ಹೊಂಡ-ಗುಂಡಿಗಳಿಂದ ಕೂಡಿದ ಮೂಲ್ಕಿ-ಮೂಡುಬಿದಿರೆ ರಾಜ್ಯ ಹೆದ್ದಾರಿ ಹಾಗೂ ರೈಲ್ವೆ ನಿಲ್ದಾಣ ಸಂಪರ್ಕ ರಸ್ತೆ. 
ಉಡುಪಿ

ಎಂಟು ವರ್ಷಗಳಿಂದ ಹೊಂಡಗಳ ಅಬ್ಬರ

ವಿಜಯವಾಣಿ ಸುದ್ದಿಜಾಲ ಮೂಲ್ಕಿ
ಮೂಲ್ಕಿ-ಮೂಡುಬಿದಿರೆ ರಾಜ್ಯ ಹೆದ್ದಾರಿ ಮತ್ತು ಮೂಲ್ಕಿ ರೈಲ್ವೆ ನಿಲ್ದಾಣ ಹಾಗೂ ಕೆ.ಎಸ್.ರಾವ್ ನಗರವನ್ನು ಸಂಪರ್ಕಿಸುವ ಪ್ರಮುಖ ರಸ್ತೆ ಹೊಂಡ-ಗುಂಡಿಗಳಿಂದ ಕೂಡಿದ್ದು, ಕಳೆದ 8 ವರ್ಷಗಳಿಂದ ದುರಸ್ತಿ ಕಾಣದೆ ಅಧೋಗತಿಗೆ ತಲುಪಿದೆ. ಈ ರಸ್ತೆಯನ್ನು ಅಭಿವೃದ್ಧಿಪಡಿಸುವವರೇ ಇಲ್ಲದಂತಾಗಿದೆ ಎಂದು ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗಡಿ ವಿವಾದದ ನೆಪದಲ್ಲಿ ನಿರ್ಲಕ್ಷ್ಯ

ಈ ರಸ್ತೆಯ ಒಂದು ಭಾಗ ಮೂಲ್ಕಿ ನಗರ ಪಂಚಾಯಿತಿ ವ್ಯಾಪ್ತಿಯಲ್ಲಿದ್ದರೆ, ಇನ್ನೊಂದು ಭಾಗ ಕಿಲ್ಪಾಡಿ ಗ್ರಾಮ ಪಂಚಾಯಿತಿಗೆ ಸೇರಿದೆ. ರಸ್ತೆ ದುರಸ್ತಿ ವಿಚಾರದಲ್ಲಿ ಎರಡೂ ಆಡಳಿತ ಮಂಡಳಿಗಳ ನಡುವಿನ ಗಡಿ ಗೊಂದಲದಿಂದಾಗಿ ವಾಹನ ಸವಾರರು, ಪಾದಚಾರಿಗಳು ಮತ್ತು ಶಾಲಾ ಮಕ್ಕಳು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಸಾವಿರಾರು ವಾಹನಗಳು ಸಂಚರಿಸುವ ಈ ಮುಖ್ಯ ರಸ್ತೆಯ ದುಸ್ಥಿತಿ ಜನಪ್ರತಿನಿಧಿಗಳ ಕಣ್ಣಿಗೆ ಕಾಣುತ್ತಿಲ್ಲವೇ? ಎಂಬುದು ಸ್ಥಳೀಯರ ಪ್ರಶ್ನೆ.

ಮಳೆಗಾಲದಲ್ಲಿ ಕೃತಕ ಕೆರೆ

ರಸ್ತೆಯಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆಗಾಲದಲ್ಲಿ ನೀರು ರಸ್ತೆಯಲ್ಲೇ ಹರಿಯುತ್ತದೆ. ರೈಲ್ವೆ ಕಾಂಕ್ರೀಟ್ ಸೇತುವೆ ಭಾಗದಲ್ಲಿ ಮಳೆ ಬಂದರೆ ಸಾಕು, ಹೊಂಡಗಳು ಕೆರೆಯಂತಾಗಿ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ. ಅತ್ತ ಮೂಲ್ಕಿ ರೈಲ್ವೆ ನಿಲ್ದಾಣ 6 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳ್ಳುತ್ತಿದ್ದು, ನಿಲ್ದಾಣದವರೆಗಿನ ರಸ್ತೆ ಮಾತ್ರ ಡಾಂಬರೀಕರಣಗೊಂಡಿದೆ. ಆದರೆ, ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಮಾತ್ರ ಅಭಿವೃದ್ಧಿಯಿಂದ ವಂಚಿತವಾಗಿದೆ.

ರಸ್ತೆಯ ಹೊಂಡಗಳು ಜನರ ಪ್ರಾಣ ಹಿಂಡುತ್ತಿವೆ. ಗುಂಡಿಗೆ ಬಿದ್ದು ಹಲವರು ಮೂಳೆ ಮುರಿದುಕೊಂಡಿದ್ದಾರೆ. ವಯೋವೃದ್ಧರು ಸಂಚರಿಸಲು ಹರಸಾಹಸ ಪಡುವಂತಾಗಿದೆ. ಸಂಬಂಧಪಟ್ಟ ಜನಪ್ರತಿನಿಧಿಗಳು ಕೂಡಲೇ ಎಚ್ಚೆತ್ತುಕೊಳ್ಳಬೇಕು.

— ರಘುನಾಥ್, ಸ್ಥಳೀಯ ನಿವಾಸಿ

ಹಿಂದೆ ಕೆ.ಎಸ್. ರಾವ್ ನಗರದ ಕೋರ‌್ದಬ್ಬು ದೈವಸ್ಥಾನದವರೆಗೆ ಕಾಂಕ್ರೀಟೀಕರಣಗೊಳಿಸಿ ರಸ್ತೆ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿತ್ತು. ಆದರೆ, ಸ್ಥಳೀಯರ ವಿರೋಧದ ಕಾರಣದಿಂದ ಯೋಜನೆ ಕೈಬಿಡಬೇಕಾಯಿತು. ಮುಂದಿನ ದಿನಗಳಲ್ಲಿ ಈ ಬಗ್ಗೆ ಮರು ಪರಿಶೀಲನೆ ನಡೆಸಲಾಗುವುದು.

— ಉಮಾನಾಥ ಎ. ಕೋಟ್ಯಾನ್, ಶಾಸಕ