ಮರಮಟ್ಟುಗಳ ನಡುವೆ ಕೆಎಫ್‌ಡಿಸಿ ತರಬೇತಿ ಕೇಂದ್ರ ಕಟ್ಟಡ ಹುದುಗಿರುವುದು.
ವಿಜಯವಾಣಿ ಸುದ್ದಿಜಾಲ ಕುಂದಾಪುರ
ಗಂಗೊಳ್ಳಿ ಮೀನುಗಾರಿಕೆ ಬಂದರು ಸನಿಹದಲ್ಲೇ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮಕ್ಕೆ ಸೇರಿದ ಆಸ್ತಿಗಳು ಮೂಲೆಗುಂಪಾಗಿ ಪಾಳುಕೊಂಪೆಯಂತೆ ಗೋಚರಿಸುತ್ತಿದೆ. ಕಟ್ಟಡಗಳು ಅತ್ಯಂತ ದುರ್ಬಲ ಸ್ಥಿತಿಗೆ ತಲುಪಿದ್ದು, ಅಪಾಯ ಎದುರಾಗಿದೆ.
ಅಂದಾಜು 3 ಎಕರೆ ಜಾಗದಲ್ಲಿ ವಿಸ್ತರಿಸಿಕೊಂಡಿರುವ ಮೀನುಗಾರಿಕಾ ತರಬೇತಿ ಕೇಂದ್ರದ ಕಟ್ಟಡ, ವಸತಿಗೃಹಗಳ ಕಟ್ಟಡ ನೆಲಕ್ಕೊರಗುವ ಸ್ಥಿತಿಯಲ್ಲಿವೆ. ಕಾರ್ಯ ಸ್ಥಗಿತಗೊಳಿಸಿದ್ದ ಮಂಜುಗಡ್ಡೆ ಸ್ಥಾವರ ಕಟ್ಟಡ ನೆಲಸಮಗೊಳಿಸಲಾಗಿದ್ದರೂ ಎದುರಿಗಿರುವ ಮೀನುಗಾರಿಕೆ ತರಬೇತಿ ಕೇಂದ್ರ ಕಟ್ಟಡ ನೆಲಕ್ಕುರುಳುವ ಸನ್ನಿಹಿತವಾಗಿದೆ. 1985ರಲ್ಲಿ ಮೀನುಗಾರಿಕಾ ತರಬೇತಿ ಸಲುವಾಗಿ ನಿರ್ಮಿಸಲಾದ ಈ ಕಟ್ಟಡದ ಬಾಗಿಲು, ಕಿಟಕಿ, ಸುರು ಕಳಚಿ ಬಿದ್ದಿದೆ.
ಕ್ವಾರ್ಟರ್ಸ್ ಅಪಾಯದಲ್ಲಿ
ಕೆಎಫ್‌ಡಿಸಿ ಕ್ವಾರ್ಟರ್ಸ್ ಅಪಾಯ ಎದುರಿಸುತ್ತಿದೆ. ಹೆಂಚಿನ ಸೂರಿನ ಹಳೇ ಕಾಲದ ಕಟ್ಟಡಗಳು ಈಗಲೋ ಆಗಲೋ ಎಂಬಂತಿವೆ. ಸೂರು ಜರ್ಜರಿತಗೊಂಡಿದೆ. ಕಿಟಕಿ, ಬಾಗಿಲುಗಳಿಗೆ ಗೆದ್ದಲು ಹಿಡಿದಿದೆ. ಸುತ್ತಲೂ ಆವರಿಸಿರುವ ಗಿಡ-ಮರ, ಪೊದೆಗಳು ನಿವಾಸಿಗಳ ಸಂಕಟ ಹೆಚ್ಚಿಸಿವೆ. ಕತ್ತಲಾಗುತ್ತಿರುವಂತೆಯೇ ನಿವಾಸಕ್ಕೆ ಸೇರುವ ಹಾವು, ಚೇಳು ಓಡಿಸುವುದೇ ಕಾಯಕವಾಗಿದೆ. ಕ್ವಾರ್ಟರ್ಸ್ ಮೊದಲು ಇಲಾಖಾ ಸಿಬ್ಬಂದಿಗೆ ಮೀಸಲಾಗಿತ್ತು. ಪ್ರಸ್ತುತ ಅನ್ಯರಿಗೆ ಬಾಡಿಗೆ ಆಧಾರದಲ್ಲಿ ನೀಡಲಾಗಿದೆ. ಹೆಂಚಿನ ಸೂರಿನ ಮನೆಗಳಿಗೆ ಹೆಚ್ಚು ಕಡಿಮೆ 35 ವರ್ಷ ಸಂದುಹೋಗಿದೆ. ಸುಣ್ಣ ಬಣ್ಣ ಕಾಣದೆ ವರ್ಷಗಳೇ ಸಂದು ಹೋಗಿವೆ. ಹೆಚ್ಚಿನ ಟಾಯ್ಲೆಟ್‌ಗಳು ಬಿದ್ದುಹೋಗಿವೆ. ವಸತಿಗೃಹದ ನೆಲ ಕಿತ್ತುಹೋಗಿದೆ. ಬಾಡಿಗೆಗೆ ನೆಲೆಸಿರುವವರು ಅವ್ಯವಸ್ಥೆಯ ನಡುವೆಯೂ ಬದುಕುತ್ತಿದ್ದಾರೆ. ಇಲ್ಲಿರುವ 24 ವಸತಿಗೃಹಗಳು ಅತ್ಯಂತ ದುರ್ಬಲ ಸ್ಥಿತಿಗೆ ತಲುಪಿವೆ.
ಸರ್ಕಾರಿ ಆಸ್ತಿಗೆ ಸೂಕ್ತ ರಕ್ಷಣೆಯಿಲ್ಲದ ಪರಿಸ್ಥಿತಿ ತಲೆದೋರಿದೆ. ಮೀನುಗಾರಿಕೆ ವಲಯದಲ್ಲಿನ ನಿರ್ಲಕ್ಷ್ಯ ಸಲ್ಲ. ಕೆಎಫ್‌ಡಿಸಿ ಸಂಬಂಧಿಸಿದ ಆಸ್ತಿಗಳ ರಕ್ಷಣೆ ಮತ್ತು ಅಭಿವೃದ್ಧಿಗೆ ಸರ್ಕಾರ ಮುತುವರ್ಜಿ ವಹಿಸಬೇಕು.
— ರಾಮಪ್ಪ ಖಾರ್ವಿ ಗಂಗೊಳ್ಳಿ ಮೀನುಗಾರ ಮುಖಂಡ
ಕೆಎಫ್‌ಡಿಸಿಗೆ ಸೇರಿದ ಆಸ್ತಿಗಳು ಪೂರ್ಣ ನಿರ್ಲಕ್ಷಕ್ಕೊಳಪಟ್ಟಿವೆ. ಜಾಗದ ಅತಿಕ್ರಮಣ ನಡೆದಿದೆ. ಮೀನುಗಾರರ ಅನುಕೂಲಕ್ಕೆಂದಿದ್ದ ಸರ್ಕಾರಿ ಆಸ್ತಿಗೆ ಹೇಳುವವರು ಕೇಳುವವರಿಲ್ಲ ಎಂಬಷ್ಟರ ಮಟ್ಟಿಗೆ ಹೋಗಿದೆ. ಸಂಬಂಧಿತರು ಗಮನಿಸಬೇಕಿದೆ.
— ಕೃಷ್ಣ ಕೋಟಾನ್ ಗಂಗೊಳ್ಳಿ ಗ್ರಾ.ಪಂ. ಮಾಜಿ ಸದಸ್ಯ