ಜಿಲ್ಲಾಧ್ಯಕ್ಷ ಅಶೋಕ್​ ಕುಮಾರ್​ ಕೊಡವೂರು ಉದ್ಘಾಟಿಸಿದರು.  
ಉಡುಪಿ

ಹಿಂದುಳಿದ ವರ್ಗಕ್ಕೆ ರಾಜಕೀಯ ಶಕ್ತಿ ನೀಡಿದ ಅರಸು: ಡಾ. ಗಣನಾಥ ಶೆಟ್ಟಿ

ಉಡುಪಿ: ರಾಜ್ಯದಲ್ಲಿ 1970ರ ದಶಕದಲ್ಲಿ ದಲಿತರು ಹಾಗೂ ಹಿಂದುಳಿದ ವರ್ಗದವರನ್ನು ರಾಜಕೀಯದ ಮುಖ್ಯವಾಹಿನಿಗೆ ತಂದ ಶ್ರೇಯಸ್ಸು ದೇವರಾಜ ಅರಸು ಅವರಿಗೆ ಸಲ್ಲುತ್ತದೆ. ಸಮುದಾಯದ ನಾಯಕರನ್ನು ಮಂತ್ರಿಗಳನ್ನಾಗಿ ಮಾಡುವ ಮೂಲಕ ಸಾಮಾಜಿಕ ನ್ಯಾಯಕ್ಕೆ ಅಡಿಪಾಯ ಹಾಕಿದ್ದರು ಎಂದು ಎಂದು ಶಿವರಾಮ ಕಾರಂತ ಟ್ರಸ್ಟ್​ ಅಧ್ಯಕ್ಷ ಡಾ. ಗಣನಾಥ ಶೆಟ್ಟಿ ಎಕ್ಕಾರು ತಿಳಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್​ ಸಮಿತಿ, ಜಿಲ್ಲಾ ರಾಜೀವ್​ ಗಾಂಧಿ ಪಂಚಾಯತ್​ ರಾಜ್​ ಸಂಘಟನೆ ವತಿಯಿಂದ ನಡೆದ ಮಾಜಿ ಪ್ರಧಾನಿ ದಿ. ರಾಜೀವ್​ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದಿ. ದೇವರಾಜ್​ ಅರಸು ಜನ್ಮ ದಿನಾಚರಣೆಯಲ್ಲಿ ಉಪನ್ಯಾಸ ನೀಡಿದರು.

ಭೂಸುಧಾರಣಾ ಕಾಯ್ದೆ ಕರಾವಳಿ ಹಾಗೂ ರಾಜ್ಯದ ಸಾಮಾಜಿಕ-&ಆರ್ಥಿಕ ಸ್ಥಿತಿಯಲ್ಲಿ ಮಹತ್ತರ ಬದಲಾವಣೆ ತಂದಿತು. ಜಮೀನು ಕಳೆದುಕೊಂಡವರು ಉದ್ಯೋಗ ಅರಸಿ ಹೊರಹೋಗಿ ಆರ್ಥಿಕವಾಗಿ ಸಬಲರಾದರೆ, ಭೂಮಿ ಪಡೆದ ಶೋಷಿತ ವರ್ಗದವರಿಗೆ ಸ್ವತಂತ್ರ ಬದುಕು ಕಟ್ಟಿಕೊಳ್ಳಲು ನೆರವಾಯಿತು ಎಂದರು.

ಕರ್ನಾಟಕ ನಾಮಕರಣ
ಮೈಸೂರು ರಾಜ್ಯಕ್ಕೆ 'ಕರ್ನಾಟಕ' ಎಂದು ಅಧಿಕೃತವಾಗಿ ನಾಮಕರಣ ಮಾಡುವ ಮೂಲಕ ಕನ್ನಡಿಗರಿಗೆ ಭಾವನಾತ್ಮಕ ಗುರುತು ನೀಡಿದವರು ಅರಸು. ಜೊತೆಗೆ ವೃದ್ಧಾಪ್ಯ ವೇತನ, ಉಚಿತ ನಿವೇಶನ ಹಾಗೂ 20 ಅಂಶಗಳ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿದ್ದರು ಎಂದರು.

ಜಿಲ್ಲಾಧ್ಯಕ್ಷ ಅಶೋಕ್​ ಕುಮಾರ್​ ಕೊಡವೂರು ಉದ್ಘಾಟಿಸಿದರು. ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ರಮೇಶ್​ ಕಾಂಚನ್​, ಪ್ರಚಾರ ಸಮಿತಿ ಅಧ್ಯಕ್ಷ ಹರೀಶ್​ ಕಿಣಿ, ಮುಖಂಡರಾದ ಹರಿಪ್ರಸಾದ್​ ರೈ, ಮಹಾಬಲ ಕುಂದರ್​ ಮೊದಲಾದವರು ಉಪಸ್ಥಿತರಿದ್ದರು.