ಸುಬ್ರಹ್ಮಣ್ಯದಲ್ಲಿ ಡ್ರಗ್ಸ್ ವಿರುದ್ಧ ಜನಜಾಗೃತಿ ಜಾಥಾವನ್ನು ಠಾಣಾಧಿಕಾರಿ ಆಂಜನೇಯ ರೆಡ್ಡಿ ಉದ್ಘಾಟಿಸಿದರು. ಸೋಮಶೇಖರ ನಾಯಕ್, ಮೋನಪ್ಪ.ಡಿ, ನಂದಾ ಹರೀಶ್, ಹೇಮಚಂದ್ರ ಮತ್ತಿತರರು ಉಪಸ್ಥಿತರಿದ್ದರು. 
ಉಡುಪಿ

ಮಾದಕ ದ್ರವ್ಯ ವ್ಯಸನದಿಂದ ಭವಿಷ್ಯ ಕರಾಳ

ಸುಬ್ರಹ್ಮಣ್ಯ: ಮಾದಕ ದ್ರವ್ಯ ವ್ಯಸನ ಮಕ್ಕಳ ಮನಸ್ಸನ್ನು ಹಾಳು ಮಾಡಿ ಓದು, ಮನೆಯನ್ನು ಸಂಪೂರ್ಣವಾಗಿ ನಾಶಗೊಳಿಸುತ್ತದೆ. ಯುವ ಜನಾಂಗದ ಭವಿಷ್ಯವನ್ನು ಶೂನ್ಯಗೊಳಿಸುತ್ತದೆ. ಆದುದರಿಂದ ಇಂತಹ ದುಶ್ಚಟಗಳಿಗೆ ಬಲಿಯಾಗಬಾರದು ಎಂದು ಸುಬ್ರಹ್ಮಣ್ಯ ಠಾಣಾಧಿಕಾರಿ ಆಂಜನೇಯ ರೆಡ್ಡಿ ಹೇಳಿದರು.
ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜು, ಸುಬ್ರಹ್ಮಣ್ಯ ಪೊಲೀಸ್ ಠಾಣೆ, ಜಿಲ್ಲಾ ಪೊಲೀಸ್ ಇಲಾಖೆ, ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ಹಾಗೂ ಕುಮಾರಸ್ವಾಮಿ ವಿದ್ಯಾಲಯದ ಆಶ್ರಯದಲ್ಲಿ ಸುಬ್ರಹ್ಮಣ್ಯದಲ್ಲಿ ಡ್ರಗ್ಸ್ ವಿರುದ್ಧ ಜನಜಾಗೃತಿ ಜಾಥಾ ಉದ್ಘಾಟಿಸಿ ಮಾತನಾಡಿದರು.
ದೇವಳದ ರಥಬೀದಿಯಿಂದ ಕುಮಾರಧಾರಾದ ಎಸ್‌ಎಸ್‌ಪಿಯು ಕಾಲೇಜಿನ ತನಕ ಬೃಹತ್ ಜಾಥಾ ನಡೆಯಿತು. 1200 ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಡ್ರಗ್ಸ್ ಜನಜಾಗೃತಿ ಫಲಕ ಹಿಡಿದು ಘೋಷಣೆ ಕೂಗುತ್ತಾ ಸಾಗಿದರು.
ಎಸ್‌ಎಸ್‌ಪಿಯು. ಕಾಲೇಜಿನ ಪ್ರಾಂಶುಪಾಲ ಸೋಮಶೇಖರ ನಾಯಕ್, ಪ್ರೌಢಶಾಲೆ ಮುಖ್ಯಶಿಕ್ಷಕ ನಂದಾ ಹರೀಶ್, ಪಂಚಾಯಿತಿ ಕಾರ್ಯದರ್ಶಿ ಮೋನಪ್ಪ ಡಿ., ಕುಮಾರಸ್ವಾಮಿ ವಿದ್ಯಾಲಯದ ಪ್ರಾಂಶುಪಾಲರಾದ ಸಂಕೀರ್ತನ ಹೆಬ್ಬಾರ್, ಕಾರ್ಯಕ್ರಮ ಸಂಘಟಕ ಹೇಮಚಂದ್ರ, ಪ್ರಮುಖರಾದ ರವಿ ಕಕ್ಕೆಪದವು, ವಿನಿತಾ, ಆನಂದ್ ಸೇರಿದಂತೆ ಉಪನ್ಯಾಸಕರು, ಶಿಕ್ಷಕರು ಜಾಥಾದಲ್ಲಿ ಭಾಗವಹಿಸಿದ್ದರು.