ಪೆರ್ಲ ಸನಿಹದ ಬೆದ್ರಂಪಳ್ಳದ ವಿಶಾಲ ಮದಗಕ್ಕೆ ನೀರು ಹರಿದುಬರುವ ಜಾಗದಲ್ಲೇ ಕಾಂಕ್ರೀಟ್ ಕಾಮಗಾರಿ ನಡೆಸಲಾಗುತ್ತಿದೆ.
ಪುರುಷೋತ್ತಮ ಪೆರ್ಲ ಕಾಸರಗೋಡು
ಮಂಜೇಶ್ವರ ತಾಲೂಕಿನ ವಿವಿಧೆಡೆ ಅಸ್ತಿತ್ವದಲ್ಲಿರುವ ಪಾರಂಪರಿಕ ಜಲ ಸಂಗ್ರಹಾಗಾರಗಳು ಭೂ ಮಾಫಿಯಾಗಳ ಪಾಲಾಗುವ ಮೂಲಕ ವಿನಾಶದ ಅಂಚಿಗೆ ತಲುಪುತ್ತಿವೆ. ಜಲ ಸಂರಕ್ಷಣೆ ಬಗ್ಗೆ ಜನತೆಗೆ ಬೋಧನೆ ನೀಡುತ್ತಿರುವ ಅಧಿಕಾರಿಗಳು, ತಮ್ಮ ಕಣ್ಣೆದುರು ನಡೆಯುತ್ತಿರುವ ಭೂ ಕಬಳಿಕೆ ವಿರುದ್ಧ ಮೌನ ಪಾಲಿಸುತ್ತಿರುವುದು ಆಡಳಿತ ವ್ಯವಸ್ಥೆಯನ್ನು ಅಣಕಿಸುವಂತಿದೆ.
ಎಣ್ಮಕಜೆ ಪಂಚಾಯಿತಿ ವ್ಯಾಪ್ತಿಯ ಇಟ್ಟಿಪಳ್ಳ, ಬೆದ್ರಂಪಳ್ಳ ಮದಗ, ಅನೋಡಿಪಳ್ಳ, ಬಾಯಿಕಟ್ಟೆ ಪಳ್ಳ ಸೇರಿದಂತೆ ಹಲವು ಜಲ ಸಂಗ್ರಹಾಗಾರಗಳು ವಿನಾಶದ ಅಂಚಿನಲ್ಲಿವೆ.
ಜಲಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ಮಂಜೇಶ್ವರ ತಾಲೂಕಿನಲ್ಲೇ ಅತಿ ವಿಶಾಲ ಮದಗ ಎಂಬ ಖ್ಯಾತಿಗೆ ಪಾತ್ರವಾಗಿರುವ ಬೆದ್ರಂಪಳ್ಳ ಮದಗ ಮುಚ್ಚುವ ಭೀತಿಯಲ್ಲಿದೆ. ಮಳೆಗಾಲದಲ್ಲಿ ಮದಗಕ್ಕೆ ನೀರು ಹರಿದು ಬರುವ ಪ್ರದೇಶದಲ್ಲಿ ಅನಧಿಕೃತವಾಗಿ ಭಾರಿ ಪ್ರಮಾಣದ ಮಣ್ಣು ಸುರಿದು ಮದಗಕ್ಕೆ ನೀರಿನ ಹರಿವಿಗೆ ತಡೆಯೊಡ್ಡಲಾಗಿದೆ.
ಸುಮಾರು ಐದು ಎಕರೆ ವಿಸ್ತೀರ್ಣದಲ್ಲಿರುವ ಬೆದ್ರಂಪಳ್ಳ ಮದಗದಲ್ಲಿ ಭಾರಿ ಪ್ರಮಾಣದಲ್ಲಿ ನೀರು ಸಂಗ್ರಹವಾಗುತ್ತಿದ್ದು, ಅಂತರ್ಜಲ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರವಹಿಸುತ್ತಿದೆ. ಮಳೆಗಾಲದಲ್ಲಿ ನೀರು ತುಂಬಿಕೊಂಡು ಭರ್ತಿಯಾಗುವ ಮದಗದ ಆಸುಪಾಸಿನ ಮೂರು ಕಿ.ಮೀ.ವರೆಗಿನ ಕೆರೆ, ಬಾವಿಗಳಲ್ಲೂ ಅಂತರ್ಜಲಮಟ್ಟ ಹೆಚ್ಚಲು ಕಾರಣವಾಗುತ್ತಿದೆ. ದಶಕಗಳ ಹಿಂದೆ ಅರೆಮಂಗಿಲ, ಎಣ್ಮಕಜೆ, ನಡುಬೈಲು ಸೇರಿದಂತೆ ವಿವಿಧ ಪ್ರದೇಶಗಳಿಗೆ ಮದಗದಿಂದ ಕಾಲುವೆ ಮೂಲಕ ನೀರು ಹಾಯಿಸಿ ಭತ್ತದ ಕೃಷಿ ನಡೆಸಲಾಗುತ್ತಿತ್ತು.
ಜನವರಿ, ಫೆಬ್ರವರಿ ತಿಂಗಳವರೆಗೂ ನೀರು ದಾಸ್ತಾನುಗೊಳ್ಳುತ್ತಿದ್ದ ಬೆದ್ರಂಪಳ್ಳ ಮದಗದ ತಡೆಗೋಡೆ ಶಿಥಿಲಗೊಂಡ ಹಿನ್ನೆಲೆಯಲ್ಲಿ ನೀರು ದಾಸ್ತಾನು ಕಡಿಮೆಯಾಗುತ್ತಿದೆ. ಇನ್ನೊಂದೆಡೆ ಮದಗದ ಆಸುಪಾಸಿನ ಜಾಗವನ್ನು ಅತಿಕ್ರಮಿಸುವ ಕೆಲಸ ನಡೆಯುತ್ತಿರುವುದಾಗಿ ಆರೋಪ ಕೇಳಿಬರುತ್ತಿದೆ. ಬೆದ್ರಂಪಳ್ಳದ ಆಸುಪಾಸು ಕಲ್ಲಿನ ಕ್ವಾರಿಗಳಿಂದಲೂ ಮದಗಕ್ಕೆ ಭೀತಿ ಎದುರಾಗುತ್ತಿದೆ.
ಜಲ ಸಂರಕ್ಷಣಾ ಪ್ರದೇಶದ ಅಂಚಿಗೆ ಜಾಗ ಅಳೆದು ನೀಡುವ ಕಂದಾಯ ಅಧಿಕಾರಿಗಳು ಮಾನದಂಡ ಉಲ್ಲಂಘನೆ ನಡೆಸಿರುವ ಬಗ್ಗೆ ಮೇಲಧಿಕಾರಿಗಳು ತನಿಖೆ ನಡೆಸಬೇಕಾದ ಅಗತ್ಯವಿದೆ. ಮಂಜೇಶ್ವರ ತಾಲೂಕು ವ್ಯಾಪ್ತಿಯ ಬಹುತೇಕ ಜಲ ಸಂಗ್ರಹಾಗಾರಗಳ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಸುಮಾರು ಇನ್ನೂರು ವರ್ಷಗಳ ಇತಿಹಾಸ ಹೊಂದಿರುವ ಬೆದ್ರಂಪಳ್ಳ ಮದಗ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ನಾಗರಿಕರು ಮಾಡಿಕೊಂಡ ಮನವಿಗಳು ನಿಷ್ಪ್ರಯೋಜಕವಾಗಿವೆ.
ಕಂದಾಯಾಧಿಕಾರಿಗಳು ಮಧ್ಯಪ್ರವೇಶಿಸಿ ನಾಡಿನ ಕೃಷಿಕರ ಜೀವನಾಡಿಯಾಗಿರುವ ಬೆದ್ರಂಪಳ್ಳ ಮದಗ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ನಾಗರಿಕರು ಆಗ್ರಹಿಸಿದ್ದಾರೆ.
ಅಧಿಕಾರಿಗಳ ಮೌನ
ಬೃಹತ್ ಜಲ ಸಂರಕ್ಷಣಾಗಾರವನ್ನು ಸಂರಕ್ಷಿಸಬೇಕಾದ ಅಧಿಕಾರಿಗಳು ಮೌನವಹಿಸುತ್ತಿದ್ದಾರೆ. ಮದಗಕ್ಕೆ ಮಣ್ಣು ಸುರಿದು ಸಮತಟ್ಟುಗೊಳಿಸುವ ಪ್ರಕ್ರಿಯೆಗೆ ತಡೆಯೊಡ್ಡುವುದರ ಜತೆಗೆ ಬೃಹತ್ ಜಲ ಸಂರಕ್ಷಣಾಗಾರವನ್ನು ಸಂರಕ್ಷಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ನೀರು ಹರಿದುಬರುವ ಜಾಗದಲ್ಲಿ ಲೋಡುಗಟ್ಟಲೆ ಮಣ್ಣು ಸುರಿದು ನಿರ್ಮಾಣ ಕಾಮಗಾರಿ ನಡೆಸಲಾಗುತ್ತಿದ್ದರೂ ಕಂದಾಯ ಇಲಾಖೆ ಅಧಿಕಾರಿಗಳು ಕಂಡೂ ಕಾಣದಂತೆ ವರ್ತಿಸುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಇದು ಅವರ ಪಟ್ಟಾ ಜಾಗವಾಗಿದ್ದು, ಅಲ್ಲಿ ನಿರ್ಮಾಣ ಕಾರ್ಯ ನಡೆಸುತ್ತಿದ್ದಾರೆ ಎಂಬ ಹಾರಿಕೆಯ ಉತ್ತರ ನೀಡುತ್ತಿದ್ದಾರೆ.
ಬೆದ್ರಂಪಳ್ಳ ಮದಗಕ್ಕೆ ಶತಮಾನದ ಇತಿಹಾಸವಿದೆ. ಇದೇ ನೀರನ್ನು ಆಶ್ರಯಿಸಿಕೊಂಡು ಎಣ್ಮಕಜೆ, ನಡುಬೈಲು, ಅರೆಮಂಗಿಲ ಪ್ರದೇಶದ ಕೃಷಿಕರು ಭತ್ತದ ಕೃಷಿ ನಡೆಸುತ್ತಿದ್ದರು. ಬೆದ್ರಂಪಳ್ಳ ಮದಗ ಅಮೂಲ್ಯ ಜಲಸಂರಕ್ಷಣಾ ತಾಣವಾಗಿದ್ದು, ಇದನ್ನು ಸಂರಕ್ಷಿಸಲು ಸರ್ಕಾರ ಮುಂದಾಗಬೇಕು.
— ನಾರಾಯಣ ರೈ ಅರೆಮಂಗಿಲ ಕೃಷಿಕ
ಪಾರಂಪರಿಕ ಜಲಾಶಯಗಳನ್ನು ಸಂರಕ್ಷಿಸುವುದು ಕರ್ತವ್ಯವಾಗಬೇಕು. ಬೆದ್ರಂಪಳ್ಳದ ಮದಗಕ್ಕೆ ಮಣ್ಣು ಸುರಿದ ಬಗ್ಗೆ ಯಾವುದೇ ದೂರು ಲಭಿಸಿಲ್ಲ. ಮದಗಕ್ಕೆ ಮಣ್ಣು ಸುರಿದಿರುವುದರ ಜತೆಗೆ ಪಾರಂಪರಿಕ ಜಲಸಂಗ್ರಹಾಗಾರಗಳ ಸಂರಕ್ಷಣೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು.
— ಉದಯಕುಮಾರ್ ಪಿ. ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ(ಎಡಿಎಂ) ಕಾಸರಗೋಡು