ಕಿರದಾಗಿರುವ ಅಡ್ಕಸ್ಥಳ-ಬಾಳೆಮೂಲೆ ರಸ್ತೆ.
ಕಾಸರಗೋಡು: ಎಣ್ಮಕಜೆ ಪಂಚಾಯಿತಿ ವ್ಯಾಪ್ತಿಯ ಬಾಳೆಮೂಲೆ, ಒಡ್ಯ ಪ್ರದೇಶಕ್ಕೆ ಸಂಚರಿಸುವ ರಸ್ತೆ ಶೋಚನೀಯ ಅವಸ್ಥೆಯಲ್ಲಿದ್ದು, ಮೊದಲ ಮಳೆಗೆ ಹಲವೆಡೆ ಕೆಸರು ತುಂಬಿ ವಾಹನ ಸಂಚಾರಕ್ಕೆ ಭಾರಿ ಅಡಚಣೆಯಾಗಿದೆ.
ಅಡ್ಕಸ್ಥಳದಿಂದ ಬಾಳೆಮೂಲೆ ಹಾದಿಯಾಗಿ ಒಡ್ಯ ಹಾಗೂ ಕರ್ನಾಟಕ ಸಂಪರ್ಕ ಕಲ್ಪಿಸುವ ಲೋಕೋಪಯೋಗಿ ಇಲಾಖೆ ಅಧೀನದ ರಸ್ತೆ ಹೀನಾಯ ಸ್ಥಿತಿಗೆ ತಲುಪಿದ್ದು, ಈ ಮಾರ್ಗವಾಗಿ ನಿತ್ಯವೂ ಹತ್ತಕ್ಕೂ ಅಧಿಕ ಶಾಲೆ ಬಸ್‌ಗಳ ಸಹಿತ ನೂರಾರು ವಾಹನಗಳು ಸಂಚರಿಸುತ್ತಿರುತ್ತವೆ. ರಸ್ತೆ ಕಿರಿದಾಗಿದ್ದು, ಬದಿಗಳಲ್ಲಿ ಕುರುಚಲು ಕಾಡು ಬೆಳೆದು ವಾಹನ ಸಂಚಾರ ಅಪಾಯಕಾರಿಯಾಗಿದೆ.
ಮಾರ್ಗದ ದುಸ್ಥಿತಿಯಿಂದಾಗಿ ಈ ಭಾಗದಲ್ಲಿ ಸಂಚರಿಸುತ್ತಿದ್ದ ಬಸ್ಸುಗಳು ಟ್ರಿಪ್ಪುಗಳನ್ನು ನಿಲ್ಲಿಸಿವೆ. ಸಂಬಂಧಿತ ಅಧಿಕಾರಿಗಳು ಕೂಡ ಒಡ್ಯ ರಸ್ತೆ ದುಸ್ಥಿತಿಗೂ ತಮಗೂ ಸಂಬಂಧವಿಲ್ಲದಂತೆ ಇದ್ದಾರೆ. ಅಂತಾರಾಜ್ಯ ಸಂಪರ್ಕದ ಈ ರಸ್ತೆಯನ್ನು ಶೀಘ್ರವೇ ದುರಸ್ತಿಗೊಳಿಸುವಂತೆ ಸ್ಥಳೀಯರು ಹಾಗೂ ಬಾಳೆಮೂಲೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ರಕ್ಷಕ ಶಿಕ್ಷಕ ಸಂ ಆಡಳಿತ ಒತ್ತಾಯಿಸಿದೆ.
ಎಣ್ಮಕಜೆ ಪಂಚಾಯಿತಿ ವ್ಯಾಪ್ತಿಯ ಬಾಳೆಮೂಲೆ ರಸ್ತೆ ಲೋಕೋಪಯೋಗಿ ಇಲಾಖೆ ಅಧೀನದಲ್ಲಿದ್ದು, ಪ್ರಸಕ್ತ ರಸ್ತೆಯ ಅಭಿವೃದ್ಧಿಗೆ ಪಂಚಾಯಿತಿ ವತಿಯಿಂದ ಮನವಿ ಮೂಲಕ ಸಂಬಂಧಿತ ಇಲಾಖೆಗೆ ಆಗ್ರಹಿಸಲಾಗುವುದು. ತಕ್ಷಣಕ್ಕೆ ರಸ್ತೆ ಅಂಚಿನ ಕುರುಚಲು ಕಾಡು ತೆರವುಗೊಳಿಸಲು ಲೋಕೋಪಯೋಗಿ ಇಲಾಖೆ ಮುಂದಾಗಬೇಕು.
— ಸಿದ್ದೀಕ್ ವಳಮೊಗರು, ಉಪಾಧ್ಯಕ್ಷ ಎಣ್ಮಕಜೆ ಗ್ರಾ.ಪಂ.