ಮಾಜಿ ಸಚಿವ ಕೆ.ಜೆ. ಜಾರ್ಜ್. ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ. 
ಉಡುಪಿ

ಡಿಕೆಶಿ ಸಂಪುಟದಲ್ಲಿ ಜಾರ್ಜ್ ಗೆ ನೀಡಿ ಡಿಸಿಎಂ ಸ್ಥಾನ

* ಕೆಥೊಲಿಕ್ ಸಭಾ ಉಡುಪಿ ಪ್ರದೇಶ ಒತ್ತಾಯ

* ಐವನ್ ಡಿಸೋಜಾಗೆ ಸಚಿವ ಪಟ್ಟ ಬೇಡಿಕೆ

ಉಡುಪಿ: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿರುವ ಡಿ.ಕೆ. ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಕ್ರೈಸ್ತ ಸಮುದಾಯದ ಶಾಸಕ ಕೆ.ಜೆ. ಜಾರ್ಜ್ ಅವರಿಗೆ ಉಪಮುಖ್ಯಮಂತ್ರಿ ಹಾಗೂ ಕರಾವಳಿ ಭಾಗದ ಎಂಎಲ್‌ಸಿ ಐವನ್ ಡಿಸೋಜಾ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಕಾಂಗ್ರೆಸ್ ವರಿಷ್ಠರನ್ನು ಕೆಥೊಲಿಕ್ ಸಭಾ ಉಡುಪಿ ಪ್ರದೇಶ ಒತ್ತಾಯಿಸಿದೆ.
ಕೆ.ಜೆ. ಜಾರ್ಜ್ ಅವರು ಅತ್ಯಂತ ಹಿರಿಯ ರಾಜಕಾರಣಿಯಾಗಿದ್ದು ಕಾಂಗ್ರೆಸ್‌ಗೆ ಅತ್ಯುನ್ನತ ಸೇವೆ ನೀಡಿರುತ್ತಾರೆ. ಕ್ರೈಸ್ತ ಸಮುದಾಯಕ್ಕೆ ಈವರೆಗೆ ಡಿಸಿಎಂ ನಂತಹ ಉನ್ನತ ಹುದ್ದೆ ಲಭಿಸಿಲ್ಲ. ಈಬಾರಿ ಅವಕಾಶ ಒದಗಿ ಬರಲಿದೆ ಎಂಬ ಆಶಾಭಾವನೆಯಿದ್ದು ಪಕ್ಷ ಗಮನ ಹರಿಸಬೇಕಿದೆ.
ರಾಜ್ಯದ ಕರಾವಳಿ ಭಾಗದಲ್ಲಿ ಕ್ರೈಸ್ತ ಸಮುದಾಯ ಪ್ರತಿನಿಧಿಸುತ್ತಿರುವ ಐವನ್ ಡಿಸೋಜಾ ಅವರು ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿ, ಪರಿಷತ್‌ನ ಮುಖ್ಯ ಸಚೇತಕಾರಾಗಿ, ಕ್ರೈಸ್ತ ಅಭಿವೃದ್ಧಿ ನಿಗಮದಲ್ಲಿ ವಿವಿಧ ರೀತಿಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಕ್ರೈಸ್ತ ಸಮುದಾಯದ ಕೊಡುಗೆ ಅಪಾರವಾಗಿದ್ದು ರಾಜ್ಯದ ೨೩ ಕ್ಷೇತ್ರಗಳಲ್ಲಿ ಪಕ್ಷವನ್ನು ಬೆಂಬಲಿಸಿದೆ. ಆದರೆ, ಸಮುದಾಯಕ್ಕೆ ಪ್ರತಿಬಾರಿಯೂ ಉನ್ನತ ಸ್ಥಾನದ ಅವಕಾಶ ವಂಚಿತವಾಗುತ್ತಿದ್ದು, ಡಿ.ಕೆ. ಶಿವಕುಮಾರ್ ಅವರು ಎಲ್ಲ ಸಮುದಾಯಗಳಿಗೂ ಸಮಾನವಾಗಿ ಅವಕಾಶ ನೀಡಬೇಕು. ಐವನ್ ಡಿಸೋಜಾ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಕೆಥೊಲಿಕ್ ಸಭಾ ಉಡುಪಿ ಪ್ರದೇಶದ ಅಧ್ಯಕ್ಷ ಮೆಲ್ವಿನ್ ಆರಾನ್ಹಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.