ಸ್ವರ್ಣ ಲೇಪಿತ 'ಪಾರ್ಥ ಸಾರಥಿ' ರಥದೊಂದಿಗೆ ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ಶ್ರೀ ಹಾಗೂ ಸುಶ್ರೀಂದ್ರ ಶ್ರೀ.
* ಡಿ.26ರಂದು ಉಡುಪಿ ಶ್ರೀಕೃಷ್ಣನಿಗೆ ತೇರು ಸಮರ್ಪಣೆ
* ಪುತ್ತಿಗೆ ಶ್ರೀಗಳಿಂದ ಪರ್ಯಾಯ ಸ್ಮರಣಾರ್ಥ ಕೊಡುಗೆ
ಉಡುಪಿ: ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ತಮ್ಮ ಚತುರ್ಥ ಪರ್ಯಾಯ, ಕೋಟಿ ಗೀತಾ ಲೇಖನ ಯಜ್ಞ ಹಾಗೂ 50ನೇ ವರ್ಷದ ಸನ್ಯಾಸ ಜೀವನದ ಸ್ಮರಣಾರ್ಥ ಉಡುಪಿ ಶ್ರೀಕೃಷ್ಣನಿಗೆ 'ಪಾರ್ಥ ಸಾರಥಿ' ಎಂಬ ಸ್ವರ್ಣ ಲೇಪಿತ ರಥವನ್ನು ಕೊಡುಗೆಯಾಗಿ ನೀಡಲು ಸಂಕಲ್ಪಿಸಿದ್ದಾರೆ.
ಭಕ್ತರ ಸಹಕಾರದೊಂದಿಗೆ ರಥ ನಿರ್ಮಾಣಗೊಂಡಿದ್ದು, ಸ್ವರ್ಣ ಲೇಪನ ಕಾರ್ಯ ಆರಂಭಗೊಂಡಿದೆ. ಸುಂದರವಾದ ತೇರು ಸಿದ್ಧಗೊಳ್ಳುತ್ತಿದೆ. ಡಿ.26ರಂದು ಶ್ರೀಕೃಷ್ಣನಿಗೆ ರಥದ ಸಮಪ್ಣೆ ಹಾಗೂ ಡಿ.27ರಂದು ಪ್ರಥಮ ರಥೋತ್ಸವ ನಡೆಯಲಿದೆ.
ಮಂತ್ರಾಲಯ ಶ್ರೀ ಉದ್ಘಾಟನೆ
ರಥ ಸಮರ್ಪಣೆ ನಿಮಿತ್ತ ಡಿ.26ರಂದು ಮಧ್ಯಾಹ್ನ 3:30ಕ್ಕೆ ಜೋಡುಕಟ್ಟೆಯಿಂದ ಉಡುಪಿ ಮಠದ ವರೆಗೆ ವೈಭವದ ಶೋಭಾಯಾತ್ರೆ ನಡೆಯಲಿದ್ದು, ಮಂತ್ರಾಲಯ ಮಠದ ಸುಬುಧೇಂದ್ರ ತೀರ್ಥ ಶ್ರೀಪಾದರು ಮೆರವಣಿಗೆ ಉದ್ಘಾಟಿಸಲಿದ್ದಾರೆ. ಸಂಜೆ 6ಕ್ಕೆ ರಾಜಾಂಗಣದಲ್ಲಿ ಪರ್ಯಾಯ ಸುಗುಣೇಂದ್ರ ತೀರ್ಥ ಶ್ರೀಪಾದರು, ಕಿರಿಯ ಯತಿ ಸುಶ್ರೀಂದ್ರ ತೀರ್ಥ ಶ್ರೀಪಾದರು, ಮಂತ್ರಾಲಯ ಶ್ರೀಗಳ ಸಾನ್ನಿಧ್ಯದಲ್ಲಿ ಹಾಗೂ ಅನೇಕ ಗಣ್ಯರ ಉಪಸ್ಥಿತಿಯಲ್ಲಿ ಧರ್ಮ ಸಭೆ ನಡೆಯಲಿದೆ.
ಅದಮಾರು ಶ್ರೀ ಚಾಲನೆ
ಡಿ.27ರಂದು ಸಂಜೆ 6ಕ್ಕೆ ಉಡುಪಿಯ ರಥಬೀದಿಯಲ್ಲಿ ಪಾರ್ಥ ಸಾರಥಿ ಸ್ವರ್ಣ ರಥದಲ್ಲಿ ಶ್ರೀಕೃಷ್ಣನ ಉತ್ಸವ ಮೂರ್ತಿಯನ್ನಿಟ್ಟು ಪ್ರಥಮ ರಥೋತ್ಸವಕ್ಕೆ ಅದಮಾರು ಮಠದ ವಿಶ್ವಪ್ರಿಯ ತೀರ್ಥ ಶ್ರೀಪಾದರು ಚಾಲನೆ ನೀಡಲಿದ್ದಾರೆ. ಮಂತ್ರಾಲಯದ ಸುಬುಧೇಂದ್ರ ಸ್ವಾಮೀಜಿ, ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು, ಭಂಡಾರಕೇರಿ ಮಠದ ವಿದ್ಯೇಶ ತೀರ್ಥ ಶ್ರೀಪಾದರು, ಪರ್ಯಾಯ ಸುಗುಣೇಂದ್ರ ತೀರ್ಥ ಶ್ರೀಪಾದರು ಹಾಗೂ ಕಿರಿಯ ಯತಿ ಸುಶ್ರೀಂದ್ರ ತೀರ್ಥ ಶ್ರೀಪಾದರು ಪಾಲ್ಗೊಳ್ಳಲಿದ್ದಾರೆ ಎಂದು ಮಠದ ದಿವಾನ ನಾಗರಾಜ ಆಚಾರ್ಯ ಹಾಗೂ ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ತಿಳಿಸಿದ್ದಾರೆ.
ಮಹಾಭಾರತದ ಯುದ್ಧದ ಸಂದರ್ಭದಲ್ಲಿ ಕುರುಕ್ಷೇತ್ರದಲ್ಲಿ ಹತಾಶನಾದ ಅರ್ಜುನನಿಗೆ ಸಾರಥಿಯಾಗಿದ್ದ ಶ್ರೀಕೃಷ್ಣನು ರಥದಲ್ಲಿಯೇ ನಿಂತು ಗೀತೋಪದೇಶ ಮಾಡಿದ್ದನು. ಧರ್ಮ ಜೀವನ ಹೇಗಿದೆ, ಹೇಗಿರಬೇಕು ಎಂಬ ಕುರಿತು ನೀಡಿದ ಸಂದೇಶಗಳೆಲ್ಲವೂ ನಮ್ಮೆಲ್ಲರ ಬದುಕಿಗೆ ಮಾರ್ಗದರ್ಶಿಯಾಗಿದೆ. ಗೀತೆಯ ಅನುಸರಣೆಯಿಂದ ಬದುಕಿನಲ್ಲಿ ದುಗುಡ, ಕಷ್ಟ ಇರದು. ಅದನ್ನು ಜನಮಾನಸಕ್ಕೆ ತಲುಪಿಸಲೆಂದೇ ಕೋಟಿ ಗೀತಾ ಅಭಿಯಾನ ಕೈಗೊಂಡಿದ್ದೇವೆ. ನಮ್ಮ ವಿಶ್ವ ಗೀತಾ ಚತುರ್ಥ ಪರ್ಯಾಯ ಹಾಗೂ ಸನ್ಯಾಸ ಜೀವನದ ಸುವಣೋರ್ತ್ಸವದ ಸವಿ ನೆನಪಿಗಾಗಿ ಸದ್ಭಕ್ತರ ಸಹಕಾರದಲ್ಲಿ 'ಪಾರ್ಥ ಸಾರಥಿ' ಎಂಬ ಸ್ವರ್ಣ ಲೇಪಿತ ರಥವನ್ನು ಉಡುಪಿ ಕೃಷ್ಣನಿಗೆ ಕೊಡುಗೆಯಾಗಿ ಸಮರ್ಪಿಸುತ್ತಿದ್ದೇವೆ.