ಜನತಾ ಪದವಿಪೂರ್ವ ಕಾಲೇಜಿನ ಬಾಲಕ ಬಾಲಕಿಯರ ನೂತನ ವಸತಿ ನಿಲಯ ಜನತಾ ‘ಶ್ಲಾಘನ ಶನಯ’ವನ್ನು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಲೋಕಾರ್ಪಣೆಗೊಳಿಸಿದರು. ಪ್ರಮುಖರಾದ ಗಣೇಶ್ ಮೊಗವೀರ, ಶ್ಯಾಮಲಾ ಗಣೇಶ, ಲೋಕೇಶ ಅಡಿಗ ಮೊದಲಾದವರಿದ್ದರು.
ವಿಜಯವಾಣಿ ಸುದ್ದಿಜಾಲ ಕುಂದಾಪುರ
ಶ್ರೇಷ್ಠ ಪರಂಪರೆ ಹೊಂದಿರುವ ನಾವು ಉತ್ತಮ ವಿದ್ಯಾಭ್ಯಾಸ, ಸಂಸ್ಕಾರ ಬೆಳೆಸಿಕೊಂಡು ದೇಶವನ್ನು ಉತ್ತಮ ರೀತಿಯಲ್ಲಿ ಸಮಾಜ, ದೇಶವನ್ನು ಕಟ್ಟುವಲ್ಲಿ ಶ್ರಮಿಸಬೇಕು. ಭಾರತವನ್ನು ಸರ್ವೋನ್ನತ ದೇಶವನ್ನಾಗಿ ಮಾಡುವುದು ಎಲ್ಲರ ಲಕ್ಷ್ಯವಾಗಬೇಕು ಎಂದು ಶ್ರೀ ಶೃಂಗೇರಿ ಶಾರದಾ ಪೀಠದ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.
ಹೆಮ್ಮಾಡಿ ಗ್ರಾಮದ ಸುಳ್ಸೆಯಲ್ಲಿ ನಿರ್ಮಿಸಲಾಗಿರುವ ಜನತಾ ಪದವಿಪೂರ್ವ ಕಾಲೇಜಿನ ಬಾಲಕ ಬಾಲಕಿಯರ ವಸತಿ ನಿಲಯ ಜನತಾ ‘ಶ್ಲಾಘನ ಶನಯ’ವನ್ನು ಗುರುವಾರ ಲೋಕಾರ್ಪಣೆಗೊಳಿಸಿ, ಆಶೀರ್ವಚನ ನೀಡಿದರು.
ಸಂಸ್ಥೆಯ ಅಧ್ಯಕ್ಷ ಗಣೇಶ್ ಮೊಗವೀರ ಮತ್ತು ಶ್ಯಾಮಲಾ ಗಣೇಶ ದಂಪತಿ ಸ್ವಾಮೀಜಿ ಪಾದಪೂಜೆ ನೆರವೇರಿಸಿದರು. ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದ ಪ್ರಾಂತೀಯ ಧರ್ಮಾಧಿಕಾರಿ ಲೋಕೇಶ ಅಡಿಗ, ಮತ್ಸ್ಯೋದ್ಯಮಿ ಆನಂದ ಸಿ.ಕುಂದರ್, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಬೈಂದೂರು ಮಂಡಲ ಬಿಜೆಪಿ ಅಧ್ಯಕ್ಷೆ ಅನಿತಾ ಆರ್.ಕೆ., ಜಿ.ಪಂ. ಮಾಜಿ ಅಧ್ಯಕ್ಷ ರಾಜು ಪೂಜಾರಿ, ರಾಜೀವ ಶ್ರೀಯಾನ್, ಉದಯ ಕುಮಾರ್ ಹಟ್ಟಿಯಂಗಡಿ ಮೊದಲಾದವರಿದ್ದರು. ಉದಯ ನಾಯ್ಕ ಸ್ವಾಗತಿಸಿದರು. ದಾಮೋದರ ಶರ್ವಾ ವಂದಿಸಿದರು.
ವಿದ್ಯಾಭ್ಯಾಸದಿಂದ ಬುದ್ಧಿ ವಿಕಾಸವಾಗುತ್ತದೆ. ವಿದ್ಯಾಭ್ಯಾಸ ಸಾರ್ಥಕವಾಗಬೇಕು. ಅದರ ವಿಯೋಗ ಸರಿಯಾಗಿ ಆಗಬೇಕೆಂದರೆ ಅದಕ್ಕೆ ಸಂಸ್ಕಾರ ಬೇಕು. ವಿದ್ಯಾಭ್ಯಾಸ ಜತೆಗೆ ಸಂಸ್ಕಾರವನ್ನು ಚೆನ್ನಾಗಿ ಬೆಳೆಸಿಕೊಳ್ಳಬೇಕು. ನಮ್ಮ ಸನಾತನ ಪರಂಪರೆ, ಭಾರತೀಯ ಸಂಸ್ಕೃತಿ, ಸನಾತನ ಸಂಸ್ಕೃತಿ ನೀಡುವ ಪರಂಪರೆ ಬಹಳ ಮುಖ್ಯ.
— ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಶ್ರೀ ಶೃಂಗೇರಿ ಶಾರದಾ ಪೀಠ