ಕಟೀಲು ದೇವಳದ ಮುಂಭಾಗದಲ್ಲಿ ಭೋಜನ ಶಾಲೆಗೆ ತೆರಳುವ ಸೇತುವೆ ಬಲ ಭಾಗದಲ್ಲಿರುವ ರಜೆಕಲ್ಲು.
ಈ ಬಾರಿ ಮಳೆಯ ಕಾರಣ ಅಂಗನವಾಡಿ, ಶಾಲೆಗಳಿಗೆ ಹಲವು ದಿನ ರಜೆ ನೀಡಲಾಯಿತು. ಹವಾಮಾನ ಇಲಾಖೆಯ ಮುನ್ಸೂಚನೆಯನ್ನು ಆಧರಿಸಿ ಸಂಬಂಧಪಟ್ಟ ಅಧಿಕಾರಿಗಳು ಶಿಕ್ಷಣ ಸಂಸ್ಥೆಗಳಿಗೆ ಅಧಿಕೃತ ಮಾಹಿತಿ ನೀಡಿ ರಜೆ ಸಾರಲಾಗುತ್ತದೆ. ಆದರೆ ಕಟೀಲು ವಿದ್ಯಾಸಂಸ್ಥೆಗಳಲ್ಲಿ ಹಿಂದಿನ ದಿನಗಳಲ್ಲಿನ ಕ್ರಮವೇ ಬೇರೆ ಇತ್ತು. ಇಲ್ಲಿ ಒಂದು ಕಲ್ಲನ್ನು ಆಧರಿಸಿ ಶಾಲಾ-ಕಾಲೇಜುಗಳಿಗೆ ರಜೆ ನೀಡುತ್ತಿದ್ದರು.
ಕಟೀಲು ದೇವಳದ ಮುಂಭಾಗದಲ್ಲಿ ಭೋಜನ ಶಾಲೆಗೆ ತೆರಳುವ ಸೇತುವೆ ಬಲ ಭಾಗದಲ್ಲಿ ದೊಡ್ಡ ಗಾತ್ರದ ಕಲ್ಲು ಇದ್ದು, ಇದು ರಜೆಕಲ್ಲು ಎಂದು ಬಹಳ ಪ್ರಸಿದ್ಧಿ ಪಡೆದಿದೆ. ಅಂದರೆ ಜೋರು ಮಳೆ ಸುರಿದರೆ ಈ ಭಾಗದಲ್ಲಿ ನಂದಿನಿ ನದಿ ತುಂಬಿ ಹರಿಯುತ್ತದೆ.
ನೀರಿನ ಪ್ರಮಾಣ ಹೆಚ್ಚಾದಾಗ ಈ ಕಲ್ಲು ಮುಳುಗಡೆಯಾಗುತ್ತದೆ. ಇದು ಮುಳುಗಿದಲ್ಲಿ ಸುತ್ತಮುತ್ತಲ ತಗ್ಗುಪ್ರದೇಶ ನೆರೆ ಆವರಿಸುತ್ತದೆ ಎಂದರ್ಥ. ಈ ಮೂಲಕ ಕಟೀಲು ಶಿಕ್ಷಣ ಸಂಸ್ಥೆಗಳಿಗೆ ರಜೆ ಸಾರಲಾಗುತ್ತಿತ್ತು. ಪ್ರಸ್ತುತ ದಿನಗಳಲ್ಲಿನ ವಿದ್ಯಾರ್ಥಿಗಳಿಗೆ ಈ ಕಲ್ಲಿನ ಬಗ್ಗೆ ಅಷ್ಟೇನೂ ಮಾಹಿತಿ ಇಲ್ಲದಿದರೂ ಇಲ್ಲಿನ ಶಿಕ್ಷಣ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ಕಟೀಲಿಗೆ ಭೇಟಿ ನೀಡಿದಾಗ ಈ ರಜೆಕಲ್ಲನ್ನು ವೀಕ್ಷಿಸಿ ಅಂದಿನ ದಿನಗಳನ್ನು ನೆನಪಿಸುತ್ತಾರೆ.
ಹಿಂದೆ ಕಟೀಲು ಕಾಲೇಜಿಗೆ ಹೋಗುತ್ತಿದ್ದ ಸಂದರ್ಭ ಬೆಳಗ್ಗೆ ಹೋಗಿ ನದಿಯನ್ನು ನೋಡುವುದು ಹೆಚ್ವಿನ ವಿದ್ಯಾರ್ಥಿಗಳ ವಾಡಿಕೆ. ರಜೆಕಲ್ಲು ಮುಳುಗಿದರೆ ರಜೆ ಖಂಡಿತ ಸಿಗುತ್ತದೆ ಎಂಬುದು ಮೊದಲೇ ತಿಳಿಯುತ್ತಿತ್ತು. ಈ ಮೂಲಕ ಖುಷಿ ಪಡುತ್ತಿದ್ದೆವು.
— ಪ್ರಶಾಂತ್ ಸುವರ್ಣ ಕವತ್ತಾರು, ಕಟೀಲು ಶಿಕ್ಷಣ ಸಂಸ್ಥೆ ಹಳೇ ವಿದ್ಯಾರ್ಥಿ