ಉಡುಪಿ ಮಣಿಪಾಲದ ಸಿಂಡಿಕೇಟ್​ ವೃತ್ತದ ಬಳಿ ಡಿಸಿ ಕಚೇರಿ ಸಂಪರ್ಕದ ರಸ್ತೆ ಮಾರ್ಗದಲ್ಲಿರುವ ನಗರಸಭೆಯ ವಾಣಿಜ್ಯ ಸಂಕೀರ್ಣ. 
ಉಡುಪಿ

ಡಿಸಿ ಮಾರ್ಗದಲ್ಲಿ 'ಅನಾಥ' ವಾಣಿಜ್ಯ ಸಂಕೀರ್ಣ

* ವರ್ಷಗಳೇ ಕಳೆದರೂ ತೆರೆದುಕೊಳ್ಳದ ಕಟ್ಟಡ

* ಬಳಕೆಯಾಗದೆ ನಗರಸಭೆಯ ಆಸ್ತಿಗೆ ಮಂಕು

ಉಡುಪಿ: ಮಣಿಪಾಲ ಸಮೀಪದ ಸಿಂಡಿಕೇಟ್​ ವೃತ್ತದಿಂದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಗೆ ತೆರಳುವ ಮುಖ್ಯ ರಸ್ತೆ ಮಾರ್ಗದಲ್ಲಿರುವ ನಗರಸಭೆಯ ವಾಣಿಜ್ಯ ಸಂಕೀರ್ಣ ಬಳಕೆಯಾಗದೆ ಪಾಳುಬೀಳುವ ಸ್ಥಿತಿಗೆ ತಲುಪಿದೆ.

ಕೋಟ್ಯಂತರ ರೂಪಾಯಿ ಹಣ ವ್ಯಯಿಸಿ ನಿರ್ಮಿಸಿರುವ ಈ ಕಟ್ಟಡವು ಉದ್ದೇಶಿತ ಕಾರ್ಯಕ್ಕೆ ಬಳಕೆಯಾಗದೆ ಬೀಗ ಹಾಕಲಾಗಿದೆ. ಇದು ಸಾರ್ವಜನಿಕ ವಲಯದಲ್ಲಿ ಆಡಳಿತದ ನಿರ್ಲಕ್ಷ್ಯದ ಕುರಿತು ಅಸಮಾಧಾನಕ್ಕೂ ಕಾರಣವಾಗಿದೆ.

ಬಾಡಿಗೆಗೆ ನೀಡಿ

ನಗರಸಭೆಯ ಅಧಿಕಾರಿಗಳು ಕೂಡಲೇ ವಾಣಿಜ್ಯ ಸಂಕೀರ್ಣವನ್ನು ಸಾರ್ವಜನಿಕರ ಅನುಕೂಲಕ್ಕೆ ಮುಕ್ತಗೊಳಿಸಿ, ಅಂಗಡಿಗಳ ಹರಾಜು ಅಥವಾ ಬಾಡಿಗೆ ಪ್ರಕ್ರಿಯೆ ಕೈಗೊಳ್ಳಬೇಕು. ಈ ಭಾಗದಲ್ಲಿ ವ್ಯಾಪಾರ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಬೇಕು. ಕೋಟ್ಯಂತರ ರೂಪಾಯಿ ವೆಚ್ಚದ ಸಾರ್ವಜನಿಕ ಆಸ್ತಿ ಹಾಳಾಗಲು ಬಿಡಬಾರದು ಎನ್ನುತ್ತಾರೆ ಸ್ಥಳೀಯರು.

ಸಾರ್ವಜನಿಕರ ಹಣದಿಂದ ನಿಮಾರ್ಣಗೊಂಡ ಕಟ್ಟಡಗಳು ಸಾರ್ವಜನಿಕ ಜನಜೀವನಕ್ಕೆ ಆಸರೆಯಾಗಬೇಕೇ ಹೊರತು, ಬೀಗ ಹಾಕಿ ಹಾಳು ಮಾಡಬಾರದು. ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ಈ ಕಟ್ಟಡವನ್ನು ಸೂಕ್ತ ಬಳಕೆಗೆ ನೀಡಿ ಜನಹಿತದ ಕಾಳಜಿ ಪ್ರದರ್ಶಿಸಬೇಕು ಎನ್ನುತ್ತಾರೆ ಉಡುಪಿಯ ಪ್ರಾಜ್ಞರು.

ಉಡುಪಿ ಜಿಲ್ಲೆಯಲ್ಲಿ ಸರ್ಕಾರದ ವತಿಯಿಂದ ನಿರ್ವಹಿಸಲ್ಪಡುವ ಭಿಕ್ಷುಕರ ಪುನರ್ವಸತಿ ಕೇಂದ್ರ ಹಾಗೂ ನಿರ್ಗತಿಕರ ಆಶ್ರಯ ತಾಣಗಳ ಕೊರತೆಯಿದೆ. ಹೀಗಾಗಿ ವಾಣಿಜ್ಯ ಉದ್ದೇಶಕ್ಕೆ ಈ ಕಟ್ಟಡ ಬಳಸಲು ಸಾಧ್ಯವಾಗದಿದ್ದಲ್ಲಿ ಪರ್ಯಾಯವಾಗಿ ಅಸಹಾಯಕರು, ನಿರ್ಗತಿಕರು ಹಾಗೂ ಆಶ್ರಯವಿಲ್ಲದವರ ನೆಲೆಯಾಗಿ ಈ ಕಟ್ಟಡವನ್ನು ಬಳಕೆ ಮಾಡುವತ್ತ ನಗರಾಡಳಿತ ಅಥವಾ ಜಿಲ್ಲಾಡಳಿತ ಗಂಭೀರವಾಗಿ ಚಿಂತಿಸಬೇಕು.
ನಿತ್ಯಾನಂದ ಒಳಕಾಡು. ಸಮಾಜ ಸೇವಕ, ಉಡುಪಿ.

ಠೇವಣಿ, ಬಾಡಿಗೆ ದರ ಭಾರಿ ಹೆಚ್ಚು

ನಗರಸಭೆಯವರ ಈ ವಾಣಿಜ್ಯ ಸಂಕೀರ್ಣವು ಅಂದಾಜು 2.8 ಕೋಟಿ ರೂ. ವೆಚ್ದದಲ್ಲಿ ನಿರ್ಮಿಸಲಾಗಿದೆ. ಜನಸಂಪರ್ಕವಿರುವ ಪ್ರಮುಖ ಸ್ಥಳದಲ್ಲಿ ಈ ಕಟ್ಟಡವಿದ್ದು, ವ್ಯಾಪಾರ ವಹಿವಾಟಿಗೆ ಅತ್ಯಂತ ಸೂಕ್ತವಾಗಿದೆ. ಇಲ್ಲಿ ಅಂಗಡಿ ಮುಂಗಟ್ಟು ತೆರೆದುಕೊಂಡರೆ ಸಾರ್ವಜನಿಕರಿಗೆ ಅಗತ್ಯ ವಸ್ತುಗಳು ಸಮೀಪದಲ್ಲೇ ಲಭ್ಯವಾಗಲಿದೆ. ಸಣ್ಣ ವ್ಯಾಪಾರಿಗಳಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಹಾಯವಾಗಲಿದೆ. ಅಲ್ಲದೆ, ನಗರಸಭೆಗೂ ಬಾಡಿಗೆ ರೂಪದಲ್ಲಿ ಆದಾಯ ಲಭಿಸಲಿದೆ. ಆದರೆ, ಈ ಕಟ್ಟಡ ಬಾಡಿಗೆ ಪಡೆಯಲು ಅಳವಡಿಸಿರುವ ಮೊತ್ತ ಭಾರಿ ಹೆಚ್ಚಿದೆ. ಬಾಡಿಗೆ ಪಡೆಯುವವರು ಠೇವಣಿ ರೂಪದಲ್ಲಿ 3.50 ಲಕ್ಷ ರೂ. ಹಾಗೂ ತಿಂಗಳಿಗೆ 36 ಸಾವಿರ ರೂ. ಬಾಡಿಗೆ ನಿಗದಿ ಮಾಡಲಾಗಿದೆ. ಹೀಗಾಗಿ ಇಲ್ಲಿ ಬಾಡಿಗೆ ಅಂಗಡಿ ಪಡೆಯಲು ಯಾರೂ ಆಸಕ್ತಿ ತೋರುತ್ತಿಲ್ಲ.

ನಗರಸಭೆಯ ಈ ಸಂಕೀರ್ಣದಲ್ಲಿ 20 ಮಳಿಗೆಗಳಿವೆ. ಈಗಾಗಲೇ ಟೆಂಡರ್​ ಕರೆದಾಗಿದೆ. 3 ಸಲ ಆನ್​ಲೈನ್​ ಮೂಲಕವೂ ಟೆಂಡರ್​ ಕರೆಯಲಾಗಿದ್ದು, 2 ಮಳಿಗೆ ಬಾಡಿಗೆಗೆ ನೀಡಲಾಗಿದೆ. ಬಾಡಿಗೆ ದರ ಹೆಚ್ಚಾದ ಕಾರಣ ಜಿಲ್ಲಾಡಳಿತದ ಗಮನಕ್ಕೆ ತಂದು ನಿಯಮಾನುಸಾರ ಬಾಡಿಗೆ ಮೊತ್ತದಲ್ಲಿ ಶೇ.25 ಕಡಿತ ಮಾಡಲಾಗಿದೆ. ಉಳಿದ ಮಳಿಗೆಗಳನ್ನು ಆಸಕ್ತರು ಬಾಡಿಗೆ ಪಡೆಯಬಹುದಾಗಿದೆ.
ಮಹಾಂತೇಶ ಹಂಗರಗಿ. ಉಡುಪಿ ನಗರಸಭಾ ಪೌರಾಯುಕ್ತ.