ಪವರ್ ಫ್ರೆಂಡ್ಸ್ ಕುಟುಂಬ ಸಮ್ಮಿಲನ-ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಭಟ್, ವಿನಯ್ ಕುಮಾರ್, ಸುದರ್ಶನ್ ಎಂ. ಮತ್ತಿತರರಿದ್ದರು.  
ಉಡುಪಿ

ಸ್ನೇಹಿತರನ್ನು ಕುಟುಂಬದಂತೆ ಒಗ್ಗೂಡಿಸುವ ಕಾರ್ಯ

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ

ಮೂಡುಬಿದಿರೆಯ ಗಣೇಶೋತ್ಸವಕ್ಕೆ ದೇಶದಲ್ಲೇ ವಿಶೇಷ ಹೆಸರಿದ್ದು, ಅಮರನಾಥ ಶೆಟ್ಟಿಯವರು ರೂಪಿಸಿದ ಪರಂಪರೆಯನ್ನು ಮುಂದುವರಿಸುವಲ್ಲಿ ಪವರ್ ಫ್ರೆಂಡ್ಸ್ ಪ್ರಮುಖ ಪಾತ್ರ ವಹಿಸುತ್ತಿದೆ. ಕುಟುಂಬ ವ್ಯವಸ್ಥೆಯಲ್ಲಿ ಬಾಂಧವ್ಯ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಸ್ನೇಹಿತರನ್ನು ಕುಟುಂಬದಂತೆ ಒಗ್ಗೂಡಿಸುವ ಕಾರ್ಯ ಸಂಸ್ಥೆಯಿಂದ ನಡೆಯುತ್ತಿದೆ ಎಂದು ಅಲಂಗಾರು ಶ್ರೀ ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ಸುಬ್ರಹ್ಮಣ್ಯ ಭಟ್ ಹೇಳಿದರು.
ಮೂಡುಬಿದಿರೆಯಲ್ಲಿ ಪವರ್ ಫ್ರೆಂಡ್ಸ್ ಬೆದ್ರ ಸಂಸ್ಥೆಯ ವತಿಯಿಂದ ಆಮಂತ್ರಣ ಪತ್ರಿಕೆ ಬಿಡುಗಡೆ, ಹಾಗೂ ಪವರ್ ಫ್ರೆಂಡ್ಸ್ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಪವರ್ ಫ್ರೆಂಡ್ಸ್ ಅಧ್ಯಕ್ಷ ವಿನಯ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ. ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು.
ನಿವೃತ್ತ ಶಿಕ್ಷಕ ನಾರಾಯಣ ನಾಯಕ್, ಅಂತಾರಾಷ್ಟ್ರೀಯ ಕಬಡ್ಡಿ ಚಾಂಪಿಯನ್ ಧನಲಕ್ಷ್ಮೀ ಪೂಜಾರಿ, ರಕ್ತದಾನಿ ಮನು ಒಂಟಿಕಟ್ಟೆ, ಪ್ರತಿಭಾನ್ವಿತ ವಿದ್ಯಾರ್ಥಿ ಸುಹಾಸ್ ಹರೀಶ್ ಹೆಗ್ಡೆ ಹಾಗೂ ಸಾಮಾಜಿಕ ಚಟುವಟಿಕೆಯಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ ಎಡಪದವು ಬಜರಂಗದಳ ಸೇವಾ ಬ್ರಿಗೇಡ್‌ಗೆ ಪವರ್ ಫ್ರೆಂಡ್ಸ್ ಪ್ರಶಸ್ತಿ ಪ್ರದಾನ ಮಾಡಲಾಯಿತು.

ವಕೀಲರ ಸಂಘದ ಅಧ್ಯಕ್ಷ ಶರತ್ ಜಿ. ಶೆಟ್ಟಿ, ರೋಟರಿ ಜೋನ್ 4 ಡಿಸ್ಟ್ರಿಕ್ಟ್ 3181ರ ಅಸಿಸ್ಟೆಂಟ್ ಗವರ್ನರ್ ಶ್ರೀಕಾಂತ್ ಕಾಮತ್, ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್ ಟೌನ್ ಅಧ್ಯಕ್ಷ ಡೇನಿಸ್ ಪಿರೇರಾ, ಕೆ. ಅಮರನಾಥ ಶೆಟ್ಟಿ ಚಾರಿಟೆಬಲ್ ಟ್ರಸ್ಟ್ ಸ್ಥಾಪಕಿ ಡಾ.ಅಮರಶ್ರೀ ಅಮರನಾಥ್ ಶೆಟ್ಟಿ, ಇನ್ನರ್ ವೀಲ್ ಕ್ಲಬ್ ಮೂಡುಬಿದಿರೆ ಅಧ್ಯಕ್ಷೆ ನಿಶ್ಮಿತಾ ಶೀನಪ್ಪ, ವೈಬ್ರೆಂಟ್ ಎಜುಕೇಶನ್-ಚಾರಿಟೆಬಲ್ ಟ್ರಸ್ಟ್‌ನ ಟ್ರಸ್ಟಿ ಡಾ.ಎಸ್.ಎಲ್.ವೆಂಕಟೇಶ್ ನಾಯಕ್, ಉದ್ಯಮಿಗಳಾದ ಅಬು ಅಲಾ ಪುತ್ತಿಗೆ ಹಾಗೂ ಸಂದೀಪ್ ಶೆಟ್ಟಿ ಉಪಸ್ಥಿತರಿದ್ದರು.
ಉಪಾಧ್ಯಕ್ಷ ಜಯಪ್ರಕಾಶ್ ಭಂಡಾರಿ ಸ್ವಾಗತಿಸಿದರು. ಕೋಶಾಧಿಕಾರಿ ಗುರುಪ್ರಸಾದ್ ವರದಿ ವಾಚಿಸಿದರು. ಶಂಕರ್ ಕೋಟ್ಯಾನ್ ನಿರೂಪಿಸಿ, ಕಾರ್ಯದರ್ಶಿ ಸುಧಾಕರ್ ಶೆಟ್ಟಿ ವಂದಿಸಿದರು. ಅನಿಶ್ ನಿರ್ದೇಶನದಲ್ಲಿ ಎಂ.ಜೆ. ಸ್ಟೆಪ್ ಅಪ್ ತಂಡದ ವಿದ್ಯಾರ್ಥಿಗಳ ನೃತ್ಯ ಹಾಗೂ ಗಾಯಕಿ ಮಹಿಮಾ ತಂಡದ ಸಂಗೀತ ಕಾರ್ಯಕ್ರಮ ನಡೆಯಿತು. ಸಂದೀಪ್ ಶೆಟ್ಟಿ ರಾಯಿ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮ ನಿರೂಪಿಸಿದರು.