ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಕೆರೆಕಟ್ಟೆಯಲ್ಲಿರುವ ಸಂತ ಅಂತೋನಿ ಪುಣ್ಯಕ್ಷೇತ್ರ.
* ರೆಕ್ಟರ್ ವಂ.ಸುನೀಲ್ ವೇಗಸ್ ಮಾಹಿತಿ
* ಕುಂದಾಪುರದ ಕೆರೆಕಟ್ಟೆಯಲ್ಲಿ ಕಾರ್ಯಕ್ರಮ
ಉಡುಪಿ: ಕುಂದಾಪುರ ತಾಲೂಕಿನ ಸಿದ್ದಾಪುರದ ಹೊಸಂಗಡಿ ಸಮೀಪದ ಕೆರೆಕಟ್ಟೆಯಲ್ಲಿರುವ ಸಂತ ಅಂತೋನಿ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ ಹಾಗೂ ನಿರ್ಗತಿಕರಿಗಾಗಿ ನಿರ್ಮಿಸಿರುವ ಆಶ್ರಮದ ಉದ್ಘಾಟನಾ ಕಾರ್ಯಕ್ರಮ ಜೂ.13ರಂದು ಬೆಳಗ್ಗೆ 10 ಗಂಟೆಗೆ ಜರುಗಲಿದೆ.
ಉಡುಪಿ ಧರ್ಮ ಪ್ರಾಂತ್ಯದ ಅಧ್ಯಕ್ಷ ಅತಿ ವಂ. ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜಾ ನಿರ್ಗತಿಕರ ಆಶ್ರಮ ಉದ್ಘಾಟಿಸಿ ಆಶೀರ್ವಚನ ನೀಡಲಿದ್ದು, ಬಳಿಕ ಮಹೋತ್ಸವದ ಬಲಿಪೂಜೆಯ ನೇತೃತ್ವ ವಹಿಸಲಿದ್ದಾರೆ. ಸಂಜೆ 4 ಗಂಟೆಗೆ ಶಿವಮೊಗ್ಗ ಧರ್ಮಕ್ಷೇತ್ರದ ಸಂತ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್ನ ವಂ.ರೋಮನ್ ಪಿಂಟೊ ಅವರು ಕನ್ನಡ ಭಾಷೆಯಲ್ಲಿ ಪರಮ ಪ್ರಸಾದ ಆರಾಧನೆ ಮತ್ತು ಪವಿತ್ರ ಬಲಿಪೂಜೆ ನೆರವೇರಿಸಲಿದ್ದಾರೆ ಎಂದು ಕ್ಷೇತ್ರದ ರೆಕ್ಟರ್ ವಂ.ಸುನೀಲ್ ವೇಗಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯ ಪ್ರಸಿದ್ಧ ಕ್ರೈಸ್ತ ತಾಣ
ಕೆರೆಕಟ್ಟೆ ಸಂತ ಅಂತೋನಿ ಪುಣ್ಯಕ್ಷೇತ್ರವು ಉಡುಪಿ ಜಿಲ್ಲೆಯಲ್ಲಿರುವ ಪ್ರಸಿದ್ಧ ಕ್ರೈಸ್ತ ಯಾತ್ರಾ ಸ್ಥಳವಾಗಿದೆ. ಪಶ್ಚಿಮ ಘಟ್ಟದ ಹಚ್ಚ ಹಸುರಿನ ತಪ್ಪಲಿನಲ್ಲಿ, ಬಾಳೆಬರೆ ಘಾಟ್ನ ಕೆಳಭಾಗದ ರಮಣೀಯ ತಾಣದಲ್ಲಿದೆ. ಈ ಪುಣ್ಯಕ್ಷೇತ್ರವು ತನ್ನದೇ ಆದ ಅದ್ಭುತ ಇತಿಹಾಸ ಮತ್ತು ಪವಾಡಗಳಿಂದ ಹೆಸರುವಾಸಿಯಾಗಿದೆ.
ಶತಮಾನದ ಹಿಂದೆ ಕೆರೆಕಟ್ಟೆಯ ಓರ್ವ ಹಿಂದೂ ರೈತನು ತನ್ನ ಜಮೀನು ಉಳುಮೆ ಮಾಡುತ್ತಿದ್ದಾಗ ಸಂತ ಅಂತೋನಿ ಅವರ ಮರದ ಪ್ರತಿಮೆ ಲಭಿಸಿತ್ತು. ಅದನ್ನೇ ಕೆರೆಕಟ್ಟೆಯಲ್ಲಿರುವ ಚರ್ಚ್ನಲ್ಲಿ ಪ್ರತಿಷ್ಠಾಪಿಸಲಾಗಿದೆ. ಬಸ್ರೂರಿನ ಸಂತ ಫಿಲಿಪ್ ನೆರಿ ಚರ್ಚ್ನ ವ್ಯಾಪ್ತಿಗೆ ಒಳಪಟ್ಟಿದ್ದ ಈ ಪವಿತ್ರ ಕ್ಷೇತ್ರವು, ಕೇವಲ 8 ಕುಟುಂಬ ಹಾಗೂ 22 ಸದಸ್ಯರನ್ನು ಒಳಗೊಂಡಿದೆ. 2013ರ ಜೂ.13ರಂದು ಉಡುಪಿ ಧರ್ಮಪ್ರಾಂತ್ಯದ ಪುಣ್ಯಕ್ಷೇತ್ರವೆಂದು ಅಧಿಕೃತವಾಗಿ ಘೋಷಿಸಲ್ಪಟ್ಟಿತು.
ಭಕ್ತರಿಗೆ ಊಟದ ವ್ಯವಸ್ಥೆ
ಪ್ರತಿ ಮಂಗಳವಾರ ಸಂತ ಅಂತೋನಿ ಪುಣ್ಯಕ್ಷೇತ್ರದಲ್ಲಿ ವಿಶೇಷ ಪ್ರಾರ್ಥನೆ ಮತ್ತು ಪವಿತ್ರ ಬಲಿಪೂಜೆ ನಡೆಯುತ್ತದೆ. ದೂರದ ಊರುಗಳಿಂದ ಬರುವ ಭಕ್ತರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನೂ ಮಾಡಲಾಗುತ್ತದೆ. ಪ್ರತಿವರ್ಷ ಸಂತ ಅಂತೋನಿ ಅವರ ವಾರ್ಷಿಕ ಮಹೋತ್ಸವವು ಫೆಬ್ರವರಿ ಮತ್ತು ಜೂನ್ ತಿಂಗಳಲ್ಲಿ ವಿಜೃಭಣೆಯಿಂದ ಜರುಗುತ್ತದೆ ಎಂದು ಪುಣ್ಯಕ್ಷೇತ್ರದ ರೆಕ್ಟರ್ ವಂ.ಸುನೀಲ್ ವೇಗಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿರ್ಗತಿಕರ ವಾಸ್ತವ್ಯಕ್ಕೆ ಆಶ್ರಮ ಸಜ್ಜು
ಕೆರೆಕಟ್ಟೆ ಕ್ಷೇತ್ರದಲ್ಲಿ ಉದ್ಘಾಟನೆಗೆ ಸಜ್ಜಾಗಿರುವ ನಿರ್ಗತಿಕರ ಆಶ್ರಮ. ಉಡುಪಿ ಧರ್ಮಪ್ರಾಂತ್ಯದ ಪ್ರಥಮ ಅಧ್ಯಕ್ಷರಾಗಿ ನಿವೃತ್ತರಾಗಿರುವ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಅವರಿಗೆ ಸಮಾಜದಲ್ಲಿರುವ ನಿರ್ಗತಿಕರ ಸೇವೆ ಮಾಡಬೇಕೆಂಬ ಹಂಬಲವಿತ್ತು. ಅದಕ್ಕಾಗಿ ಕೆರೆಕಟ್ಟೆ ಸಂತ ಅಂತೋನಿ ಪುಣ್ಯಕ್ಷೇತ್ರ ಆಯ್ಕೆ ಮಾಡಿಕೊಂಡು ಅಲ್ಲಿ ನಿರ್ಗತಿಕರಿಗೆ ಆಶ್ರಮ ಕಟ್ಟಲು ನಿರ್ಧರಿಸಿದ್ದರು. ಕ್ಷೇತ್ರದ ರೆಕ್ಟರ್ ಸುನೀಲ್ ವೇಗಸ್ ಅವರ ನೇತೃತ್ವದಲ್ಲಿ ದಾನಿಗಳ ಸಹಕಾರದೊಂದಿಗೆ 2023ರ ಜೂ.13ರಂದು ಅಂದಿನ ಧರ್ಮಾಧ್ಯಕ್ಷರು ನಿರ್ಗತಿಕರ ಆಶ್ರಮಕ್ಕೆ ಶಿಲನ್ಯಾಸ ಮಾಡಿದ್ದರು. ಇದೀಗ 60 ನಿರ್ಗತಿಕರು ವಾಸ್ತವ್ಯ ಮಾಡಲು ಆಶ್ರಮ ಸಜ್ಜಾಗಿದೆ. ಅವರಿಗೆ ಊಟ, ವಸತಿ ಸಂಪೂರ್ಣವಾಗಿ ಉಚಿತವಾಗಿದ್ದು, ಮೇಲ್ವಿಚಾರಣೆಯನ್ನು ಫ್ರಾನ್ಸಿಸ್ಕನ್ ಸಿಸ್ಟರ್ಸ್ ಆಫ್ ದಿ ಇಮ್ಯಾಕುಲೆಟ್ ಸಂಸ್ಥೆಯ ಧರ್ಮ ಭಗಿನಿಯರು ನಿರ್ವಹಿಸಲಿದ್ದಾರೆ.