ಸುಳ್ಯದಲ್ಲಿ ಹಲಸು-ಮಾವು ಮೇಳ ಸ್ಟಾಲ್‌ಗಳನ್ನು ತಹಸೀಲ್ದಾರ್ ಮಂಜುಳಾ ಎಂ. ಉದ್ಘಾಟಿಸಿದರು. ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಶ್ರೀಪಡ್ರೆ, ಡಾ.ಯು.ಪಿ.ಶಿವಾನಂದ ಮೊದಲಾದವರಿದ್ದರು.
ಸುಳ್ಯ: ಹಲಸು ಬೆಳೆಗೆ ಮುಂದೆ ಸುವರ್ಣ ದಿನಗಳು ಬರಲಿವೆ. ಹಳ್ಳಿ-ಹಳ್ಳಿಗೂ ಹಲಸು ಆದಾಯ ತಂದು ಕೊಡಲಿದೆ. ಮುಂದೆ ಟ್ರೆಂಡ್ ಆಗಲಿರುವ ಹಲಸಿನ ಸಂಶೋಧನೆಗೆ ಮತ್ತು ಅಭಿವೃದ್ಧಿಗೆ ಭಾರತದಲ್ಲಿ ಹಲಸು ಸಂಶೋಧನಾ ಕೇಂದ್ರ ಸ್ಥಾಪನೆಯಾಗಬೇಕು ಎಂದು ಪರಿಸರ ತಜ್ಞ ಹಾಗೂ ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಶ್ರೀಪಡ್ರೆ ಅಭಿಪ್ರಾಯಪಟ್ಟರು.
ಟೀಮ್ ಉಬಾರ್, ಸುಳ್ಯ ರೈತ ಉತ್ಪಾದಕ ಕಂಪನಿ, ಪ್ರಣವ ಸೌಹಾರ್ದ ಸಹಕಾರಿ ಸಂಘ ಮತ್ತು ಸುದ್ದಿ ಕೃಷಿ ಅರಿವು ಕೇಂದ್ರದ ಜಂಟಿ ಆಶ್ರಯದಲ್ಲಿ ತಾಪಂ, ಕೃಷಿ ಸಂಬಂಧಿತ ಸರ್ಕಾರಿ ಇಲಾಖೆಗಳು ಹಾಗೂ ಸಹಕಾರಿ ಸಂಘಗಳು, ಸ್ಥಳೀಯ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಸುಳ್ಯದ ಕೇರ್ಪಳ ಶ್ರೀ ದುರ್ಗಾಪರಮೇಶ್ವರಿ ಕಲಾ ಮಂದಿರದ ವಠಾರದಲ್ಲಿ ಏರ್ಪಡಿಸಲಾದ ಹಲಸು ಮತ್ತು ಮಾವು ಮೇಳದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಹಲಸು ಮಾವು ಮೇಳದ ಗೌರವ ಮಾರ್ಗದರ್ಶಕ ಡಾ.ಯು.ಪಿ.ಶಿವಾನಂದ ಕಾರ್ಯಕ್ರಮ ಉದ್ಘಾಟಿಸಿದರು. ಸ್ಟಾಲ್‌ಗಳನ್ನು ಸುಳ್ಯ ತಹಸೀಲ್ದಾರ್ ಮಂಜುಳಾ ಎಂ. ಉದ್ಘಾಟಿಸಿದರು.
ಹಲಸು- ಮಾವು ಮೇಳ ಸಮಿತಿಯ ಗೌರವಾಧ್ಯಕ್ಷ, ಪ್ರಣವ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಜಿ.ಆರ್.ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಪದ್ಮಶ್ರೀ ಪುರಸ್ಕೃತ ಡಾ.ಗಿರೀಶ್ ಭಾರದ್ವಾಜ್, ವಿಧಾನ ಪರಿಷತ್ ಮಾಜಿ ಸದಸ್ಯ ಅಣ್ಣಾ ವಿನಯಚಂದ್ರ, ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ.ಮುಸ್ತಫಾ, ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಸಿಇಒ ಜ್ಯೋತಿರಾಜ್, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಪ್ರಮೋದ್ ಸಿ.ಎಂ., ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಗುರುಪ್ರಸಾದ್ ಉಪಸ್ಥಿತರಿದ್ದರು.
ಮೇಳದ ಸಂಘಟನಾ ಸಮಿತಿ ಅಧ್ಯಕ್ಷ ವೀರಪ್ಪ ಗೌಡ ಕಣ್ಕಲ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಜಯರಾಮ ಮುಂಡೋಳಿಮೂಲೆ ವಂದಿಸಿದರು. ಕೃಷಿ ಸಖಿ ಮೋಹಿನಿ ವಿಶ್ವನಾಥ್ ಹಾಗೂ ಯಶ್ವಿತ್ ಕಾಳಂಮನೆ ಕಾರ್ಯಕ್ರಮ ನಿರೂಪಿಸಿದರು.