ತಲಪಾಡಿಯ ಶಾರದಾ ವಿದ್ಯಾನಿಕೇತನದಲ್ಲಿ ಶನಿವಾರ ವನಮಹೋತ್ಸವ ಆಯೋಜಿಸಲಾಯಿತು.
ಉಳ್ಳಾಲ: ವನ ಸಂಪತ್ತಿನಿಂದ ತುಂಬಿ ತುಳುಕುತ್ತಿದ್ದ ನಮ್ಮ ದೇಶ ಇಂದು ಅರಣ್ಯ ನಾಶದಿಂದ ಬಹಳಷ್ಟು ಸಂಕಷ್ಟಗಳನ್ನು ಎದುರಿಸುತ್ತಿದೆ. ಇದು ಹೀಗೆ ಮುಂದುವರಿದರೆ ಘೋರ ಪರಿಣಾಮವನ್ನು ನಾವೆಲ್ಲರೂ ಅನುಭವಿಸಬೇಕಾಗುತ್ತದೆ ಎಂದು ತಲಪಾಡಿ ಶಾರದಾ ವಿದ್ಯಾನಿಕೇತನದ ಪ್ರಾಂಶುಪಾಲೆ ಸುಷ್ಮಾ ದಿನಕರ್ ಕಳವಳ ವ್ಯಕ್ತಪಡಿಸಿದರು.
ಪರಿಸರದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ತಲಪಾಡಿಯ ಶಾರದಾ ವಿದ್ಯಾನಿಕೇತನದಲ್ಲಿ ಶನಿವಾರ ಆಯೋಜಿಸಲಾದ ವನಮಹೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ವರ್ಷ ಮಳೆಯ ಕೊರತೆ ಅನುಭವಿಸುತ್ತಿದ್ದೇವೆ. ಭವಿಷ್ಯದ ದಿನಗಳಲ್ಲಿ ನಮ್ಮ ಜೀವನ ನೆಮ್ಮದಿಯಿಂದ ಸಾಗಬೇಕಾದರೆ ವನ ಸಂಪತ್ತಿನ ಮೂಲ ಸ್ವರೂಪವನ್ನು ಪಡೆಯಬೇಕು, ಕಾಡುಗಳ ಸಂಖ್ಯೆ ವೃದ್ಧಿಸಬೇಕು, ಅದಕ್ಕಾಗಿ ನಾವೆಲ್ಲರೂ ವೃಕ್ಷಗಳನ್ನು ನೆಟ್ಟು ಪ್ರಕೃತಿಯನ್ನು ಹಸಿರಾಗಿಸಬೇಕು ಎಂದು ಹೇಳಿದರು.
ಒಂಭತ್ತನೇ ತರಗತಿಯ ವಿದ್ಯಾರ್ಥಿಗಳು ತಮ್ಮ ತರಗತಿ ಶಿಕ್ಷಕಿ ನಮಿತಾ ನೇತೃತ್ವದಲ್ಲಿ ಹಾಡು, ನಾಟಕ, ನೃತ್ಯದ ಮೂಲಕ ವನಮಹೋತ್ಸವದ ಮಹತ್ವ ಸಾರಿದರು. ವಿದ್ಯಾರ್ಥಿಗಳು ತಮ್ಮ ತರಗತಿ ಶಿಕ್ಷಕರ ಜತೆ ಗಿಡಗಳನ್ನು ನೆಟ್ಟು ಅದನ್ನು ಸಂರಕ್ಷಿಸುವ ಪ್ರತಿಜ್ಞೆ ಕೈಗೊಂಡರು.