ಉಡುಪಿಯ ರಾಜಾಂಗಣದಲ್ಲಿ ಸಂತ ಸಂದೇಶ ನೀಡಿದ ಬನ್ನಂಜೆ ರಾಘವೇಂದ್ರ ತೀರ್ಥರಿಗೆ 'ಶ್ರೀಕೃಷ್ಣ ಗೀತಾನುಗ್ರಹ' ಪ್ರಶಸ್ತಿ ನೀಡಿದರು. ಸುಶ್ರೀಂದ್ರ ಶ್ರೀ, ಪ್ರಸನ್ನ ಆಚಾರ್ಯ ಇತರರಿದ್ದರು. 
ಉಡುಪಿ

ಸಾಧನೆಗೆ ಪ್ರೇರೇಪಿಸುವ ಶಕ್ತಿ ಭಗವದ್ಗೀತೆ

ಸುಗುಣೇಂದ್ರ ತೀರ್ಥ ಶ್ರೀಪಾದರ ಆಶೀರ್ವಚನ
ಗೀತೋತ್ಸವದಲ್ಲಿ ಸಂತ ಸಂದೇಶ-ಸನ್ಮಾನ

ಉಡುಪಿ: ಕುರುಕ್ಷೇತ್ರದಲ್ಲಿ ಪಲಾಯನವಾದ ಮಾಡಲಿದ್ದ ಅರ್ಜುನನಿಗೆ ಯುದ್ಧದ ಮೂಲಕ ಧರ್ಮವನ್ನು ರಸಿ, ಕೌರವರನ್ನು ಸೋಲಿಸಿ ಸಾಧನೆ ಮಾಡು ಎಂದು ಶ್ರೀಕೃಷ್ಣ ಉಪದೇಶ ಮಾಡಿರುವುದೇ ಭಗವದ್ಗೀತೆಯಾಗಿದೆ. ಭೂಮಿಯಲ್ಲಿ ನಾವೆಲ್ಲ ಜನಿಸಿರುವುದೇ ಸಾಧನೆ ಮಾಡಲೆಂದು. ಯಾರೂ ಸುಮ್ಮನೆ ಇರಲು ಅಥವಾ ಏನೂ ಮಾಡುವುದಿಲ್ಲ ಎನ್ನಲು ಸಾಧ್ಯವೇ ಇಲ್ಲ. ಸುಮ್ಮನಿರುವುದೆಂದರೆ ಶವಕ್ಕೆ ಸಮಾನ. ಜೀವನದಲ್ಲಿ ಸಾಧನೆ ಮಾಡು ಎಂದು ತಿಳಿಸುವ ಬೃಹತ್​ ಶಕ್ತಿಯೇ ಭಗವದ್ಗೀತೆಯ ಸಂದೇಶ ಎಂದು ಪರ್ಯಾಯ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು. 
ಉಡುಪಿಯ ರಾಜಾಂಗಣದಲ್ಲಿ ಪರ್ಯಾಯ ಪುತ್ತಿಗೆ ಮಠದಿಂದ ಮುಂದುವರಿದ ಮಾಸಿಕ 'ಬೃಹತ್​ ಗೀತೋತ್ಸವ'ದಲ್ಲಿ ಮಂಗಳವಾರ (ಡಿ.2) ಆಯೋಜಿಸಿದ್ದ ಸಂತ- ಸಂದೇಶ-ಸಂತ -ಸನ್ಮಾನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಅಂಗೈಯಲ್ಲೇ ಇದೆ ಗೀತೆ

ಸಂತ ಸಂದೇಶ ನೀಡಿದ ಬನ್ನಂಜೆ ರಾಘವೇಂದ್ರ ತೀರ್ಥರು, ಭಗವದ್ಗೀತೆಯ ಸಂದೇಶ ಪುಸ್ತಕದಲ್ಲಷ್ಟೇ ಇಲ್ಲ. ಅದು ಎಲ್ಲರ ಅಂಗೈಲ್ಲೇ ಇದೆ. ನಮ್ಮೆಲ್ಲರ ಕೈಯಲ್ಲಿರುವ ಕಿರು ಬೆರಳು (ಅವಿದ್ಯಾ), ಉಂಗುರ ಬೆರಳು (ಕಾಮ-ಆಸೆ), ಮಧ್ಯ ಬೆರಳು (ಕರ್ಮ), ತೋರು ಬೆರಳು (ಜೀವ) ಹಾಗೂ ಹೆಬ್ಬೆರಳು (ದೇವರು). ಇವು ಒಂದೊಂದು ಸಂದೇಶ ನೀಡುತ್ತವೆ. ಗುರು, ದೇವರ ಅನುಗ್ರಹದಿಂದ ಅವಿದ್ಯಾ, ಕಾಮ, ಕರ್ಮವನ್ನು ಬಿಡಿಸಿಕೊಂಡು ಭಗವಂತ (ಹೆಬ್ಬೆರಳು)ನ ಹತ್ತಿರ ಬಾಗುತ್ತಾರೆಯೋ ಅದು ಜ್ಞಾನ ಮುದ್ರೆಯಾಗುತ್ತದೆ. ಗೀತೆಯ ಸಾರದಂತೆ ಯಾರು ಜೀವಿಸುತ್ತಾರೋ ಅವರಿಗೆ ಶ್ರೀಕೃಷ್ಣನು ಅಭಯಹಸ್ತ ನೀಡುತ್ತಾನೆ ಎಂದು ವಿಶಿಷ್ಟವಾಗಿ ಗೀತೆಯ ಮಹತ್ವ ವಿವರಿಸಿದರು.  

'ಶ್ರೀಕೃಷ್ಣ ಗೀತಾನುಗ್ರಹ' ಪ್ರಶಸ್ತಿ ಪ್ರದಾನ

ಪರ್ಯಾಯ ಪುತ್ತಿಗೆ ಮಠದಿಂದ ಸುಗುಣೇಂದ್ರ ಶ್ರೀಗಳು ಬನ್ನಂಜೆ ರಾಘವೇಂದ್ರ ತೀರ್ಥರಿಗೆ ಹಾಗೂ ಹಿರಿಯ ವಕೀಲ ಬಿ.ವಿ. ಆಚಾರ್ಯ ಅವರಿಗೆ 'ಶ್ರೀಕೃಷ್ಣ ಗೀತಾನುಗ್ರಹ' ಪ್ರಶಸ್ತಿ ನೀಡಿ ಗೌರವಿಸಿದರು.  ಪುತ್ತಿಗೆ ಮಠದ ಕಿರಿಯ ಯತಿ ಸುಶ್ರೀಂದ್ರ ತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು. ಶತಾವಧಾನಿ ಉಡುಪಿ ರಾಮನಾಥ ಆಚಾರ್ಯರ 'ಗೀತಾ ಸಮೀಕ್ಷಾ' ಎಂಬ ವಿವಿಧ ಭಾಷೆಯಲ್ಲಿ ಇರುವ ಗೀತೆಯ ಅನುವಾದದ ವೆಬ್​ಸೈಟ್​ ಬಿಡುಗಡೆ ಮಾಡಲಾಯಿತು.
ಪುತ್ತಿಗೆ ಮಠದ ಸುಗುಣಮಾಲಾ ಪತ್ರಿಕೆಯ ಸಂಪಾದಕ ಮಹಿತೋಷ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು. ಮಠದ ದಿವಾನ ನಾಗರಾಜ ಆಚಾರ್ಯ, ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಶ್ರೀಗಳ ಆಪ್ತ ಕಾರ್ಯದರ್ಶಿ ರತೀಶ್​ ತಂತ್ರಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಚಾಲಕ ರಮೇಶ್​ ಭಟ್​, ರವೀಂದ್ರ ಆಚಾರ್ಯ ಸಹಕರಿಸಿದರು.
"

ಮಕ್ಕಳು ಶಾಲೆಗೆ ಹೋಗದೆ ಮನೆಯಲ್ಲೇ ಆಟವಾಡುತ್ತ ಇದ್ದರೆ ಅವರ ಭವಿಷ್ಯ ಹಾಳಾಗುತ್ತದೆ. ಹೀಗಾಗಿ ಮನೆಯಲ್ಲಿ ಹಿರಿಯರು, ತಾಯಂದಿರು ಓದಿದರೆ ಮಕ್ಕಳೂ ಓದುತ್ತಾರೆ. ಏಕೆಂದರೆ, ಮಕ್ಕಳು ಹಿರಿಯರನ್ನೇ ಅನುಸರಿಸುತ್ತಾರೆ. ವಿಶ್ವದ ಶೇ.99 ಜನ ಇನ್ನೊಬ್ಬರ ಅನುಸರಣೆಯನ್ನೇ ಮಾಡುತ್ತಾರೆ. ಅದು ಸರಿಯೋ? ತಪ್ಪೋ ಎಂದು ವಿವೇಚಿಸದೆ ಕಣ್ಮುಚ್ಚಿ ಅನುಸರಿಸುತ್ತಾರೆ. ಹಿಂದಿನವರು ಧರ್ಮದ ಅನುಸರಣೆಯಿಂದ ವಿವೇಕಿಗಳಾಗಿದ್ದರು. ಇಂದಿನವರು ಬೇಡವಾದದ್ದನ್ನೇ ಅನುಸರಿಸುವ ಮೂಲಕ ಅವಿವೇಕಿಗಳಾಗಿದ್ದಾರೆ.