ್ರ ಬರೆಯುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.

ಎಡಪದವು ಪೇಟೆಯಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಗ್ರಾಮ ಆಡಳಿತಾಧಿಕಾರಿ ರಾಮಚಂದ್ರ ಎಸ್‌ಐಆರ್, ವೃದ್ಧಾಪ್ಯ ವೇತನ, ವಿಧವಾ ವೇತನ, ಸಂಧ್ಯಾ ಸುರಕ್ಷ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಮೆಸ್ಕಾಂನ ಎಡಪದವು ಸೆಕ್ಷನ್ ಅಧಿಕಾರಿ ವೀರಭದ್ರಪ್ಪ ಗೃಹಜ್ಯೋತಿ ಸಮೀಕ್ಷೆಯ ಮಾಹಿತಿ ನೀಡಿದರು. ಮೆಸ್ಕಾಂ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಪ್ರಸಕ್ತ ಇಲ್ಲಿ 10 ಮಂದಿ ಕೆಲಸ ಮಾಡುತ್ತಿದ್ದು, 9 ಸಿಬ್ಬಂದಿ ಕೊರತೆ ಇದೆ. ಸಿಬ್ಬಂದಿ ನೇಮಕಾತಿ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆಯಲು ನಿರ್ಣಯಿಸಲಾಯಿತು.
ಆರೋಗ್ಯ ಇಲಾಖೆಯ ಡಾ.ಚೈತನ್ಯಾ, ಅರಣ್ಯ, ಕೃಷಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮಾತನಾಡಿದರು. ತಾಲೂಕು ಐಇಸಿ ಸಂಯೋಜಕಿ ನಿಶ್ಮಿತಾ ಅವರು ವಿಬಿ-ಜಿ ರಾಮ್‌ಜಿ ಯೋಜನೆಯ ಮಾಹಿತಿ ನೀಡಿದರು. ಪಿಡಿಒ ರಾಜೀವಿ ಡಿ.ನಾಯ್ಕ, ಕಾರ್ಯದರ್ಶಿ ಲಕ್ಷ್ಮಣ್ ಸಪಲಿಗ ಉಪಸ್ಥಿತರಿದ್ದರು. ಪಂಚಾಯಿತಿ ಮಾಜಿ ಸದಸ್ಯರು, ಗ್ರಾಮಸ್ಥರು ಭಾಗವಹಿಸಿದ್ದರು. ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಇಸ್ಮಾಯಿಲ್ ಸ್ವಾಗತಿಸಿ, ವಂದಿಸಿದರು.