ಬೈಂದೂರಿನ ಆಡಳಿತ ಸೌಧ ಎದುರು ಗುರುವಾರ ಕಟ್ಟಡ ಕಾರ್ಮಿಕರು ಪ್ರತಿಭಟನೆ ನಡೆಸಿದರು. ರಾಜೀವ್ ಪಡುಕೋಣೆ, ಗಣೇಶ್ ತೊಂಡೆಮಕ್ಕಿ, ಶೀಲಾವತಿ ಇತರರು ಇದ್ದರು.
ಬೈಂದೂರು: ಕೇಂದ್ರ ಸರ್ಕಾರವು 2019-20ರಲ್ಲಿ ಕಾರ್ಮಿಕ ಕಾನೂನು, ವೇತನ ಸಂಹಿತೆ, ಕೈಗಾರಿಕಾ ಸಂಬಂಧಗಳ ಸಂಹಿತೆ, ಸಾಮಾಜಿಕ ಭದ್ರತಾ ಸಂಹಿತೆ, ವೃತ್ತಿ ಸುರಕ್ಷತಾ ಮತ್ತು ಕೆಲಸದ ಪರಿಸ್ಥಿತಿ ಹೆಸರಿನಲ್ಲಿ ನಾಲ್ಕು ಸಂಹಿತೆಗಳನ್ನಾಗಿ ರೂಪಿಸಿ ಜಾರಿಗೊಳಿಸಿದೆ. ಈ ಸಂಹಿತೆಯಲ್ಲಿ ಕನಿಷ್ಠ ವೇತನಕ್ಕೆ ಸಂಬಂಧಿಸಿದಂತೆ ಕಾರ್ಮಿಕರಿಗೆ ನ್ಯಾಯ ಮರೀಚಿಕೆಯಾಗಿದೆ ಎಂದು ಕಾರ್ಮಿಕ ಮುಖಂಡ ಗಣೇಶ್ ತೊಂಡೆಮಕ್ಕಿ ಹೇಳಿದರು.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ವಿರೋಧಿಸಿ ಬೈಂದೂರಿನ ಆಡಳಿತ ಸೌಧ ಎದುರು ಗುರುವಾರ ನಡೆದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದರು.
ಸಂಘದ ಅಧ್ಯಕ್ಷ ರಾಜೀವ್ ಪಡುಕೋಣೆ ಮಾತನಾಡಿ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರಾಜ್ಯದಲ್ಲಿ ಜಾರಿಗೊಳಿಸುವುದಿಲ್ಲ ಎಂದು ಮುಖ್ಯಮಂತ್ರಿ ಘೋಷಿಸಬೇಕು ಹಾಗೂ ಕಲ್ಯಾಣ ಮಂಡಳಿಯನ್ನು ಪುನರ್ ರಚಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳಿಗೆ ಪ್ರಾತಿನಿಧ್ಯ ನೀಡಬೇಕು ಎಂದು ಒತ್ತಾಯಿಸಿದರು.
ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು. ಪದಾಧಿಕಾರಿಗಳಾದ ಶ್ರೀಧರ್, ರೊನಾಲ್ಡ್ ರಾಜೇಶ್, ಜನವಾದಿ ಸಂಘಟನೆ ಜಿಲ್ಲಾ ಕಾರ್ಯದರ್ಶಿ ಶೀಲಾವತಿ, ಕೃಷಿ ಕೂಲಿಕಾರರ ಸಂಘದ ತಾಲೂಕು ಅಧ್ಯಕ್ಷೆ ನಾಗರತ್ನಾ ನಾಡ, ಕಟ್ಟಡ ಕಾರ್ಮಿಕರ ಸಂಘದ ಪದಾಧಿಕಾರಿಗಳು ಹಾಗೂ ತಾಲೂಕು ವ್ಯಾಪ್ತಿಯ 800 ಸದಸ್ಯರು ಮುಷ್ಕರದಲ್ಲಿ ಭಾಗವಹಿಸಿದ್ದರು. ಕಾರ್ಯದರ್ಶಿ ವಿಜಯ ವಂದಿಸಿದರು.