ಉಡುಪಿ ಜೋಡುಕಟ್ಟೆಯ ಬಳಿ ಹೊರೆಕಾಣಿಕೆ ಸಮರ್ಪಣೆಯ ಮೆರವಣಿಗೆಗೆ ಯಶ್​ಪಾಲ್​ ಸುವರ್ಣ ಚಾಲನೆ ನೀಡಿದರು. ಆನಂದ ಸುವರ್ಣ, ನಾಗರಾಜ್​ ಶೆಟ್ಟಿ, ಸುಪ್ರಸಾದ್​ ಶೆಟ್ಟಿ, ಮಟ್ಟಾರು ರತ್ನಾಕರ್​ ಹೆಗ್ಡೆ, ಡಾ.ಉದಯಕುಮಾರ್​ ಸರಳತ್ತಾಯ, ಶ್ರೀವಿದ್ಯಾ ಸರಳತ್ತಾಯ,ಮೋಹನ್​ ಭಟ್​ ಇತರರಿದ್ದರು. 
ಉಡುಪಿ

ಶೀರೂರು ಪರ್ಯಾಯಕ್ಕೆ ಹೊರೆಕಾಣಿಕೆ ಸಮರ್ಪಣೆ ಆರಂಭ

* ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಚಾಲನೆ

* ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಮರ್ಪಣೆ

ಉಡುಪಿ: ಶೀರೂರು ಮಠದ ವೇದವರ್ಧನ ತೀರ್ಥ ಶ್ರೀಪಾದರ ಪರ್ಯಾಯ ಮಹೋತ್ಸವದ ನಿಮಿತ್ತ ಹೊರೆಕಾಣಿಕೆ ಸಮರ್ಪಣೆ ಕಾರ್ಯಕ್ರಮ ಶನಿವಾರದಿಂದ ಆರಂಭಗೊಂಡಿದೆ. ಪ್ರಥಮ ದಿನದ ಹೊರೆಕಾಣಿಯನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್​ ಮತ್ತು ಒಕ್ಕೂಟ ಉಡುಪಿ ಜಿಲ್ಲೆ ವತಿಯಿಂದ ಸಮರ್ಪಿಸಲಾಯಿತು. 
ಉಡುಪಿಯ ಜೋಡುಕಟ್ಟೆ ಬಳಿ ಇರುವ ಪೂರ್ಣಪ್ರಜ್ಞ ಮಂಟಪದ ಬಳಿ ಹೊರೆಕಾಣಿಕೆ ಸಮರ್ಪಣೆಯ ಮೆರವಣಿಗೆಗೆ ಪರ್ಯಾಯ ಸ್ವಾಗತ ಸಮಿತಿ ಅಧ್ಯಕ್ಷ, ಶಾಸಕ ಯಶ್​ಪಾಲ್​ ಸುವರ್ಣ ಚಾಲನೆ ನೀಡಿದರು. ಶುಭಸೂಚಕವಾಗಿ ನೆಲಕ್ಕೆ ತೆಂಗಿನಕಾಯಿ ಒಡೆಯುವ ಮೂಲಕ ಶೀರೂರು ಪರ್ಯಾಯದ ಹೊರೆಕಾಣಿಕೆ ಅಭಿಯಾನಕ್ಕೆ ಶುಭ ಕೋರಿದರು.

ವೀರೇಂದ್ರ ಹೆಗ್ಡೆ ಮಾರ್ಗದರ್ಶನ

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಮಾತನಾಡಿ, ಶೀರೂರು ಪರ್ಯಾಯ ಸ್ವಾಗತ ಸಮಿತಿಯ ಗೌರವಾಧ್ಯಕ್ಷರು ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಶೀರೂರು ಪರ್ಯಾಯಕ್ಕಾಗಿ ಬೃಹತ್​ ಪ್ರಮಾಣದಲ್ಲಿ ಇಂದು ಹೊರಕಾಣಿಕೆ ಸಮರ್ಪಿಸಿದ್ದೇವೆ. 150ಕ್ಕೂ ಅಧಿಕ ವಾಹನಗಳಲ್ಲಿ ಸುವಸ್ತುಗಳನ್ನು ಶ್ರದ್ಧಾ ಭಕ್ತಿಯ ಮೆರವಣಿಗೆಯ ಮೂಲಕ ಉಗ್ರಾಣಕ್ಕೆ ಸಾಗಿಸಲಾಗುತ್ತಿದೆ. ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ, ಜನಜಾಗೃತಿ ವೇದಿಕೆ, ಶೌರ್ಯ ವಿಪತ್ತು ವಿಭಾಗ, ನವ ಜೀವನ ಸಮಿತಿ, ಭಜನಾ ಪರಿಷತ್​ ಸದಸ್ಯರ ಸಹಕಾರದಲ್ಲಿ ಸಂಗ್ರಹಿಸಿರುವ ಹೊರೆಕಾಣಿಕೆಯನ್ನು ಅತ್ಯಂತ ಸಂಭ್ರಮ, ಸಡಗರದೊಂದಿಗೆ ಸಮರ್ಪಿಸಿದ್ದೇವೆ ಎಂದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ನಾಗರಾಜ್​ ಶೆಟ್ಟಿ, ಶೀರೂರು ಹೊರೆಕಾಣಿಕೆ ಸಮಿತಿಯ ಸಂಚಾಲಕ ಸುಪ್ರಸಾದ್​ ಶೆಟ್ಟಿ ಬೈಕಾಡಿ, ಪರ್ಯಾಯ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಟ್ಟಾರು ರತ್ನಾಕರ್​ ಹೆಗ್ಡೆ, ಕಾರ್ಯದರ್ಶಿ ಮೋಹನ್​ ಭಟ್​, ಮಠದ ದಿವಾನ ಡಾ. ಉದಯಕುಮಾರ್​ ಸರಳತ್ತಾಯ, ಶ್ರೀವಿದ್ಯಾ ಸರಳತ್ತಾಯ, ಜನಜಾಗ್ರತಿ ಸಮಿತಿಯ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ದೇವದಾಸ್​ ಹೆಬ್ಬಾರ್​, ಕಾಪು ಮಾರಿಗುಡಿ ಮೊಕ್ತೇಸರ ರತ್ನಾಕರ್​ ಶೆಟ್ಟಿ, ಬ್ರಾಹ್ಮಣ ಪರಿಷತ್​ ಜಿಲ್ಲಾಧ್ಯಕ್ಷ ಸಂದೀಪ್​ ಮಂಜ, ಶ್ರೀನಿವಾಸ್​ ಉಪಾಧ್ಯ, ಶ್ರೀಕಾಂತ ನಾಯಕ, ಸತ್ಯಾನಂದ ನಾಯಕ, ಉದಯ ಶೆಟ್ಟಿ ಇನ್ನಾ, ಮಧುಕರ್​ ಮುದ್ರಾಡಿ, ವಿಜಯ್​ ಕೊಡವೂರು,  ವೀಣಾ ಶೆಟ್ಟಿ ಇನ್ನಿತರರು ಉಪಸ್ಥಿತರಿದ್ದರು. 

ಸಲ್ಲಿಕೆಯಾದ ಸುವಸ್ತುಗಳು

ತೆಂಗಿನಕಾಯಿ 40 ಸಾವಿರ, ಅಕ್ಕಿ 205 ಕ್ವಿಂಟಲ್​, ಬೆಲ್ಲ 105 ಕ್ವಿಂಟಲ್​, ಸಕ್ಕರೆ 10 ಕ್ವಿಂಟಲ್​, ಬೇಳೆ 2.5 ಕ್ವಿಂಟಲ್​, ಅವಲಕ್ಕಿ 10 ಕ್ವಿಂಟಲ್​, ತರಕಾರಿ 15 ಕ್ವಿಂಟಲ್​, ಎಣ್ಣೆ/ತುಪ್ಪ 700 ಲೀಟರ್​.

ಸುವಸ್ತುಗಳ ಸ್ವೀಕರಿಸಿದ ವೇದವರ್ಧನ ಶ್ರೀ

ಜೋಡುಕಟ್ಟೆಯಿಂದ ಮೆರವಣಿಗೆ ಮೂಲಕ ಬಂದ ಹೊರೆಕಾಣಿಕೆಯನ್ನು ಶ್ರೀಕೃಷ್ಣ ಮಠದ ಪಾರ್ಕಿಂಗ್​ ಪ್ರದೇಶದಲ್ಲಿ ನಿರ್ಮಿಸಿರುವ "ಅನ್ನ ವಿಠ್ಠಲ' ಉಗ್ರಾಣದಲ್ಲಿ ಸ್ವಯಂ ವೇದವರ್ಧನ ತೀರ್ಥ ಶ್ರೀಪಾದರು ಸ್ವಾಗತಿಸಿದರು. ಉಗ್ರಾಣದಲ್ಲಿ ಸ್ಥಾಪಿಸಿರುವ ಶ್ರೀಕೃಷ್ಣನ ವಿಗ್ರಹಕ್ಕೆ ಮಂಗಳರಾತಿ ಬೆಳಗಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ವತಿಯಿಂದ ನೀಡಿರುವ ಹೊರೆಕಾಣಿಕೆಯನ್ನು ಶ್ರೀಕೃಷ್ಣನಿಗೆ ಅರ್ಪಿಸಿದರು. ಅನ್ನಬ್ರಹ್ಮನಾದ ಶ್ರೀಕೃಷ್ಣನ ಭಕ್ತರಿಗೆ ಪ್ರಸಾದ ಭೋಜನ ನೀಡಲು ಹೊರೆಕಾಣಿಕೆ ಸಂಗ್ರಹಿಸಲಾಗುತ್ತಿದೆ. ಸುವಸ್ತುಗಳನ್ನು ನೀಡಿ ನಮ್ಮ ಪರ್ಯಾಯಕ್ಕೆ ಸಹಕರಿಸಿದ ಎಲ್ಲರಿಗೂ ಶ್ರೀಕೃಷ್ಣನ ಅನುಗ್ರಹ ಲಭಿಸಲಿ ಎಂದರು.