ಬಿ.ಸಿ.ರೋಡ್‌ನ ಖಾಸಗಿ ಬಸ್ ನಿಲ್ದಾಣದಲ್ಲಿ ಕಾಂಕ್ರೀಟ್‌ನಲ್ಲಿ ದೊಡ್ಡ ಹೊಂಡಗಳು ಸೃಷ್ಟಿಯಾಗಿರುವುದು.
ಬಿ.ಸಿ.ರೋಡ್‌ನ ಖಾಸಗಿ ಬಸ್ ನಿಲ್ದಾಣದಲ್ಲಿ ಬೃಹತ್ ಹೊಂಡಗಳು ಸೃಷ್ಟಿಯಾಗಿ ಪ್ರಯಾಣಿಕರು, ಬಸ್ ಚಾಲಕರು ಕಿರಿಕಿರಿ ಅನುಭವಿಸುವಂತಾಗಿದೆ. ಬೇಸಿಗೆ, ಮಳೆಗಾಲ ಸೇರಿದಂತೆ ಸರ್ವಋತುವಿನಲ್ಲೂ ಬಸ್ ನಿಲ್ದಾಣ ವಾಹನಗಳ ನಿಲುಗಡೆಗೆ ಉತ್ತಮವಾಗಿರಬೇಕೆಂದು ಕಾಂಕ್ರೀಟ್ ಹಾಕಲಾಗಿತ್ತು, ದುರದೃಷ್ಟವೆಂದರೆ ಕಾಂಕ್ರೀಟ್‌ನಲ್ಲೂ ದೊಡ್ಡ ದೊಡ್ಡ ಹೊಂಡಗಳು ನಿರ್ಮಾಣಗೊಂಡಿವೆ.
ಗ್ರಾಮೀಣ ಭಾಗಗಳಿಗೆ ಹೋಗುವ ಸರ್ವೀಸ್ ಬಸ್‌ಗಳ ನಿಲುಗಡೆಗೆ ಬಂಟ್ವಾಳ ಪುರಸಭೆ ಬಿ.ಸಿ.ರೋಡಿನ ಹೃದಯ ಭಾಗದಲ್ಲಿ ಬಸ್ ನಿಲ್ದಾಣ ನಿರ್ಮಿಸಿದೆ. ಪುರಸಭೆಗೆ ಆದಾಯ ತರುವ ಉದ್ದೇಶದಿಂದ ಒಂದು ಭಾಗದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಿ ಅದರ ಮುಂಭಾಗದಲ್ಲಿ ಬಸ್‌ಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಕೆಲವೇ ವರ್ಷದಲ್ಲಿ ಕಾಮಗಾರಿಯ ಅಸಯಲಿಯತ್ತು ಅನಾವರಣಗೊಂಡಿದೆ. ಕಾಂಕ್ರೀಟ್‌ನಲ್ಲೂ ಹೊಂಡಗಳು ಮೂಡಿ ಕಳಪೆ ಕಾಮಗಾರಿಯ ಗುಣಮಟ್ಟ ಜಗಜ್ಜಾಹೀರಾಗಿದೆ.
ಅಪಾಯಕಾರಿ ಹೊಂಡಗಳು: ಬಸ್‌ಗಳು ನಿಲ್ದಾಣ ಪ್ರವೇಶಿಸುವಲ್ಲೇ ದೊಡ್ಡ-ದೊಡ್ಡ ಹೊಂಡಗಳು ಸ್ವಾಗತಿಸುತ್ತವೆ. ನಿಲ್ದಾಣದಿಂದ ಹೊರಡುವಾಗ ಮತ್ತು ನಿಲ್ದಾಣಕ್ಕೆ ಬಂದು ನಿಲ್ಲುವಾಗ ಚಕ್ರಗಳು ಹೊಂಡಕ್ಕೆ ಬೀಳುವುದು ಅನಿವಾರ್ಯವಾಗಿದೆ. ಈ ನಿಲ್ದಾಣದಲ್ಲಿ ಬಸ್‌ಗಳ ಸಂಚಾರ ಮಾತ್ರವಲ್ಲದೆ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಕಚೇರಿ, ಅಂಗಡಿ, ವಾಣಿಜ್ಯಮಳಿಗೆ, ವಸತಿಗೃಹಗಳಿಗೆ ಹೋಗುವ ಲಘುವಾಹನಗಳು ಈ ಹೊಂಡಕ್ಕೆ ಬಿದ್ದೇ ಮುಂದೆ ಸಾಗಬೇಕಿದೆ. ಇಳಿಜಾರು ರಸ್ತೆಯಲ್ಲಿ ವಾಹನಗಳು ಇಳಿಯುವ ಸಂದರ್ಭ ಧುತ್ತೆಂದು ಎದುರಾಗುವ ಈ ಹೊಂಡಕ್ಕೆ ಬಿದ್ದು ಪರಿತಪಿಸುವ ಘಟನೆಗಳು ಪ್ರತಿನಿತ್ಯ ನಡೆಯುತ್ತಿದೆ.
ದುರಸ್ತಿಗೆ ಪುರಸಭೆ ನಿರ್ಲಕ್ಷೃ
ಕಾಂಕ್ರೀಟ್ ಹಾಕಿದ ಜಾಗದಲ್ಲೂ ದೊಡ್ಡ ಗುಂಡಿಗಳು ನಿರ್ಮಾಣಗೊಂಡಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಕಾಮಗಾರಿ ಬಗ್ಗೆ ಟೀಕೆಯ ಮಾತುಗಳು ಕೇಳಿ ಬರುತ್ತಿವೆ. ಕಾಮಗಾರಿಗೆ ನಿಗದಿಪಡಿಸಿದ ಅನುದಾನದ ಮೊತ್ತವನ್ನು ದುರ್ಬಳಕೆ ಮಾಡಲಾಗಿದೆಯೇ? ಎನ್ನುವ ಸಂಶಯ ಕಂಡು ಬರುತ್ತಿದೆ. ಮಳೆಗೆ ಡಾಂಬರು ಕರಗಿದಂತೆ ಕಾಂಕ್ರೀಟ್ ಕರಗಿ ಹೋಗಿರುವುದು ಕಾಮಗಾರಿಯಲ್ಲಿ ಅಕ್ರಮ ನಡೆದಿರಬಹುದೇ ಎನ್ನುವ ಗುಮಾನಿ ಬರುವಂತಿದೆ. ಬಂಟ್ವಾಳ ಪುರಸಭೆ ವಾಣಿಜ್ಯ ಸಂಕೀರ್ಣದಲ್ಲಿರುವ ಅಂಗಡಿಗಳಿಂದ ಬಾಡಿಗೆ ರೂಪದಲ್ಲಿ ಆದಾಯ ಪಡೆಯುತ್ತಿದ್ದರೂ ಗುಂಡಿಗಳನ್ನು ಮುಚ್ಚಲು ಈವರೆಗೂ ಯಾವ ಕ್ರಮ ಕೈಗೊಳ್ಳದಿರುವ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿ.ಸಿ.ರೋಡ್ ಬಸ್ ನಿಲ್ದಾಣಕ್ಕೆ ಹಾಕಿರುವ ಕಾಂಕ್ರೀಟ್‌ನಲ್ಲಿ ಹೊಂಡಗಳು ಸೃಷ್ಟಿಯಾಗಿರುವುದು ಕಳಪೆ ಕಾಮಗಾರಿ ನಡೆದಿರುವುದಕ್ಕೆ ಸಾಕ್ಷಿ. ಸರ್ವಋತುವಿನಲ್ಲೂ ರಸ್ತೆಗಳು ಚೆನ್ನಾಗಿರಬೇಕು ಎಂದು ಕಾಂಕ್ರೀಟ್ ಹಾಕಲಾಗುತ್ತದೆ. ಆದರೆ ಕಾಂಕ್ರೀಟ್ ರಸ್ತೆಯಲ್ಲೂ ಈ ರೀತಿ ಹೊಂಡ ಬಿದ್ದರೆ ಹೇಗೆ?.