ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸೋಮೇಶ್ವರ ಪೇಟೆ. 
ಉಡುಪಿ

ಇಲಾಖೆ ಕೈಯಲ್ಲಿ ಮಕ್ಕಳ ಭವಿಷ್ಯ!

ನರೇಂದ್ರ ಎಸ್.ಮರಸಣಿಗೆ ಹೆಬ್ರಿ
ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದ ಸುಮಾರು 123 ವರ್ಷಗಳ ಇತಿಹಾಸವಿರುವ ಸೋಮೇಶ್ವರ ಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಯಂ ಶಿಕ್ಷಕರಿಲ್ಲದೆ ಮುಚ್ಚುವ ಭೀತಿಯಲ್ಲಿದೆ. ವಿದ್ಯಾರ್ಥಿಗಳ ಪಾಲಕರು ಹಾಗೂ ಎಸ್‌ಡಿಎಂಸಿ ಸದಸ್ಯರು ಸೇರಿ ಶಾಲೆಗೆ ಮಕ್ಕಳನ್ನು ಕಳುಹಿಸದೆ ಬಂದ್ ಮಾಡಿಸಿರುವ ಘಟನೆಯೂ ಬುಧವಾರ ನಡೆದಿದೆ.
ತೀರಾ ಗ್ರಾಮೀಣ ಪ್ರದೇಶವಾದ ನಾಡ್ಪಾಲು ಗ್ರಾಮದ ಸೋಮೇಶ್ವರ ಪೇಟೆ ಶಾಲೆ ಶೈಕ್ಷಣಿಕ, ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಅತ್ಯುತ್ತಮ ಶಾಲೆಯಾಗಿ ಮೂಡಿಬಂದಿತ್ತು. ಇಲ್ಲಿ 31 ವಿದ್ಯಾರ್ಥಿಗಳು ಕಲಿಯುತ್ತಿದ್ದು, ಜೂನ್ 30ರಂದು ಇದ್ದ ಒಬ್ಬ ಕಾಯಂ ಶಿಕ್ಷಕರು ನಿವೃತ್ತಿಯಾದರು. ನಂತರ ಮೂವರು ಅತಿಥಿ ಶಿಕ್ಷಕರಿಂದ ಶಾಲೆ ನಡೆಸುವ ಪರಿಸ್ಥಿತಿ ಉಂಟಾಗಿದೆ. ಕಾಯಂ ಶಿಕ್ಷಕರ ಅನುಪಸ್ಥಿತಿಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಕುಂಠಿತವಾಗುವ ಭಯದಲ್ಲಿ ವಿದ್ಯಾರ್ಥಿಗಳು ಬೇರೆ ಶಾಲೆಗಳಿಗೆ ಹೋದರೆ ಶಾಲೆ ಮುಚ್ಚುವ ಭೀತಿ ಉಂಟಾಗಿದೆ.

ಶಾಲೆಗೆ ಮಕ್ಕಳನ್ನು ಕಳುಹಿಸುವುದಿಲ್ಲ

ವಿದ್ಯಾರ್ಥಿಗಳ ಕಲಿಕೆಯ ಗುಣಮಟ್ಟದ ಬಗ್ಗೆ ಆತಂಕಗೊಂಡಿರುವ ಪಾಲಕರು ಹಾಗೂ ಎಸ್‌ಡಿಎಂಸಿಯವರು ಶಾಲೆಗೆ ಪರಿಪೂರ್ಣ ಕಾಯಂ ಶಿಕ್ಷಕರ ನೇಮಕಾತಿ ಆಗುವ ತನಕ ಮಕ್ಕಳನ್ನು ಶಾಲೆಗೆ ಕಳಿಸುವುದಿಲ್ಲ ಎಂದು ನಿರ್ಣಯ ಮಾಡಿದ್ದಾರೆ.

ವಾರಕ್ಕೆ ಒಂದು ದಿನ ಬೇಡ

ವಾರದಲ್ಲಿ ಒಂದು ದಿನ ಬರುವ ಕಾಯಂ ಶಿಕ್ಷಕರು ನಮ್ಮಲ್ಲಿ ಬೇಡ. ನಮಗೆ ವಾರದ ಆರು ದಿನ ಕೂಡ ಶಿಕ್ಷಕರ ಲಭ್ಯತೆ ಬೇಕು. ಗ್ರಾಮೀಣ ಭಾಗದ ಶಾಲೆಯನ್ನು ಉಳಿಸಲು ಊರಿನವರೆಲ್ಲ ಪಣತೊಟ್ಟಿದ್ದಾರೆ. ತಮ್ಮ ಬೇಡಿಕೆಗೆ ಕ್ರಮ ಕೈಗೊಳ್ಳುವಂತೆ ಎಸ್‌ಡಿಎಂಸಿ ಅಧ್ಯಕ್ಷೆ ನಾಗಲಕ್ಷ್ಮೀ ಮನವಿ ಮಾಡಿದ್ದಾರೆ.

ಕಾಯಂ ಶಿಕ್ಷಕರ ಕೊರತೆಯಿಂದ ಮಕ್ಕಳ ಕಲಿಕೆಯ ಮೇಲೆ ಪರಿಣಾಮ ಬೀರುತ್ತದೆ. ಮಕ್ಕಳ ಹಿತದೃಷ್ಟಿಯಿಂದ ಸೋಮೇಶ್ವರ ಪೇಟೆ ಶಾಲೆಗೆ ಕಾಯಂ ಶಿಕ್ಷಕರ ನಿಯೋಜನೆ ಶೀಘ್ರದಲ್ಲಿ ಮಾಡಬೇಕು. ಇದು ನಾಡ್ಪಾಲು ಗ್ರಾಮಸ್ಥರ ಹಕ್ಕೊತ್ತಾಯವಾಗಿದೆ. ಶತಮಾನದ ಇತಿಹಾಸ ಇರುವ ಶಾಲೆಯಲ್ಲಿ 31 ವಿದ್ಯಾರ್ಥಿಗಳ ಶಿಕ್ಷಣದ ಭವಿಷ್ಯ ಕುಂಠಿತವಾಗಲು ಇಲಾಖೆಯವರು ಕಾರಣಿಕರ್ತರಾಗಬಾರದು. ದಯವಿಟ್ಟು ನಮ್ಮ ಮನವಿಗೆ ಸೂಕ್ತ ಕ್ರಮ ಜರುಗಿಸಬೇಕು.

— ದಿನೇಶ್ ಹೆಗ್ಡೆ ಹಳೇ ವಿದ್ಯಾರ್ಥಿ, ಮಾಜಿ ಅಧ್ಯಕ್ಷ, ನಾಡ್ಪಾಲು ಗ್ರಾಪಂ

ಕಾಯಂ ಶಿಕ್ಷಕರು ನಿವೃತ್ತಿಯಾದ ಹಿನ್ನೆಲೆಯಲ್ಲಿ, ಒಬ್ಬ ಕಾಯಂ ಶಿಕ್ಷಕರನ್ನು ನಿಯೋಜನೆ ಮಾಡಿ ಅಲ್ಲಿ ನಡೆದ ಎಲ್ಲ ಪ್ರಕ್ರಿಯೆಗಳನ್ನು ಗಮನಿಸಲು ವಾರಕ್ಕೆ ಒಂದು ಸಲ ಬರಲು ತಿಳಿಸಲಾಗಿದೆ. ಕಾಯಂ ಶಿಕ್ಷಕರನ್ನು ತಕ್ಷಣವೇ ನಿಯೋಜನೆ ಮಾಡಲು ನಮಗೆ ಅಧಿಕಾರವಿಲ್ಲ. ಈಗಾಗಲೇ ಮೂವರು ಅತಿಥಿ ಶಿಕ್ಷಕರು ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಗ್ರಾಮಸ್ಥರು ಸಹಕಾರ ನೀಡಬೇಕು.

— ಗಿರಿಜಮ್ಮ ಬಿ.ಇ.ಒ, ಕಾರ್ಕಳ