ಕೋಡಿ ಹಾಗೂ ಗಂಗೊಳ್ಳಿಯ ಬ್ರೇಕ್ ವಾಟರ್ ಅಲೆಗಳ ಅಬ್ಬರಕ್ಕೆ ಕುಸಿಯುತ್ತಿದೆ.
ರಾಘವೇಂದ್ರ ಪೈ ಗಂಗೊಳ್ಳಿ ಕುಂದಾಪುರ
ಗಂಗೊಳ್ಳಿ ಮೀನುಗಾರಿಕಾ ಬಂದರು ಸಂಪರ್ಕಿಸುವ ಕೋಡಿ- ಗಂಗೊಳ್ಳಿ ಅಳಿವೆ ಬಾಗಿಲು ವರ್ಷದಿಂದ ವರ್ಷಕ್ಕೆ ಮತ್ತಷ್ಟು ಅಪಾಯಕಾರಿಯಾಗುತ್ತಿದೆ. ಈಗಿರುವ ಬ್ರೇಕ್ ವಾಟರ್ ಜತೆಗೆ ಇನ್ನೂ ತಲಾ 500 ಮೀ. ವಿಸ್ತರಿಸಬೇಕು ಎಂಬ ಬೇಡಿಕೆಯಿದೆ. ಇಲ್ಲದಿದ್ದರೆ ಈ ಬಾರಿಯೂ ಮೀನುಗಾರರಿಗೆ ಈ ಅಳಿವೆ ಬಾಗಿಲು ಕಂಟಕವಾಗಿ ಪರಿಣಮಿಸಲಿದೆ.
ಈ ಅಳಿವೆ ಬಾಗಿಲಿನಲ್ಲಿ ದೋಣಿ, ಬೋಟುಗಳ ಸುಗಮ ಸಂಚಾರಕ್ಕಾಗಿ 8-9 ವರ್ಷಗಳ ಹಿಂದೆ ಎರಡೂ ಕಡೆಗಳಲ್ಲೂ ಬ್ರೇಕ್ ವಾಟರ್ ನಿರ್ಮಿಸಲಾಗಿದೆ. ಅದನ್ನೇ ಸೀವಾಕ್ ಆಗಿಯೂ ಪರಿವರ್ತಿಸಿ ಪ್ರವಾಸಿ ತಾಣವಾಗಿ ಬಳಸಲಾಗುತ್ತಿದೆ. ಕೋಡಿಯಲ್ಲಿ 900 ಮೀ. ಹಾಗೂ ಗಂಗೊಳ್ಳಿಯಲ್ಲಿ 700 ಮೀ. ಉದ್ದದ ಬ್ರೇಕ್ ವಾಟರ್ ನಿರ್ಮಿಸಲಾಗಿದೆ. ಅದನ್ನು ಇನ್ನೂ ತಲಾ 500 ಮೀ. ವಿಸ್ತರಿಸಬೇಕೆಂದು ಮೀನುಗಾರರು ಬೇಡಿಕೆ ಇಟ್ಟಿದ್ದಾರೆ.
ಮೀನುಗಾರರಲ್ಲಿ ಆತಂಕ
ಗಂಗೊಳ್ಳಿ ಬಂದರಿಗೆ ಪರ್ಸಿನ್, ಟ್ರಾಲ್, ತ್ರಿಸೆವೆಂಟಿ, ದೋಣಿಗಳ ಸಹಿತ ನೂರಾರು ಬೋಟುಗಳು ನಿತ್ಯ ಬಂದು ಹೋಗುತ್ತಿರುತ್ತವೆ. ಕೋಡಿ ಭಾಗದ ನೂರಾರು ಮಂದಿ ಮೀನುಗಾರರು ಕೂಡ ಇದೇ ಅಳಿವೆ ಬಾಗಿಲಿನ ಮೂಲಕ ಬರಬೇಕಾಗಿದೆ. ಪ್ರತಿ ಸಲ ಮೀನುಗಾರಿಕೆ ಮುಗಿಸಿ ಈ ಅಳಿವೆ ಬಾಗಿಲಲ್ಲಿ ಬರುವಾಗ ಜೀವ ಕೈಯಲ್ಲಿ ಹಿಡಿದುಕೊಂಡು ಬರಬೇಕಾದ ಪರಿಸ್ಥಿತಿ ಮೀನುಗಾರರದ್ದು. ಅದಕ್ಕಾಗಿ ಕನಿಷ್ಠ ತಲಾ 500 ಮೀ. ದೂರದವರೆಗಾದರೂ ಬ್ರೇಕ್ ವಾಟರ್ ವಿಸ್ತರಿಸಿದರೆ, ಅಳಿವೆ ಬಾಗಿಲು ಸಂಚಾರ ಸುರಕ್ಷಿತವಾಗಿರುತ್ತದೆ ಎನ್ನುವುದು ಮೀನುಗಾರರ ಕೂಗು.
ಮಲ್ಪೆಯಂತಹ ಬಂದರಿನ ಹತ್ತಿರ ಸಮುದ್ರದಲ್ಲಿ ಬಂಡೆಗಳು ಇರುವುದರಿಂದ ಅಲೆಗಳ ಅಬ್ಬರವನ್ನು ಅದು ತಡೆಯುತ್ತದೆ. ಆದರೆ ಇಲ್ಲಿ ಸಮುದ್ರದಲ್ಲಿ ಕಲ್ಲುಗಳು ಇಲ್ಲದಿರುವುದರಿಂದ ಬ್ರೇಕ್ ವಾಟರ್ ವಿಸ್ತರಣೆ ವಾಡಲೇಬೇಕು.
— ರಮೇಶ್ ಕುಂದರ್ ಗಂಗೊಳ್ಳಿ ಮೀನುಗಾರ ಮುಖಂಡ
ಕೋಡಿ- ಗಂಗೊಳ್ಳಿಯಲ್ಲಿ ಬ್ರೇಕ್ ವಾಟರ್ ವಿಸ್ತರಿಸಲು ನಾವು ಅನೇಕ ಬಾರಿ ಸಂಬಂಧಪಟ್ಟವರಿಗೆ ಮನವಿ ಕೊಟ್ಟಿದ್ದೇವೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಗಂಗೊಳ್ಳಿಯ ಜೆಟ್ಟಿ ಕುಸಿದು 34 ವರ್ಷ ಆಗಿವೆ. ಇನ್ನೂ ಅದರ ದುರಸ್ತಿಯಾಗಿಲ್ಲ.
— ಲಕ್ಷ್ಮೀನಾರಾಯಣ ಮಡಿವಾಳ, ಅಧ್ಯಕ್ಷ, ಪರ್ಸಿನ್ ಮೀನುಗಾರರ ಸ್ವಸಹಾಯ ಸಂಘ
ಸೆಂಟರ್ ವಾಟರ್ ಆ್ಯಂಡ್ ಪವರ್ ರಿಸರ್ಚ್ ಕೇಂದ್ರ ವತಿಯಿಂದ ಅಧ್ಯಯನ ನಡೆಸಿ, ಕೋಡಿ- ಗಂಗೊಳ್ಳಿಯ ಎರಡೂ ಕಡೆಗಳಲ್ಲಿ ತಲಾ 300 ಮೀ. ಬ್ರೇಕ್ ವಾಟರ್ ವಿಸ್ತರಣೆಗೆ ಸೂಚನೆ ನೀಡಿದ್ದರು. ಅದರಂತೆ ಸಾಗರ ವಾಲಾ 2.0 ಯೋಜನೆಯಡಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮೋದನೆ ಸಿಗುವ ಸಾಧ್ಯತೆಯಿದೆ.
— ಪ್ರಸನ್ನ ಶೇಟ್, ಇಂಜಿನಿಯರ್, ಬಂದರು ಮತ್ತು ಮೀನುಗಾರಿಕಾ ಇಲಾಖೆ