ಉಡುಪಿಯಲ್ಲಿ ಆಯೋಜಿಸಿದ್ದ ಭಜನಾ ಸಮಾವೇಶವನ್ನು ಡಾ. ಬಿ.ಎ. ವಿವೇಕ್ ರೈ ಉದ್ಘಾಟಿಸಿದರು. ಕಾ.ತ. ಚಿಕ್ಕಣ್ಣ, ಪ್ರೊ.ವನಿತಾ ಮಯ್ಯ, ಡಾ.ದೇವಿದಾಸ್ ಎಸ್. ನಾಯ್ಕ್, ಪೂರ್ಣಿಮಾ, ರವಿರಾಜ ಎಚ್.ಪಿ., ಡಾ. ಬಿ.ಜಗದೀಶ್ ಶೆಟ್ಟಿ, ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಇದ್ದರು.
ವಿಶ್ರಾಂತ ಕುಲಪತಿ ಡಾ. ಬಿ.ಎ. ವಿವೇಕ್ ರೈ ಆತಂಕ
ಉಡುಪಿಯಲ್ಲಿ ಕರಾವಳಿ ಭಜನಾ ಸಮಾವೇಶ ಉದ್ಘಾಟನೆ
ಉಡುಪಿ: ಅಧ್ಯಾತ್ಮವೂ ಇಂದು ವ್ಯಾಪಾರದ ಸರಕಾಗಿದೆ. ಜನರನ್ನು ವೇಗವಾಗಿ ತಲುಪುವ ಜನಪದ, ಸಂಸ್ಕೃತಿ, ಸಂಗೀತ ಎಲ್ಲವೂ ವ್ಯಾಪಾರೀಕರಣವಾಗಿದೆ. ಸುಮಾರು 20 ವರ್ಷದಿಂದ ಈ ಯುಗವನ್ನು ಮೊಬೈಲ್ ಆಳಿದ್ದು, ಅದನ್ನು ಮೀರಿಸುವ ಡಿಜಿಟಲ್ ಯುಗ ಬಂದಿದೆ. ಅದರಲ್ಲೂ ಕೃತಕ ಬುದ್ಧಿಮತ್ತೆ (ಎಐ) ಎಲ್ಲವನ್ನೂ ಸೃಷ್ಟಿಸುತ್ತಿದ್ದು, ಮುಂದೆ ಬಲುದೊಡ್ಡ ಸವಾಲು ಆಗಲಿದೆ ಎಂದು ವಿಶ್ರಾಂತ ಕುಲಪತಿ ಡಾ. ಬಿ.ಎ. ವಿವೇಕ್ ರೈ ಆತಂಕ ವ್ಯಕ್ತಪಡಿಸಿದರು.
ಉಡುಪಿಯ ಎಂಜಿಎಂ ಕಾಲೇಜಿನ ಟಿ.ಮೋಹನದಾಸ್ ಪೈ ಅಮೃತಸೌಧ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಂತಕವಿ ಕನಕದಾಸ ಮತ್ತು ತತ್ವ ಪದಕಾರರ ಅಧ್ಯಯನ ಕೇಂದ್ರ ಬೆಂಗಳೂರು, ಕನಕದಾಸ ಅಧ್ಯಯನ ಸಂಶೋಧನಾ ಪೀಠ ಉಡುಪಿ ಮತ್ತು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಉಡುಪಿ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಎರಡು ದಿನಗಳ ಕರಾವಳಿ ಭಜನಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಮಾಹೆ ಸಹಕುಲಪತಿ ಡಾ.ನಾರಾಯಣ ಸುಭಾಹಿತ, ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ಪ್ರೊ.ವನಿತಾ ಮಯ್ಯ, ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ.ದೇವಿದಾಸ್ ಎಸ್. ನಾಯ್ಕ್, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಕಾರ್ಯಕ್ರಮದ ಸಂಯೋಜಕ ರವಿರಾಜ ಎಚ್.ಪಿ. ಉಪಸ್ಥಿತರಿದ್ದರು.
ಕಲಾವಿದರಾದ ರಾಮಾಂಜಿ ನಮ್ಮಭೂಮಿ ಮತ್ತು ಸ್ವಪ್ನಾ ರಾಜ್ ನಾಡಗೀತೆ ಹಾಡಿದರು. ಉಡುಪಿ ಕನಕದಾಸ ಅಧ್ಯಯನ ಸಂಶೋಧನಾ ಪೀಠದ ಆಡಳಿತಾಧಿಕಾರಿ ಡಾ. ಬಿ.ಜಗದೀಶ್ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂತ ಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಸದಸ್ಯ ಸಂಚಾಲಕಿ ಡಾ.ಕಾತ್ಯಾಯಿನಿ ಕುಂಜಿಬೆಟ್ಟು ವಂದಿಸಿದರು. ಕಾಲೇಜಿನ ಕನ್ನಡ ಪ್ರಾಧ್ಯಾಪಕ ರಾಘವೇಂದ್ರ ತುಂಗ ಕಾರ್ಯಕ್ರಮ ನಿರೂಪಿಸಿದರು.
ಬದುಕು ರೂಪಿಸುವ ಸಂಸ್ಕೃತಿ ಬಹುಮುಖ್ಯ
ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ. ಚಿಕ್ಕಣ್ಣ ಮಾತನಾಡಿ, ತತ್ವಪದಗಳ 50 ಸಂಪುಟ ಹೊರ ತಂದಿದ್ದೇವೆ. ಬಿಟ್ಟು ಹೋಗಿರುವ ತತ್ವಪದಗಳನ್ನೂ ಸಂಗ್ರಹಿಸಿ ಅವುಗಳನ್ನೂ ಪ್ರಕಟಿಸಲಿದ್ದೇವೆ. ಕನಕದಾಸರು ಭಕ್ತಿಯನ್ನು ಸಾಮಾಜೀಕರಣ ಮಾಡಿದ್ದರಿಂದ ಅವರು ಎಲ್ಲರಿಗಿಂತಲೂ ಭಿನ್ನರಾಗಿದ್ದರು. ಯುವ ಸಮುದಾಯ ಇಂದು ಅನೇಕ ಸವಾಲು ಎದುರಿಸುತ್ತಿದೆ. ಅವರಲ್ಲಿ ಪರಂಪರೆಯ ಬಗ್ಗೆ ಆಸಕ್ತಿ ಮೂಡಿಸುವ ಕಾರ್ಯ ಆಗುತ್ತಿಲ್ಲ. ಇಂದಿನ ಶಿಕ್ಷಣ ಯಂತ್ರ ಮಾನವನ ಸೃಷ್ಟಿಗೆ ಸೀಮಿತವಾಗಿದೆ. ಇಂತಹ ಸಂದರ್ಭದಲ್ಲಿ ಬದುಕಿನ ಸಂಬಂಧ ರೂಪಿಸುವ ಸಾಂಸ್ಕೃತಿಕ ಚಟುವಟಿಕೆ ಮುಖ್ಯವಾಗುತ್ತದೆ ಎಂದರು.
ಕೀರ್ತನೆಗಿಂತ ತತ್ವಪದ ಭಿನ್ನವಾಗಿದೆ. ಹಾಡಿಗೆ ಸಾಹಿತ್ಯ ಬೇಡ. ಅದು ಕುಣಿಯಲು ಹೆಜ್ಜೆ ಹಾಕುವಂತಿದ್ದರೆ ಸಾಕು. ಭಜನೆಯನ್ನು ಜನರ ಬಳಿ ಕೊಂಡೊಯ್ಯುವ ಕಾರ್ಯ ಇಂದು ಅತ್ಯಗತ್ಯ. ತನ್ಮೂಲಕ ಭಜನಾ ಸಾಹಿತ್ಯ, ತತ್ವಪದ, ರೂಪಕಗಳ ಆಶಯ, ಸಂದೇಶ ಮತ್ತು ಪ್ರಸ್ತುತತೆ ಜನರಿಗೆ ತಿಳಿಯಬೇಕು.