ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್- ಶ್ರೀ ರಾಮ ಭಕ್ತರ ಹೆಸರಿನಲ್ಲಿ ಅಕ್ಕಪಕ್ಕ ಅಳವಡಿಸಿದ ಫ್ಲೆಕ್ಸ್. 
ಉಡುಪಿ

ತಾರಕಕ್ಕೇರಿದ ಕಾಂಗ್ರೆಸ್-ರಾಮ ಭಕ್ತರ ಫ್ಲೆಕ್ಸ್ ವಾರ್

ಕುಂದಾಪುರ: ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಮತ್ತು ರಾಮ ಭಕ್ತರ ನಡುವೆ ಫ್ಲೆಕ್ಸ್ ವಾರ್ ತಾರಕಕ್ಕೇರಿದ್ದು, ಎರಡೂ ಪಕ್ಷಗಳ ಫ್ಲೆಕ್ಸ್ ವಾರ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಅಯೋಧ್ಯೆ ಶ್ರೀ ರಾಮ ಮಂದಿರದ ಹುಂಡಿ ಕಳವು ಪ್ರಕರಣದ ಬಗ್ಗೆ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಕುಂದಾಪುರ ಕ್ಷೇತ್ರದ ವಿವಿಧೆಡೆ ಫ್ಲೆಕ್ಸ್ ಅಳವಡಿಸಿದ್ದರೆ, ಅದಕ್ಕೆ ಪ್ರತಿಯಾಗಿ ಗೃಹಲಕ್ಷ್ಮೀ, ಮುಡಾ ಮತ್ತು ವಾಲ್ಮೀಕಿ ಹಗರಣವನ್ನು ಕೆದಕಿ ಶ್ರೀ ರಾಮ ಭಕ್ತರ ಹೆಸರಿನಲ್ಲಿ ಫ್ಲೆಕ್ಸ್ ಅಳವಡಿಸಲಾಗಿದೆ. ವಿಶೇಷವೆಂದರೆ ಒಂದು ಪಕ್ಷದ ಫ್ಲೆಕ್ಸ್ ಸಮೀಪವೇ ಇನ್ನೊಂದು ಫ್ಲೆಕ್ಸ್ ಅಳವಡಿಸಲಾಗಿದೆ. ಕಾಂಗ್ರೆಸ್-ಶ್ರೀ ರಾಮ ಭಕ್ತರ ಫ್ಲೆಕ್ಸ್ ವಾರ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಪರ-ವಿರೋಧದ ವ್ಯಾಪಕ ಚರ್ಚೆ ನಡೆಯುತ್ತಿದೆ.
ರಾಜ್ಯ, ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದ ಸಾಲು ಸಾಲು ಹಗರಣಗಳು ಮತ್ತು ವಿವಾದಗಳು ಗ್ರಾಮಮಟ್ಟಕ್ಕೂ ತಲುಪಿದ್ದು, ಕಾಂಗ್ರೆಸ್-ಶ್ರೀ ರಾಮ ಭಕ್ತರು ಅಳವಡಿಸಿರುವ ಫ್ಲೆಕ್ಸ್ ಚರ್ಚೆಗೆ ಕಾರಣವಾಗಿದೆ.