ಶಿರ್ತಾಡಿಯ ಕಂದಿರಲ್ಲಿ ನಿರ್ಮಾಣಗೊಂಡ ಸುಂದರ ಗದ್ದೆ. 
ಉಡುಪಿ

ಪಿಕ್ಕಾಸು ಹಿಡಿದು ಗದ್ದೆ ನಿರ್ಮಿಸಿದ ಶಿರ್ತಾಡಿಯ ಕೃಷಿಕ

ಮೂಡುಬಿದಿರೆ: ಆಧುನಿಕ ಕೃಷಿ ಪದ್ಧತಿಯಲ್ಲಿ ಯಂತ್ರೋಪಕರಣಗಳಿಲ್ಲದೆ ಒಂದು ಹೆಜ್ಜೆ ಇಡುವುದು ಕಷ್ಟ ಎನ್ನುವ ಕಾಲವಿದು. ಆದರೆ, ಶಿರ್ತಾಡಿಯ ಕಂದಿರುವಿನ ಉದ್ಯಮಿ ಹಾಗೂ ಕೃಷಿಕ ಸುರೇಂದ್ರ ಕೆ. ಅವರು ತಮ್ಮ ಕಾಯಕ ನಿಷ್ಠೆ ಮೂಲಕ ಹೊಸ ಭಾಷ್ಯ ಬರೆದಿದ್ದಾರೆ. ಟ್ರಾೃಕ್ಟರ್‌ಗಾಗಿ ಕಾಯುತ್ತಾ ಕೂರದೆ, ಶ್ರಮವನ್ನೇ ತಂತ್ರವನ್ನಾಗಿ ಮಾಡಿಕೊಂಡು ತಮ್ಮ ಮನೆಯೆದುರಿನ ಜಾಗವನ್ನು ಸುಂದರ ಗದ್ದೆಯನ್ನಾಗಿ ಪರಿವರ್ತಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ಪರಂಪರೆಯ ಹಾದಿಯಲ್ಲಿ ಹೆಜ್ಜೆ

ಸುರೇಂದ್ರ ಅವರಿಗೆ ಕೃಷಿ ಮೇಲಿನ ಪ್ರೀತಿ ವಂಶ ಪಾರಂಪರ್ಯವಾಗಿ ಬಂದದ್ದು. ಅವರ ತಂದೆ ಪ್ರಶಸ್ತಿ ವಿಜೇತ ಕೃಷಿಕರಾಗಿದ್ದವರು. ತಂದೆಯ ಹಾದಿಯಲ್ಲೇ ಸಾಗಬೇಕೆಂಬ ಛಲದಿಂದ ಮನೆ ಮುಂದಿನ ಜಾಗವನ್ನು ಗದ್ದೆಯಾಗಿಸುವ ಕನಸು ಕಂಡಿದ್ದರು.

ಯಂತ್ರಕ್ಕಿಂತ ಮಿಗಿಲು ಶ್ರಮದ ಶಕ್ತಿ

ಗದ್ದೆ ನಿರ್ಮಾಣಕ್ಕಾಗಿ ಜಾಗ ಸಮತಟ್ಟುಗೊಳಿಸಿದ ಬಳಿಕ, ಅಲ್ಲಿನ ಕಲ್ಲು-ಮಣ್ಣು ತೆರವುಗೊಳಿಸಲು ಟ್ರಾೃಕ್ಟರ್ ಅನಿವಾರ್ಯವಾಗಿತ್ತು. ಆದರೆ ಸಮಯಕ್ಕೆ ಸರಿಯಾಗಿ ಟ್ರಾೃಕ್ಟರ್ ಸಿಗದಿದ್ದಾಗ ಸುರೇಂದ್ರ ಅವರು ಎದೆಗುಂದಲಿಲ್ಲ. ಬದಲಿಗೆ ತಾವೇ ಹಾರೆ-ಪಿಕ್ಕಾಸು ಹಿಡಿದು ಕೆಲಸ ಮಾಡಲು ಮುಂದಾದರು. ತಾಯಿ ನೀಲಮ್ಮ ಪೂಜಾರ್ತಿ ಹಾಗೂ ಕುಟುಂಬದ ಹಿರಿಯ ಕೃಷಿಕ ಶಿವಪ್ಪ ಪೂಜಾರಿ ಮುಹೂರ್ತ ನೆರವೇರಿಸಿದ ಬಳಿಕ ನಾಲ್ಕು ದಿನಗಳ ಕಾಲ ಸತತವಾಗಿ ಶ್ರಮಿಸಿದ ಸುರೇಂದ್ರ, ಕಲ್ಲುಗಳನ್ನೆಲ್ಲ ತೆರವುಗೊಳಿಸಿ ಜಾಗವನ್ನು ಅಚ್ಚುಕಟ್ಟಾದ ಗದ್ದೆಯನ್ನಾಗಿ ರೂಪಿಸಿದರು. ಸದ್ಯ ಗದ್ದೆ ಹೂಳಿ, ನೇಜಿ ನೆಡುವ ಕೆಲಸವೂ ಯಶಸ್ವಿಯಾಗಿ ಪೂರ್ಣಗೊಂಡಿದೆ.
ಯಂತ್ರೋಪಕರಣಗಳ ಮೇಲಿನ ಅತಿಯಾದ ಅವಲಂಬನೆ ಬಿಟ್ಟು, ಮನಸ್ಸಿದ್ದರೆ ಮಾರ್ಗ ಎಂಬಂತೆ ಶ್ರಮಪಟ್ಟರೆ ಏನನ್ನಾದರೂ ಸಾಧಿಸಬಹುದು ಎಂದು ತೋರಿಸಿಕೊಟ್ಟ ಸುರೇಂದ್ರ ಅವರ ಈ ಪ್ರಯತ್ನಕ್ಕೆ ಸ್ಥಳೀಯರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.