ವರ್ಲಿ ಚಿತ್ರ ಬಿಡಿಸಿದ ವಿದ್ಯಾರ್ಥಿಗಳ ಜತೆ ಎನ್‌ಎಸ್‌ಎಸ್ ಶಿಬಿರಾಧಿಕಾರಿಗಳಾದ ಕಿಶೋರ್ ಕುಮಾರ್, ಡಾ.ಮೋನಿಷಾ, ಮುಖ್ಯಶಿಕ್ಷಕಿ ಮಂಜುಳಾ ಅತ್ಯಾಡಿ, ಎಸ್‌ಡಿಎಂಸಿ ಅಧ್ಯಕ್ಷ ಸುರೇಶ್ ಕಣೆಮರಡ್ಕ ಮತ್ತಿತರರು.  
ಉಡುಪಿ

ಶಾಲಾ ಗೋಡೆಯಲ್ಲಿ ವರ್ಲಿ ವೈಭವ

 ಗಂಗಾಧರ ಕಲ್ಲಪಳ್ಳಿ ಸುಳ್ಯ 
 ಈ ಶಾಲಾ ಅಂಗಳಕ್ಕೆ ಕಾಲಿಟ್ಟರೆ ಅಲ್ಲಿನ ಗೋಡೆಗಳಲ್ಲಿ ಅರಳಿರುವ ಕಲೆಯ ಸೊಬಗು ನೋಡುಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. ವಿದ್ಯಾರ್ಥಿಗಳ ಕೈ ಚಳಕದಲ್ಲಿ ಅರಳಿದ ವರ್ಲಿ ಕಲೆಯ ಚಿತ್ತಾರ ಮನಸ್ಸಿಗೆ ಮುದ ನೀಡುತ್ತದೆ. ಗಡಿ ಪ್ರದೇಶ ಸುಳ್ಯ ತಾಲೂಕಿನ ಮಂಡೆಕೋಲು ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯೀಗ ವರ್ಲಿ ವರ್ಣ ವೈಭವದಿಂದ ಕಂಗೊಳಿಸುತ್ತಿದೆ.  
ಸುಳ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ(ಎನ್‌ಎಸ್‌ಎಸ್)ಯ ವಿದ್ಯಾರ್ಥಿಗಳ ವಾರ್ಷಿಕ ವಿಶೇಷ ಶಿಬಿರ ಒಂದು ವಾರಗಳ ಕಾಲ ಮಂಡೆಕೋಲು ಶಾಲೆಯಲ್ಲಿ ನಡೆಯಿತು. ಈ ಶಿಬಿರದಲ್ಲಿ ಶಾಲೆಯಲ್ಲಿ ಶ್ರಮದಾನ ಸೇರಿ ವಿವಿಧ ಚಟುವಟಿಕೆಗಳ ಜತೆಗೆ ವಿದ್ಯಾರ್ಥಿಗಳು ತಮ್ಮ ಕಲಾ ಪ್ರೌಢಿಮೆ ಮೆರೆದಿದ್ದಾರೆ. ಶಾಲಾ ಹೊರಾಂಗಣ ಗೋಡೆಯಲ್ಲಿ ವರ್ಲಿ ಚಿತ್ರಕಲೆಯ ಅದ್ಭುತ ಲೋಕ ಸೃಷ್ಟಿಸಿದ್ದಾರೆ. 
 ಕಾಲೇಜಿನ ಎನ್‌ಎಸ್‌ಎಸ್ ಘಟಕದ 100 ಮಂದಿ ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದರು. ಇದರಲ್ಲಿ 11 ಮಂದಿ ವಿದ್ಯಾರ್ಥಿಗಳು ಶಾಲಾ ಗೋಡೆಯಲ್ಲಿ ವರ್ಲಿ ಚಿತ್ರ ಬಿಡಿಸುವ ಮೂಲಕ ಶಿಬಿರದ ನೆನಪು ಶಾಶ್ವತವಾಗಿ ಉಳಿಯುವಂತೆ ಮಾಡಿದ್ದಾರೆ. 

 ಏನೇನು ಇದೆ?

ಕೃಷಿ ಬದುಕು, ಜಾತ್ರೆ, ಹಳ್ಳಿಯ ಚಿತ್ರಣ, ಶಾರದಾ ದೇವಿಯ ಚಿತ್ರ, ಮೀನುಗಾರಿಕೆ, ಜಾನಪದ ನೃತ್ಯಗಳು, ಶಾಲಾ ಚಿತ್ರಣ, ಅಕ್ಷರ ದಾಸೋಹ ಹೀಗೆ ವೈವಿಧ್ಯಮಯ ಚಿತ್ರಗಳನ್ನು ವರ್ಲಿ ಕಲೆಯಲ್ಲಿ ಚಿತ್ರಿಸಿದ್ದಾರೆ. ಶಾಲೆಯ ಗೋಡೆ ಹಾಗೂ ಕಂಬಗಳಿಗೆ ಬಣ್ಣ ಬಳಿದು ಸುಂದರಗೊಳಿಸಿ, ಆಯಿಲ್ ಪೇಂಟ್ ಬಳಸಿ ಚಿತ್ರ ಬಿಡಿಸಿದ್ದಾರೆ. 
 ಕಾಲೇಜಿನ ಎನ್‌ಎಸ್‌ಎಸ್ ಘಟಕ 1ರ ಶಿಬಿರಾಧಿಕಾರಿ ಕಿಶೋರ್ ಕುಮಾರ್ ಬಿ.ಡಿ, ಎನ್‌ಎಸ್‌ಎಸ್ ಘಟಕ 2ರ ಶಿಬಿರಾಧಿಕಾರಿ ಡಾ.ಮೋನಿಷಾ ಕೆ., ಸಹಶಿಬಿರಾಧಿಕಾರಿಗಳಾದ ಬಾಲಕೃಷ್ಣ ಮೇನಾಲ, ರಾಮಕೃಷ್ಣ ಕೆ.ಎಸ್. ಅವರ ನೇತೃತ್ವದಲ್ಲಿ 100 ಮಂದಿ ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದರು. ಶಿಬಿರದಲ್ಲಿ ಚಿತ್ರಕಲೆ ಮಾತ್ರವಲ್ಲದೆ ಶಾಲಾ ಕೈ ತೋಟ, ತರಕಾರಿ ಕೈತೋಟ ರಚನೆ, ಉದ್ಯಾನವನ ಸ್ವಚ್ಛತೆ, ಚರಂಡಿ ದುರಸ್ತಿ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.
 ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸತೀಶ್ ಎನ್.ಪಿ, ಮಂಡೆಕೋಲು ಶಾಲೆ ಮುಖ್ಯಶಿಕ್ಷಕಿ ಮಂಜುಳಾ ಅತ್ಯಾಡಿ, ಎಸ್‌ಡಿಎಂಸಿ ಅಧ್ಯಕ್ಷ ಸುರೇಶ್ ಕಣೆಮರಡ್ಕ ಮತ್ತಿತರರು ಶಿಬಿರಕ್ಕೆ ಸಹಕಾರ ನೀಡಿದರು. 

 ಪ್ರಥಮ ಪ್ರಯೋಗದಲ್ಲೇ ಯಶಸ್ಸು

 ವಿದ್ಯಾರ್ಥಿ ಹಿತೇಶ್ ನೇತೃತ್ವದಲ್ಲಿ ಸುಜಿಲ್, ಅಮೂಲ್ಯಾ, ಪ್ರಿಯಾ, ಹೇಮಂತ್, ಭರತ್, ಧನುಷ್, ಪವನ್, ಚೈತನ್, ಶಿವರಾಮ ಹಾಗೂ ದೀಕ್ಷಿತ್ ಅವರನ್ನೊಳಗೊಂಡ ತಂಡ ಬೆಳಗ್ಗೆ 9ರಿಂದ ರಾತ್ರಿ 11 ಗಂಟೆಯ ತನಕ ನಿರಂತರ ಶ್ರಮವಹಿಸಿ 25 ವೈವಿಧ್ಯಮಯ ಚಿತ್ರಗಳನ್ನು ಅರಳಿಸಿದ್ದಾರೆ. ಯಾವುದೇ ತರಬೇತಿ ಪಡೆಯದೆ ಸ್ವಯಂ ಕರಗತ ಮಾಡಿಕೊಂಡ ವರ್ಲಿ ಕಲೆಯನ್ನು ವಿದ್ಯಾರ್ಥಿಗಳು ತಮ್ಮ ಪ್ರಥಮ ಪ್ರಯೋಗದಲ್ಲೇ ಯಶಸ್ವಿಗೊಳಿಸಿದ್ದಾರೆ. 

 ಮಹಾರಾಷ್ಟ್ರದಲ್ಲಿ ಉಗಮವಾದ ಕಲೆ

 ಮಹಾರಾಷ್ಟ್ರ ರಾಜ್ಯದ ವರ್ಲಿ ಜನಾಂಗದಿಂದ ಉಗಮವಾದ ಜನಪದ ಚಿತ್ರಕಲೆಯೇ ವರ್ಲಿ ಕಲೆ. ಇದು ಭಾರತದ ಅತ್ಯಂತ ಹಳೆಯ ಕಲೆಯಾಗಿದ್ದು ಸುಮಾರು 2500-3000 ವರ್ಷಗಳ ಇತಿಹಾಸವಿದೆ. ಸಾಮಾನ್ಯವಾಗಿ ಕೆಂಪು ಮಣ್ಣಿನ ಹಿನ್ನೆಲೆಯ ಮೇಲೆ ಬಿಳಿ ಬಣ್ಣದಲ್ಲಿ ಚಿತ್ರಿಸುತ್ತಾರೆ. ಪ್ರಕೃತಿ ಆಧಾರಿತ ಚಿತ್ರಗಳು, ಕೃಷಿ, ಹಬ್ಬಗಳು, ನೃತ್ಯ, ಬೇಟೆ, ಮದುವೆ ಮತ್ತು ದೈನಂದಿನ ಜೀವನದ ದೃಶ್ಯಗಳನ್ನು ವರ್ಲಿ ಮೂಲಕ ಚಿತ್ರಿಸುತ್ತಾರೆ. ಪ್ರಕೃತಿ ಮತ್ತು ಮಾನವನ ಸಂಬಂಧವನ್ನು ಸುಂದರವಾಗಿ ತೋರಿಸುವ ಒಂದು ಅನನ್ಯ ಜನಪದ ಕಲೆಯಾಗಿದೆ.

ಮಂಡೆಕೋಲು ಶಾಲೆಯಲ್ಲಿ ನಡೆದ ಮೂರನೇ ಎನ್‌ಎಸ್‌ಎಸ್ ಶಿಬಿರ ಇದು. ಇದುವರೆಗೆ ನಡೆದ ಶಿಬಿರಗಳಲ್ಲಿ ಅತ್ಯಂತ ಉತ್ತಮವಾದ ಶಿಬಿರ. ವಿದ್ಯಾರ್ಥಿಗಳ ಶಿಸ್ತು, ಬದ್ಧತೆ ತುಂಬಾ ಉತ್ತಮವಾಗಿತ್ತು. ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಪ್ರದರ್ಶಿಸಿ ಶಾಲಾ ಗೋಡೆಯಲ್ಲಿ ವರ್ಲಿ ಕಲೆ ಅರಳಿಸಿ ಶಾಲೆಯನ್ನು ಸುಂದರಗೊಳಿಸಿರುವುದು ಎಲ್ಲರಿಗೂ ಖುಷಿ ಕೊಟ್ಟಿದೆ.