ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಹೇರಂಜಾಲು ಗ್ರಾಮದ ಶ್ರೀ ಗುಡೇ ಮಹಾಲಿಂಗೇಶ್ವರ ದೇವಸ್ಥಾನದ ರಾಜಗೋಪುರವನ್ನು ಘಟಪ್ರಭಾ ಗುಬ್ಬಲಗುಡ್ಡ ಕೆಂಪಯ್ಯಸ್ವಾಮಿ ಮಠಾಧೀಶ ಶ್ರೀ ಮ.ನಿ.ಪ್ರ.ಸ್ವ ಡಾ.ಮಲ್ಲಿಕಾರ್ಜುನ ಮಹಾಸ್ವಾಮಿ ಲೋಕಾರ್ಪಣೆಗೊಳಿಸಿದರು. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕ ಬಾಲಚಂದ್ರ ಜಾರಕಿಹೊಳಿ, ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ, ದೇವಳ ಗೌರವಾಧ್ಯಕ್ಷ ಎಚ್.ಜಯಶೀಲ ಎನ್.ಶೆಟ್ಟಿ ಮತ್ತಿತರರು ಇದ್ದರು.
ವಿಜಯವಾಣಿ ಸುದ್ದಿಜಾಲ ಬೈಂದೂರು
ಮನುಷ್ಯ ತನ್ನ ಜೀವಿತಾವಧಿಯಲ್ಲಿ ಧಾರ್ಮಿಕ ಪ್ರಜ್ಞೆ ಬೆಳೆಸಿಕೊಂಡು ಭಗವಂತನ ಕೃಪೆ ಪಡೆಯುವುದಲ್ಲದೆ ತನ್ನ ಕಾರ್ಯಕ್ಷೇತ್ರದಲ್ಲಿ ಪ್ರಯತ್ನಶೀಲನಾದಾಗ ಯಶಸ್ಸು ಪಡೆಯಲು ಸಾಧ್ಯ. ಉತ್ತಮ ಮನಸ್ಸಿನಿಂದ ಮಾಡಿದ ಕಾರ್ಯಗಳಿಗೆ ಉತ್ತಮ ಫಲ ದೊರೆಯುತ್ತದೆ ಎಂದು ಘಟಪ್ರಭಾ ಗುಬ್ಬಲಗುಡ್ಡ ಕೆಂಪಯ್ಯಸ್ವಾಮಿ ಮಠಾಧೀಶ ಶ್ರೀ ಮ.ನಿ.ಪ್ರ.ಸ್ವ ಡಾ.ಮಲ್ಲಿಕಾರ್ಜುನ ಮಹಾಸ್ವಾಮಿ ಹೇಳಿದರು.
ಹೇರಂಜಾಲು ಗ್ರಾಮದ ಶ್ರೀ ಗುಡೇ ಮಹಾಲಿಂಗೇಶ್ವರ ದೇವಸ್ಥಾನದ ರಾಜಗೋಪುರವನ್ನು ಗುರುವಾರ ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡಿದರು.
ಬಹುತೇಕ ವೃದ್ಧ ತಂದೆ-ತಾಯಿಗಳನ್ನು ವೃದ್ಧಾಶ್ರಮಕ್ಕೆ ಕಳುಹಿಸುವ ಕಾಲಘಟ್ಟದಲ್ಲಿ ಈ ದೇವಳದ ಮಹಾ ರಾಜಗೋಪುರದ ಸೇವಾಕರ್ತ ಜಯಶೀಲ ಶೆಟ್ಟಿ ಅವರು ಭೌತಿಕವಾಗಿ ತನ್ನೊಂದಿಗೆ ಇಲ್ಲದ ತಂದೆ-ತಾಯಿಗಳ ಸಂಕಲ್ಪದಂತೆ ರಾಜಗೋಪುರ ನಿರ್ಮಿಸಿರುವುದು ಪುಣ್ಯದ ಕಾರ್ಯ. ತನ್ನ ದುಡಿಮೆಯ ಬಹುಪಾಲನ್ನು ಸಮಾಜದ ಸತ್ಕಾರ್ಯಗಳಿಗೆ ವಿನಿಯೋಗಿಸುವ ಮೂಲಕ ಮಾದರಿಯಾಗಿದ್ದಾರೆ ಎಂದರು.
ದೇವಳದ ಧ್ವಜಸ್ತಂಭ ಹಾಗೂ ಹೆಬ್ಬಾಗಿಲನ್ನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಉದ್ಘಾಟಿಸಿದರು. ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಭೋಜನಶಾಲೆ ಮತ್ತು ಯಾಗಶಾಲೆ ಉದ್ಘಾಟಿಸಿದರು. ರಾಜಗೋಪುರ ಸೇವಾಕರ್ತ, ದೇವಳ ಗೌರವಾಧ್ಯಕ್ಷ ಎಚ್.ಜಯಶೀಲ ಎನ್.ಶೆಟ್ಟಿ ಅವರನ್ನು ಮಠದ ವತಿಯಿಂದ ಸ್ವಾಮೀಜಿ ಗೌರವಿಸಿದರು.
ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಉದ್ಯಮಿ ಕಿಶೋರ ಕುಮಾರ್ ಹೆಗ್ಡೆ, ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್, ಜಿಪಂ ಸಿಇಒ ಪ್ರತೀಕ್ ಬಾಯಲ್, ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ಮೆರ್ಟ, ಖಜಾಂಚಿ ಎಚ್.ವಿಜಯ್ ಶೆಟ್ಟಿ ಉಪಸ್ಥಿತರಿದ್ದರು.
ಆರ್‌ಜೆ ನಯನಾ ಹಾಗೂ ಪತ್ರಕರ್ತ ಕೆ.ಸಿ.ರಾಜೇಶ್ ನಿರೂಪಿಸಿದರು. ಉತ್ಸವ ಪ್ರಚಾರ ಸಮಿತಿ ಸಂಚಾಲಕ ಬಟ್ನಾಡಿ ಅಣ್ಣಪ್ಪ ಶೆಟ್ಟಿ ವಂದಿಸಿದರು. ಮಧ್ಯಾಹ್ನ ಸಹಸ್ರಾರು ಭಕ್ತರು ಮಹಾಅನ್ನಪ್ರಸಾದ ಸ್ವೀಕರಿಸಿದರು.
ದೇವಾಲಯಗಳು ಸಾಂಸ್ಕೃತಿಕ, ಧಾರ್ಮಿಕ ಪ್ರಜ್ಞೆಯ ಪ್ರತೀಕ. ಊರಿನಲ್ಲಿರುವ ದೇವಾಲಯಗಳು ಜನಸಮುದಾಯದ ಅಭಿವೃದ್ಧಿಗೆ ಕಾರಣವಾಗುವುದಲ್ಲದೆ ಸಮಾಜ ಶಕ್ತಿಯುತವಾಗಿ ವಿಸ್ತಾರಗೊಳ್ಳಲು ಸಹಕಾರಿಯಾಗುತ್ತದೆ. ದೇವಳಗಳ ಮೂಲಕ ಜೀವನದಲ್ಲಿ ಶಾಂತಿ, ಸಮಾಧಾನ, ನೆಮ್ಮದಿ, ತೃಪ್ತಿ ಪ್ರಾಪ್ತಿಯಾಗಿ ಜೀವನ ಮಂಗಲಮಯವಾಗುತ್ತದೆ. ಜನರಲ್ಲಿ ಸಾತ್ವಿಕತೆ ಬೆಳೆಯಬೇಕು. ಸಂಸ್ಕಾರವಂತರಾಗಿ ಉತ್ತಮ ಜೀವನ ನಡೆಸುವಂತಾಗಬೇಕು.
ಸೇತುವೆ, ರಸ್ತೆ ಹಾಗೂ ಆಸ್ಪತ್ರೆ ಅಭಿವೃದ್ಧಿ ಮಾಡಿದರೆ ಕೇವಲ ಆ ಭಾಗದ ಜನರ ಅಭಿವೃದ್ಧಿಯಾಗುತ್ತದೆ. ದೇವಳಗಳ ಅಭಿವೃದ್ಧಿಯಿಂದ ಇಡೀ ಮಾನವಕುಲವೇ ಅಭಿವೃದ್ಧಿಯಾಗುತ್ತದೆ. ಪ್ರತಿಯೊಂದರಲ್ಲೂ ದೇವರನ್ನು ಕಾಣುವುದು ಈ ಮಣ್ಣಿನ ಸಂಸ್ಕೃತಿ. ಅದರಲ್ಲೂ ಉಡುಪಿ ಜಿಲ್ಲೆ ದೇವರ ನಾಡು. ಇಲ್ಲಿನ ದೇವಾಲಯಗಳು ಅನ್ನಪ್ರಸಾದದ ಮೂಲಕ ಬಡವರ ಹಸಿವು ನೀಗಿಸುವ ಕಾರ್ಯ ಮಾಡುತ್ತಿವೆ. ಈ ಭಾಗದ ಜನರು ದೇವರ ಸೇವೆಯಲ್ಲಿ ಪಕ್ಷಭೇದ ಮರೆತು ಸಂಘಟಿತರಾಗುವುದು ಶ್ಲಾಘನೀಯ.