ಬಾಬು ಪೂಜಾರಿ ದೇಹದಾರ್ಢ್ಯ ಪ್ರದರ್ಶಿಸುತ್ತಿರುವುದು
- ಇಳಿವಯಸ್ಸಿನಲ್ಲೂ ನಿವೃತ್ತ ಸೈನಿಕ ಬಾಬು ಪೂಜಾರಿ ಸಾಧನೆ
- 66ರ ವಯಸ್ಸಿನಲ್ಲಿ ದೇಹದಾಢ್ಯ ಸ್ಪರ್ಧೆ
- ನಾಲ್ಕಕ್ಕೂ ಹೆಚ್ಚು ಬಾರಿ ಮಿಸ್ಟರ್ ಇಂಡಿಯಾ ಪ್ರಶಸ್ತಿ
ಬೈಂದೂರು: ಆಸಕ್ತಿ, ಉತ್ಸಾಹ, ಪರಿಶ್ರಮಗಳಿದ್ದಾಗ ವಯಸ್ಸಿನ ಅಡ್ಡಿಯಾಗದು ಅನ್ನೋದಕ್ಕೆ ಶಿರೂರಿನ ಬಾಬು ಪೂಜಾರಿ ಎನ್ನುವ ನಿವೃತ್ತ ಸೈನಿಕ ಉದಾಹರಣೆಯಾಗಿದ್ದಾರೆ. 66ರ ವಯಸ್ಸಿನಲ್ಲಿ ದೇಹದಾಢ್ಯ ಸ್ಪರ್ಧೆಯಲ್ಲಿ ಭಾಗವಹಿಸುತ್ತಾ ಹತ್ತಾರು ಪ್ರಶಸ್ತಿ ಪಡೆದು ಯುವಕರಿಗೆ ಸ್ಫೂರ್ತಿಯಾಗಿದ್ದಾರೆ.
ಬಾಬು ಪೂಜಾರಿ ಮೂಲತ@ ಕುಂದಾಪುರದ ಆನಗಳ್ಳಿಯವರು. ಹೊಟೇಲ್ ನಿಮಾರ್ಣ ಹಂತದಲ್ಲಿ ಕಾರ್ಮಿಕರಾಗಿ ಕೆಲಸ ಮಾಡಿದ ಅವರು ಬಾಲ್ಯದಿಂದಲೂ ಹಿಂದಿ ಸಿನಿಮಾಗಳನ್ನು ನೋಡಿ ದೇಹದಾರ್ಢ್ಯದ ಬಗ್ಗೆ ಆಸಕ್ತಿ ಹೊಂದಿದ್ದರು. ಹೊಟ್ಟೆಪಾಡಿಗಾಗಿ ಮುಂಬೈಗೆ ತೆರಳಿ ರಾತ್ರಿ ಶಾಲೆಯಲ್ಲಿ ಓದಿದರು. ಪಾರ್ಕ್ಗಳಲ್ಲಿ ವರ್ಕ್ಔಟ್ ಮಾಡಿ ದೇಹವನ್ನು ಹುರಿಗೊಳಿಸಿ, ಮುಂಬೈ ನಗರದ ಬಾಡಿಬಿಲ್ಡರ್ ಆಗಿ ರೂಪುಗೊಂಡರು. ಸ್ಪರ್ಧೆಗಳಲ್ಲಿ ಭಾಗವಹಿಸಿ ಅಮೆಚೂರ್ ಬಾಡಿ ಬಿಲ್ಡರ್, ಭಾರತ್ ಕುವಾರ್, ಮುಂಬೈಶ್ರೀ, ಮಹಾರಾಷ್ಟ್ರ ಶ್ರೀ, ಭಾರತಶ್ರೇಷ್ಟ, ಪಶ್ಚಿಮ ಭಾರತಶ್ರೀ ಸೇರಿದಂತೆ ಹತ್ತಾರು ರಾಜ್ಯ ಹಾಗೂ ರಾಷ್ಟ್ರಮಟ್ಟದ ದೇಹದಾರ್ಢ್ಯ ಸ್ಪರ್ಧೆಯ ವಿನ್ನರ್ ಆಗಿ ಮೂಡಿಬಂದಿದ್ದರು.
1990ರಲ್ಲಿ ಭಾರತೀಯ ನೌಕಸೇನಾ ಜವಾನರಾಗಿ ದೇಶ ಸೇವೆಗೆ ದುಡಿದ ಇವರು ನಾಲ್ಕಕ್ಕೂ ಹೆಚ್ಚು ಬಾರಿ ಮಿಸ್ಟರ್ ಇಂಡಿಯಾ ಪ್ರಶಸ್ತಿ ಪಡೆದಿದ್ದಾರೆ. ಭಾರತೀಯ ನೌಕಪಡೆಯಲ್ಲಿ 15 ವರ್ಷ ಸೇವೆ ಸಲ್ಲಿಸಿ ಚೀಪ್ ಪೆಟ್ಟಿ ಆಫಿಸರ್ ಆಗಿ ನಿವೃತ್ತಿ ಹೊಂದಿದ್ದಾರೆ. ಸತತ 15 ವರ್ಷ ಮಿಸ್ಟರ್ ಸರ್ವಿಸಸ್ ಪ್ರಶಸ್ತಿ ಅವರ ಸಾಧನೆಗೆ ಕೈಗನ್ನಡಿಯಾಗಿದೆ. 2005ರಲ್ಲಿ ಸೇವಾ ನಿವೃತ್ತಿಯಾದ ಬಳಿಕ ಹುಟ್ಟೂರಿಗೆ ಮರಳಿದ ಅವರು ಶಿರೂರಿನಲ್ಲಿ ವ್ಯಾಯಾಮ ಶಾಲೆ ಆರಂಭಿಸಿ, ಪ್ರಸ್ತುತ ಉಪ್ಪುಂದದಲ್ಲಿ ಗೋಲ್ಡನ್ ಜಿಮ್ ಮೂಲಕ ನೂರಾರು ಯುವಕರಿಗೆ ದೇಹದಾರ್ಢ್ಯ ತರಬೇತಿ ನೀಡುತಿದ್ದಾರೆ.