ಬಂಧಿತ ಆರೋಪಿ ಸಿ.ಎಚ್.ಅಶ್ರಫ್
ಕಾಸರಗೋಡು: ವೇಟ್ಟುಮ್ಮಲ್ ರತೀಶ್ ಕೊಲೆ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಕದಿರೂರು ನಿವಾಸಿ ಸಿ.ಎಚ್.ಅಶ್ರಫ್(58) ಎಂಬಾತನನ್ನು ಪ್ರತ್ಯೇಕ ತನಿಖಾ ತಂಡ ಬಂಧಿಸಿದೆ.
ಕೊಲೆ ಬಳಿಕ ಈತ 10 ವರ್ಷ ಕಾಲ ಮೈಸೂರು, ಬೆಂಗಳೂರು, ಮುಂಬೈ ಮೊದಲಾದೆಡೆ ಹೋಟೆಲ್ ಕಾರ್ಮಿಕನಾಗಿ ತಲೆಮರೆಸಿಕೊಂಡಿದ್ದ. ಬಳಿಕ 15 ವರ್ಷದಿಂದ ಪಯ್ಯನ್ನೂರಿನ ಸಮೀಪ ಗೂಡಂಗಡಿ ನಡೆಸುತ್ತ ನೆಲೆಸಿದ್ದನು. ಇಲ್ಲಿಗೆ ಪೊಲೀಸರ ಸಹಿತ ಹಲವಾರು ಮಂದಿ ತಿಂಡಿ ತಿನ್ನಲು ಬರುತ್ತಿದ್ದರು. ಈ ಮಧ್ಯೆ ಸಿಟಿ ಪೊಲೀಸ್ ಕಮೀಷನರ್ ವಿಜಯ್ ಭರತ್ ರೆಡ್ಡಿ ರಚಿಸಿದ್ದ ಪ್ರತ್ಯೇಕ ತನಿಖಾ ತಂಡ ಈತನಿಗಾಗಿ ತನಿಖೆ ತೀವ್ರಗೊಳಿಸಿತ್ತು.
ವಿವಿಧ ಗುಂಪುಗಳಾಗಿ ತಂಡ ಚೆನ್ನೈ, ಮುಂಬೈ, ಬೆಂಗಳೂರು, ಮೈಸೂರುಗಳಲ್ಲೆಡೆ ತನಿಖೆ ನಡೆಸಿದ್ದು, ಕೊನೆಯದಾಗಿ ಈತ ಪಯ್ಯನ್ನೂರಿನಲ್ಲಿ ಗೂಡಂಗಡಿ ನಡೆಸುತ್ತಿರುವ ಮಾಹಿತಿಯಂತೆ ಬಂಧಿಸಲಾಯಿತು.