ಉಡುಪಿಯ ರಥಬೀದಿಯಲ್ಲಿರುವ ನಂಜನಗೂಡು ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ರಾಯರ ಆರಾಧನಾ ಮಹೋತ್ಸವದ ನಿಮಿತ್ತ ಪ್ರಲ್ಹಾದ ರಾಜರ ಉತ್ಸವ ಮೂರ್ತಿಯ ಬೆಳ್ಳಿಯ ರಥೋತ್ಸವ ಹಾಗೂ ಬೆಳ್ಳಿಯ ಪಲ್ಲಕ್ಕಿ ಉತ್ಸವ ನಡೆಯಿತು. 
ಉಡುಪಿ

ಗುರು ಸಾರ್ವಭೌಮ ರಾಯರ ಉತ್ತರಾರಾಧನೆ

* ಉಡುಪಿ ರಾಘವೇಂದ್ರ ಮಠದಲ್ಲಿ ರಥೋತ್ಸವ 

* ಹರಿದಾಸ ಗೀತೆ, ನಾಟ್ಯ ನಮನ ಸಂಭ್ರಮ

ಉಡುಪಿ: ಉಡುಪಿ ರಥಬೀದಿಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ರಾಘವೇಂದ್ರ ಗುರು ಸಾರ್ವಭೌಮರ ಮೂರು ದಿನಗಳ 355ನೇ ಆರಾಧನಾ ಮಹೋತ್ಸವವು ಸೋಮವಾರ ಉತ್ತರಾರಾಧನೆಯ ಮೂಲಕ ಸಂಪನ್ನಗೊಂಡಿತು.
 ಬೆಳಗ್ಗೆ ಪ್ರಲ್ಹಾದ ರಾಜರ ಉತ್ಸವ ಮೂರ್ತಿಗೆ ಪಂಚಾಮೃತ ಅಭಿಷೇಕ, ಮಹಾಪೂಜೆ ನೆರವೇರಿತು. ಭಕ್ತರಿಗೆ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಪಲ್ಲಕ್ಕಿ ಉತ್ಸವ, ತೊಟ್ಟಿಲು ಸೇವೆ, ಅಷ್ಟಾವಧಾನ ಸೇವೆ ನಡೆಯಿತು. 

ಮಠದೊಳಗೆ ಉತ್ಸವ

ರಾಯರ ಉತ್ತರಾರಾಧನೆಯ ನಿಮಿತ್ತ ಗರ್ಭಗುಡಿಯ ಪ್ರಾಂಗಣದಲ್ಲಿ ರಥೋತ್ಸವ ನಡೆಯಿತು. ಪ್ರಲ್ಹಾದ ರಾಜರ ಉತ್ಸವ ಮೂರ್ತಿಯನ್ನು ಬೆಳ್ಳಿಯ ರಥದಲ್ಲಿಟ್ಟು, ಗೋವಿಂದನ ಸ್ಮರಣೆಯೊಂದಿಗೆ ಗರ್ಭಗುಡಿಯ ಸುತ್ತ ತೇರನ್ನು ಎಳೆಯಲಾಯಿತು. ಬಳಿಕ ಬೆಳ್ಳಿ ಪಲ್ಲಕ್ಕಿಯಲ್ಲಿ ಉತ್ಸವ ನಡೆಸಲಾಯಿತು.

ಸಾಂಸ್ಕೃತಿಕ ಕಾರ್ಯಕ್ರಮ

ಆರಾಧನೆಯ ನಿಮಿತ್ತ ಅಭಿರಾಮ ಧಾಮ ಸನಾತನ ಸಂಸ್ಕಾರ ಕೇಂದ್ರದ ಶಿಷ್ಯರಿಂದ ಸಂಜೆ 4 ಗಂಟೆಯಿಂದ ಹರಿದಾಸ ವಾಣಿ ಭಜನಾ ಕಾರ್ಯಕ್ರಮ ಹಾಗೂ ನರ್ತನ ನಮನ ಭರತನಾಟ್ಯ ಪ್ರದರ್ಶನ ನಡೆಯಿತು. ಡಾ.ಸುದರ್ಶನ್​ ಭಾರತೀಯ ಪೆರ್ಲತ್ತಾಯ ಅವರು ದಾಸರ ವಿವಿಧ ಗೀತೆಗಳನ್ನು ಹಾಡಿದರು. ತಬಲಾದಲ್ಲಿ ವಿದ್ವಾನ್​ ಗುರುದತ್ತ, ಹಾಮೋರ್ನಿಯಂನಲ್ಲಿ ವಿದುಷಿ ಲಲಿತಾ ಶ್ರೀರಾಮ ಸಹಕರಿಸಿದರು. ಗುರು ವಿದುಷಿ ಸುಷ್ಮಾ ಸುದರ್ಶನ್​ ಅವರ ಶಿಷ್ಯರು ಭರತನಾಟ್ಯ ಪ್ರದರ್ಶಿಸಿದರು.
"

ಪೂರ್ವಾರಾಧನೆ, ಮಧ್ಯಾರಾಧನೆ, ಉತ್ತರಾರಾಧನೆಯ ಮೂಲಕ ಗುರು ರಾಘವೇಂದ್ರರ 355ನೇ ಆರಾಧನಾ ಮಹೋತ್ಸವವನ್ನು ಅಪಾರ ಭಕ್ತಗಣಗಳ ಪಾಲ್ಗೊಳ್ಳುವಿಕೆಯಲ್ಲಿ ಆಚರಿಸಲಾಗಿದೆ. 'ಶ್ರವಣಂ ಕೀರ್ತನಂ ವಿಷ್ಣೋ: ಪಾದ ಸೇವನಂ ಆರ್ಜನಂ ವಂದನಂ ದಾಸ್ಯಂ ಸಖ್ಯಂ ಆತ್ಮ ನಿವೇದನಂ' ಹೀಗೆ ನವ ವಿಧಾನದಲ್ಲಿ ಭಗವಂತನನ್ನು ಆರಾಧಿಸಬೇಕೆಂದು ಪ್ರಲ್ಹಾದ ರಾಜರು ಸೂಚಿಸಿದ್ದರು. ಅದರಂತೆ ಆದಿ, ಮಧ್ಯ, ಅಂತ್ಯದ ಆರಾಧನೆ ವಿಧಿವತ್ತಾಗಿ ನೆರವೇರಿದೆ.

— ಜಯತೀರ್ಥ ಆಚಾರ್ಯ. ಉಡುಪಿ ರಾಯರ ಮಠದ ಮ್ಯಾನೇಜರ್.