ಉಡುಪಿಯಲ್ಲಿ ನೆಹರು ಜಯಂತಿ ನಿಮಿತ್ತ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರೊ. ಡಾ.ವಾಸುದೇವ ಬೆಳ್ಳೆ ಮಾತನಾಡಿದರು. ಉದ್ಯಾವರ ನಾಗೇಶಕುಮಾರ, ಪ್ರೊ.ಸುಬ್ರಹಬ್ಮಣ್ಯ ಜೋಶಿ ಇದ್ದರು. 
ಉಡುಪಿ

ನೆಹರು ಕನಸಿನ ಭಾರತವು ಎಲ್ಲ ಧಾರೆಗಳ ಕೂಸು

* ಮುಲ್ಕಿ ಕಾಲೇಜ್​ ಪ್ರಾಂಶುಪಾಲ ಡಾ.ವಾಸುದೇವ ಬೆಳ್ಳೆ ಅನಿಸಿಕೆ

* ಮಾಜಿ ಪ್ರಧಾನಿ ಜನ್ಮದಿನದ ನಿಮಿತ್ತ ವಿಶೇಷ ಉಪನ್ಯಾಸ

ಉಡುಪಿ: ಜವಾಹರ ಲಾಲ್​ ನೆಹರು ಅವರ ಕನಸಿನ ಭಾರತವು ಕೇವಲ ಅವರನ್ನು ಮಾತ್ರ ಒಳಗೊಂಡಿಲ್ಲ. ಅದರಲ್ಲಿ ಗಾಂಧಿ, ಅಂಬೇಡ್ಕರ್​, ಎಡಪಂಥೀಯರು ಸೇರಿದಂತೆ ಎಲ್ಲ ರೀತಿಯ ಚಿಂತನೆಗಳೂ ಇದ್ದವು. ಅವರ ಕನಸಿನ ಭಾರತವು ಎಲ್ಲ ಧಾರೆಗಳ ಕೂಸು ಆಗಿತ್ತು. ನೆಹರು ಇತಿಹಾಸವು ಕಟ್ಟುವ ಪ್ರಕ್ರಿಯೇ ಹೊರತು ವಿಘಟನೆಯ ಕ್ರಿಯೆಯಲ್ಲ. ದೇಶದ ಪ್ರಧಾನಿ ಪಟ್ಟಕ್ಕೆ ಮಹಾತ್ಮ ಗಾಂಧೀಜಿಯ ಆಯ್ಕೆಯೂ ಸಹ ನೆಹರು ಅವರೇ ಆಗಿದ್ದರು ಎಂದು ಮುಲ್ಕಿ ಸರ್ಕಾರಿ ಪ.ಪೂ. ಕಾಲೇಜ್​ನ ಪ್ರಾಂಶುಪಾಲ ಡಾ.ವಾಸುದೇವ ಬೆಳ್ಳೆ ಅನಿಸಿಕೆ ವ್ಯಕ್ತಪಡಿಸಿದರು.

ಉಡುಪಿ ಎಂಜಿಎಂ ಕಾಲೇಜಿನ ಧ್ವನ್ಯಲೋಕದಲ್ಲಿ ರಥಬೀದಿ ಗೆಳೆಯರು ಉಡುಪಿ ವತಿಯಿಂದ ನೆಹರೂ ಜಯಂತಿ ನಿಮಿತ್ತ ಶನಿವಾರ (ನ.14) ಆಯೋಜಿಸಿದ್ದ 'ನೆಹರೂ ಕನಸಿಕ ಭಾರತ ಮತ್ತು ವರ್ತಮಾನ' ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಾತ್ಯತೀತ ಕಲ್ಪನೆ

ನೆಹರು ಅವರು ಮುಖ್ಯ ನಿರೀಕ್ಷೆ ಮತ್ತು ಬೇಡಿಕೆಯೂ ಸಹ ಜಾತ್ಯತೀತ ಭಾರತವೇ ಆಗಿತ್ತು. ಜಾತ್ಯತೀತವನ್ನು ಬಹಳ ಮುಖ್ಯ ಮೌಲ್ಯ ಎಂದು ಅವರು ತಿಳಿದಿದ್ದರು. ಅಲ್ಲದೆ, ನೈತಿಕ ಹಾಗೂ ಮಾನವೀಯ ಪ್ರಗತಿಯ ಕಲ್ಪನೆ ಅವರಿಗಿತ್ತು. ದೇಶವನ್ನು ಮಾರಿಕೊಳ್ಳುವ ಮತ್ತು ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತರುವ ಅಭಿವೃದ್ಧಿಯ ಕನಸು ಅವರದ್ದಾಗಿರಲಿಲ್ಲ. ಆ ಸಂದರ್ಭದಲ್ಲಿ ನವ ಭಾರತ ಕಟ್ಟುವ ಸಾಮರ್ಥ್ಯದಲ್ಲಿ ಇತರೆಲ್ಲ ನಾಯಕರಿಗಿಂತ ನೆಹರು ಮುಂಚೂಣಿಯಲ್ಲಿದ್ದರು ಎಂದರು.

ವ್ಯಂಗ್ಯದ ಮಾತು

ದೇಶದಲ್ಲಿಂದು ಸರ್ವಾಧಿಕಾರದ ಧೊರಣೆ ಕಂಡುಬರುತ್ತಿರುವುದಾಗಿ ಅಧ್ಯಯನಕಾರರು ಉಲ್ಲೇಖಿಸಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ದೊಡ್ಡ ಕುತ್ತು ಹಾಗೂ ಅಪಾಯ ಎದುರಾಗುತ್ತಿದೆ ಎಂದು ಅನೇಕ ಅಧ್ಯಯನ ಸಂಸ್ಥೆಗಳು ಮಾಹಿತಿ ನೀಡಿವೆ. ದೇಶವನ್ನು ಕಟ್ಟಿದ ಪ್ರಧಾನಿ ನೆಹರು ಅವರನ್ನೇ ಇಂದು ಟೀಕಿಸುವ, ವ್ಯಂಗ್ಯ ಮಾಡುವ ಮನೋಭಾವದವರನ್ನು ಕಾಣುತ್ತಿದ್ದೇವೆ. ಟೀಕೆ ಮಾಡುತ್ತಿರುವವರು ಯಾರೂ ಸಹ ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರಲ್ಲ. ಅಥವಾ ದೇಶವನ್ನೂ ಕಟ್ಟಿದವರೂ ಅಲ್ಲ ಎಂದರು.

ಸಂವಾದದಲ್ಲಿ ಡಾ. ರಾಜಾರಾಂ ತೋಳ್ಪಾಡಿ ಪಾಲ್ಗೊಂಡಿದ್ದರು. ಇತ್ತೀಚೆಗೆ ಅಗಲಿದ ವಿಮರ್ಶಕ ಕೆ.ವಿ.ನಾರಾಯಣ ಅವರಿಗೆ ಹಿರಿಯ ಚಿಂತಕ ಪ್ರೊ.ಫಣಿರಾಜ್​ ನುಡಿನಮನ ಸಲ್ಲಿಸಿದರು.

ರಥಬೀದಿ ಗೆಳೆಯರು ಅಧ್ಯಕ್ಷ ಉದ್ಯಾವರ ನಾಗೇಶಕುಮಾರ ಸ್ವಾಗತಿಸಿದರು. ಕಾರ್ಯದರ್ಶಿ ಪ್ರೊ.ಸುಬ್ರಹಬ್ಮಣ್ಯ ಜೋಶಿ ಕಾರ್ಯಕ್ರಮ ನಿರೂಪಿಸಿದರು. ಸಮಿತಿ ಸದಸ್ಯ ಮೈಕಲ್​ ಡಿಸೋಜಾ ವಂದಿಸಿದರು.