ಉಡುಪಿಯ ರಾಜಾಂಗಣದಲ್ಲಿ ಸಂತ ಸಂದೇಶ ನೀಡಿದ ಸಚ್ಚಿದಾನಂದ ಭಾರತೀ ಸ್ವಾಮೀಜಿಗೆ ಸುಗುಣೇಂದ್ರ ಶ್ರೀಗಳು 'ಶ್ರೀಕೃಷ್ಣಗೀತಾನುಗ್ರಹ' ಪ್ರಶಸ್ತಿ ನೀಡಿದರು. ಸುಶ್ರೀಂದ್ರ ಶ್ರೀ, ಪ್ರಸನ್ನ ಆಚಾರ್ಯ, ಹಿರಿಯ ಸಂಗೀತ ಗುರು ವಿದ್ವಾನ್ ಮದ್ದೂರು ಬಾಲಸುಬ್ರಹ್ಮಣ್ಯಂ ಇತರರಿದ್ದರು.
* ಸುಗುಣೇಂದ್ರ ತೀರ್ಥ ಶ್ರೀಪಾದರ ಆಶೀರ್ವಚನ
* ಸಂತ ಸಂದೇಶ-ಸಂತ ಸನ್ಮಾನ ಕಾರ್ಯಕ್ರಮ
ಉಡುಪಿ: ಭಗವದ್ಗೀತೆಯ ಪ್ರಚಾರದ ಮೂಲಕವೇ ಕೃಷ್ಣನ ಪೂಜೆ ನೆರವೇರಬೇಕು ಎನ್ನುವುದೇ ನಮ್ಮ ಪರ್ಯಾಯದ ಮುಖ್ಯ ಉದ್ದೇಶ. ಸಾಂಪ್ರದಾಯಿಕವಾಗಿ ನಾವೆಲ್ಲರೂ ಕೃಷ್ಣನ ಪೂಜೆ ಮಾಡುವುದರಿಂದ ಆತನ ಪ್ರಭಾವ ಅನುಗ್ರಹ ರೂಪದಲ್ಲಿ ದೊರಕುತ್ತದೆ, ಆದರೂ ಕೃಷ್ಣನ ಸಂದೇಶದ ಪ್ರಭಾವ ನಾಡಿನಾದ್ಯಂತ ಆದಾಗ ಮಾತ್ರ ಕೃಷ್ಣನ ಪೂಜೆ ಅರ್ಥಪೂರ್ಣವಾಗುತ್ತದೆ. ಋಷಿಗಳು ಸಿದ್ಧಪಡಿಸಿದ ಮಂತ್ರಗಳಿಗಿಂತ ಭಗವಂತನಿಂದಲೇ ಹೇಳಲ್ಪಟ್ಟ ಭಗವದ್ಗೀತೆಯೇ ಶ್ರೇಷ್ಠ ಎಂದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.
ಉಡುಪಿಯ ರಾಜಾಂಗಣದಲ್ಲಿ ವಿಶ್ವಗಿತಾ ಪರ್ಯಾಯದ ನಿಮಿತ್ತ ಮುಂದುವರಿದ ಸಂತ ಸಂದೇಶ-ಸಂತ ಸನ್ಮಾನ ಕಾರ್ಯಕ್ರಮದಲ್ಲಿ ಎಡನೀರು ಮಠದ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರಿಗೆ ಪುತ್ತಿಗೆ ಮಠದ ವತಿಯಿಂದ ಸೋಮವಾರ 'ಶ್ರೀಕೃಷ್ಣಗೀತಾನುಗ್ರಹ' ಪ್ರಶಸ್ತಿ ಪ್ರದಾನಿಸಿ ಆಶೀರ್ವಚನ ನೀಡಿದರು.
ಸುವರ್ಣಯುಗದ ಪರ್ಯಾಯ
ಸಂತ ಸಂದೇಶ ನೀಡಿದ ಎಡನೀರು ಮಠದ ಸಚ್ಚಿದಾನಂದ ಸ್ವಾಮೀಜಿ, ಪುತ್ತಿಗೆ ಶ್ರೀಗಳ ಪರ್ಯಾಯ ಸುವರ್ಣಯುಗವಾಗಿದೆ. ಸುವರ್ಣವೆಂದರೆ ಶ್ರೇಷ್ಠವಾದ ಅಕ್ಷರ ಎಂದೂ ಅರ್ಥವಿದೆ. ಕೋಟಿ ಗೀತಾ ಲೇಖನ ಯಜ್ಞದ ಮೂಲಕ ಗೀತೆಯನ್ನೂ ಸುವರ್ಣವನ್ನಾಗಿಸಿ ಆಧುನಿಕ ಗೀತಾಚಾರ್ಯ ಆಗಿದ್ದಾರೆ. ಎಲ್ಲರೂ ಅವರವರ ಸಂತಸಕ್ಕೆ ಚಿನ್ನಾಭರಣ ಖರೀದಿಸಿದರೆ, ಶ್ರೀಗಳು ಚಿನ್ನವನ್ನು ಶ್ರೀಕೃಷ್ಣನಿಗೆ ಬಗೆಬಗೆಯಾಗಿ ಸಮರ್ಪಿಸಿ ಎಲ್ಲ ಭಕ್ತರೂ ಸಂತಸಗೊಳ್ಳುವಂತೆ ಮಾಡಿದ್ದಾರೆ. ವಿಶ್ವಕ್ಕೆ ಕಾಡಿದ ಕರೊನಾ ಮಹಾಮಾರಿಯನ್ನು ವ್ಯಾಕ್ಸಿನೇಷನ್ ಮೂಲಕ ನಾಶಪಡಿಸಲಾಗಿದೆ. ಅದೇರೀತಿ ಹಿಂದು ಸಮಾಜಕ್ಕೆ ಕಾಡುತ್ತಿರುವ ಮತಾಂತರ, ಹೆಚ್ಚುತ್ತಿರುವ ಸೈಬರ್ ಕ್ರೈಂ, ಯುವ ಸಮುದಾಯ ದಾರಿ ತಪ್ಪಿಸುವಂತಹ ಕಾರ್ಯವೂ ಮಾಹಾರೋಗವಾಗಿ ಕಾಡುತ್ತಿದೆ. ಅದರ ನಾಶಕ್ಕೆ ಭಗವದ್ಗೀತೆಯೇ ವ್ಯಾಕ್ಸಿನೇಷನ್ ಆಗಿದೆ ಎಂದರು.
ವಿವಿಧ ಸಾಧಕರಿಗೆ ಸನ್ಮಾನ
ವಿವಿಧ ಕ್ಷೇತ್ರಗಳ ಸಾಧಕರಾದ ರಾಜೇಂದ್ರ ಎಂಕಣ್ಣಮೂಲೆ, ಮುಂಬಯಿಯ ಅಣ್ಣಿ ಚೆನ್ನಯ್ಯ ಶೆಟ್ಟಿ, ಆಶಾ ಮತ್ತು ಕೆ.ಎಂ. ಶೇಖರ್, ರಮಾ ಮತ್ತು ಶೇಷಗಿರಿ ಕೃಷ್ಣಮೂರ್ತಿ, ಕಲಾವಿದ ಡಾ. ಉಪಾಧ್ಯಾಯ ಮೂಡುಬೆಳ್ಳೆ, ಹಿರಿಯ ಸಂಗೀತ ಗುರು ವಿದ್ವಾನ್ ಮಧೂರು ಬಾಲಸುಬ್ರಹ್ಮಣ್ಯಂ, ಮಾಣಿಯೂರು ವಿಶ್ವನಾಥ ಆಚಾರ್ಯ, ದಯಾನಂದ ಹೆಜಮಾಡಿ, ಪ್ರಹ್ಲಾದ್ ಎಂ.ಎನ್., ಸಂಗೀತ ವಿದೂಷಿ ಉಷಾ ಹೆಬ್ಬಾರ್, ಕೃಷ್ಣಮೂರ್ತಿ ಆಚಾರ್ಯ, ಕಮಲಾವತಿ ವಾಸುದೇವ ಅವರಿಗೆ ಶ್ರೀಗಳು ಶ್ರೀಕೃಷ್ಣ ಪ್ರಸಾದ ನೀಡಿ ಸನ್ಮಾನಿಸಿದರು.
ಪುತ್ತಿಗೆ ಮಠದ ಕಿರಿಯ ಯತಿ ಸುಶ್ರೀಂದ್ರ ತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು. ಮಠದ ವಿದ್ವಾನ್ ಡಾ. ಬಿ.ಗೋಪಾಲ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು. ಮಠದ ದಿವಾನ ನಾಗರಾಜ್ ಆಚಾರ್ಯ, ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಶ್ರೀಗಳ ಆಪ್ತ ಕಾರ್ಯದರ್ಶಿ ರತೀಶ್ ತಂತ್ರಿ, ಸುಗುಣಮಾಲಾ ಪತ್ರಿಕೆಯ ಸಂಪಾದಕ ಮಹಿತೋಷ್ ಆಚಾರ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಚಾಲಕ ರಮೇಶ್ ಭಟ್, ರಮಣ ಆಚಾರ್ಯ ಸಹಕರಿಸಿದರು.
ಉಡುಪಿಯಲ್ಲಿ ಶ್ರೀಕೃಷ್ಣನ ಪೂಜೆ ನಡೆಯುವಂತೆ ವಿಶ್ವಾದ್ಯಂತ ಗೀತೆಯ ಮೂಲಕ ಶ್ರೀಕೃಷ್ಣನ ಆರಾಧನೆ ಆಗಬೇಕೆನ್ನುವುದು ನಮ್ಮ ಉದ್ದೇಶ. ಹೀಗಾಗಿ ಇದು ಉಡುಪಿಯ ಪರ್ಯಾಯವಲ್ಲ, ವಿಶ್ವದ ಪರ್ಯಾಯ. ಹೀಗಾಗಿ ಮನೆಮನೆಯಲ್ಲಿ ಗೀತೆಯ ಜಾಗೃತಿ ಮಾಡಲಾಗುತ್ತಿದೆ. ಕೋಟ್ಯಂತರ ಜನರು ಗೀತಾ ಲೇಖನ ಅಭಿಯಾನದಲ್ಲಿ ಪಾಲ್ಗೊಂಡು ಶ್ರೀಕೃಷ್ಣನ ಅನುಗ್ರಹಕ್ಕೆ ಪಾತ್ರರಾಗಿದ್ದಾರೆ. ಮನಸ್ಸಿನ ಸಂಕಲ್ಪ ಈಡೇರಿಸುವ ಅಪಾರ ಪ್ರಭಾವ, ಶಕ್ತಿ ಭಗವದ್ಗೀತೆಯಲ್ಲಿ ಅಡಗಿದೆ.