ಕೋಟತಟ್ಟು ಚಿಟ್ಟಿಬೆಟ್ಟಿನ ಕೊರಗ ಕಾಲನಿಯಲ್ಲಿ ಎಂಟು ಮನೆಗಳ ಲೋಕಾರ್ಪಣಾ ಸಮಾರಂಭವನ್ನು ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಉದ್ಘಾಟಿಸಿದರು. ಕೋಟ ಶ್ರೀನಿವಾಸ ಪೂಜಾರಿ, ಸತೀಶ್ ಕುಂದರ್, ಕಿರಣ್ ಕುಮಾರ್ ಕೊಡ್ಗಿ, ನಾಡೋಜ ಡಾ.ಜಿ.ಶಂಕರ್ ಇತರರು ಇದ್ದರು.
ಕೋಟ: ದುರ್ಬಲರ ಸಮಾಜದ ಏಳಿಗೆಗಾಗಿ ಶ್ರಮಿಸುವ ಕಾರ್ಯ ಭಗವಂತನಿಗೆ ಸಲಿಸುವ ಭಕ್ತಿಯಷ್ಟೇ ಶ್ರೇಷ್ಠವಾದುದು. ಕುಲ ಕಸುಬು ಮಾಡಿ ಜೀವನ ಸಾಗಿಸುವ ಕೊರಗ ಸಮುದಾಯದ ಮುಗ್ಧ ಜೀವಗಳಿಗೆ ಸೂರು ಕಲ್ಪಿಸಿ ಆಸರೆ ನೀಡುವ ಮೂಲಕ ಕೋಟತಟ್ಟು ಪಂಚಾಯಿತಿ ಶ್ರೇಷ್ಠವಾದ ಕಾಯಕ ಮಾಡಿದೆ ಎಂದು ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ನುಡಿದರು.
ಕೋಟತಟ್ಟು ಗ್ರಾಮ ಪಂಚಾಯಿತಿ ಹಾಗೂ ದಾನಿಗಳಿಂದ ಚಿಟ್ಟಿಬೆಟ್ಟು ಕೊರಗ ಕಾಲನಿಯಲ್ಲಿ ನಿರ್ಮಾಣಗೊಂಡ ಎಂಟು ಮನೆಗಳ ಗೃಹಪೂಜೆ ಮತ್ತು ಹಸ್ತಾಂತರ ‘ಆಸರೆ -2026’ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಮನೆ ನಿರ್ಮಾಣದ ಕಾರ್ಯದಲ್ಲಿ ಕೈಜೋಡಿಸಿಕೊಂಡ ದಾನಿಗಳ ಸಹಕಾರಕ್ಕೆ ಗೌರವ ಸಲ್ಲಿಸಿದ ಪುತ್ತಿಗೆ ಶ್ರೀ ಮಠದ ವತಿಯಿಂದ 5 ಲಕ್ಷ ರೂ. ದೇಣಿಗೆ ಘೋಷಿಸಿದರು.
ಸಮಾಜಸೇವಕ ಎಚ್.ಎಸ್.ಶೆಟ್ಟಿ ಮಾತನಾಡಿ, ಬದುಕಿನಲ್ಲಿ ಮಾನವೀಯ ಕಾರ್ಯ ಎಂದರೆ ಅದು ಈ ಸಮಾಜಕ್ಕೆ ನೀಡುವ ಕೊಡುಗೆ. ಕೊರಗ ಸಮುದಾಯಕ್ಕೆ ನೀಡಿದ ಕೊಡುಗೆ ಶ್ರೇಷ್ಠ ಕಾಯಕವಾಗಿದೆ ಎಂದರು.
ಮನೆ ನಿರ್ಮಾಣ ಕಾರ್ಯದ ಮಾರ್ಗದರ್ಶಕ, ಸಂಸದ ಕೋಟ ಶ್ರೀನಿವಾಸ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುತ್ತಿಗೆ ಶ್ರೀೀಗಳು ಕೊರಗ ಕಾಲನಿಯ ಎಂಟು ಮನೆಗಳಿಗೆ ತೆರಳಿ ದೀಪ ಬೆಳಗಿಸಿದರು.
*ದಾನಿಗಳಿಗೆ ಗೌರವ: ಕೋಟತಟ್ಟು ಗ್ರಾಪಂನ ಯೋಜನೆಗೆ ಕೈಜೋಡಿಸಿ ಆರ್ಥಿಕ ಸಹಕಾರ ನೀಡಿದ ದಾನಿಗಳನ್ನು ಸಭೆಯಲ್ಲಿ ಗೌರವಿಸಲಾಯಿತು. ನಾಡೋಜ ಡಾ.ಜಿ.ಶಂಕರ್, ಶಾಸಕ ಕಿರಣ್ ಕೊಡ್ಗಿ ಸಹಿತ ಹಲವರು ದೇಣಿಗೆ ಘೋಷಿಸಿದರು.
ಗೀತಾನಂದ ಫೌಂಡೇಶನ್ ಊಟೋಪಚಾರದ ವ್ಯವಸ್ಥೆ ಮಾಡಿತ್ತು. ಆಶ್ರಿತ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು, ಸ್ಥಳೀಯ ಸಂಘಸಂಸ್ಥೆಗಳು ಸಹಕರಿಸಿದವು.
ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅಧ್ಯಕ್ಷತೆ ವಹಿಸಿದ್ದರು. ನಾಡೋಜ ಡಾ.ಜಿ.ಶಂಕರ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಂ.ಎ.ಗಫೂರ್, ಉದ್ಯಮಿಗಳಾದ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು, ಸಂಪತ್ ಕುಮಾರ್ ಶೆಟ್ಟಿ, ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ.ಕುಂದರ್, ವೈದ್ಯ ಡಾ.ಪ್ರಕಾಶ್ ತೋಳಾರ್, ಐಟಿಡಿಪಿ ಇಲಾಖೆಯ ವಿಶ್ವನಾಥ್, ಗ್ರಾಪಂ ಉಪಾಧ್ಯಕ್ಷೆ ಸರಸ್ವತಿ ಪೂಜಾರಿ, ಕೊರಗ ಸಮುದಾಯದ ಮುಖಂಡ ಗಣೇಶ್ ಕುಂಭಾಶಿ, ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.
ಪಂಚಾಯಿತಿ ಅಧ್ಯಕ್ಷ ಸತೀಶ್ ಕುಂದರ್ ಸ್ವಾಗತಿಸಿದರು. ವಿಜಯ ಭಟ್ ಕಡೆಕಾರ್ ವಂದೇ ಮಾತರಂ ಹಾಡಿದರು. ಪಿಡಿಒ ರವೀಂದ್ರ ರಾವ್ ನಿರೂಪಿಸಿದರು. ಎಚ್. ಪ್ರಮೋದ್ ಹಂದೆ ವಂದಿಸಿದರು.
ನಟ ರಿಷಭ್ ಶೆಟ್ಟಿ ಭೇಟಿ
ಕೊರಗ ಕಾಲನಿಗೆ ನಟ, ನಿರ್ದೇಶಕ ರಿಷಭ್ ಶೆಟ್ಟಿ ಆಗಮಿಸಿ ಮನೆಗಳನ್ನು ವೀಕ್ಷಿಸಿ ಕೋಟತಟ್ಟು ಗ್ರಾಪಂನ ಮಹತ್ಕಾರ್ಯವನ್ನು ಶ್ಲಾಘಿಸಿದರು. ಕೊರಗ ಸಮುದಾಯವರೊಂದಿಗಿನ ತಮ್ಮ ಬಾಂಧವ್ಯ ಹಂಚಿಕೊಂಡ ಅವರು, ಕಾಂತಾರ ಚಿತ್ರಕ್ಕೆ ಕೊರಗರ ಡೋಲಿನ ನಾದ ಹಾಗೂ ಆ ಸಮುದಾಯದ ಪಾತ್ರದ ಕೊಡುಗೆಯನ್ನು ಸ್ಮರಿಸಿದರು.
ವೈಭವದ ಮೆರವಣಿಗೆ
ಸಭೆಗೂ ಮೊದಲು ರಾಷ್ಟ್ರೀಯ ಹೆದ್ದಾರಿಯಿಂದ ಚಿಟ್ಟಿಬೆಟ್ಟು ಸಂಪರ್ಕಿಸುವ ರಸ್ತೆ ಮೂಲಕ ಡೋಲು ವಾದನದೊಂದಿಗೆ ಪುತ್ತಿಗೆ ಸ್ವಾಮೀಜಿಯವರನ್ನು ಕಾಲನಿಗೆ ಕರೆತರಲಾಯಿತು. ಕೊರಗ ಸಮುದಾಯದ ಮಹಿಳೆಯರು ಬಣ್ಣ ಬಣ್ಣದ ಸೀರೆ, ಪುರುಷರು ಬಿಳಿ ಪಂಚೆಯುಟ್ಟು ಕಾರ್ಯಕ್ರಮದಲ್ಲಿ ಸಂಭ್ರಮದಿಂದ ಪಾಲ್ಗೊಂಡರು.