ಉಡುಪಿ ಡಿಎಆರ್​ ಮೈದಾನದಲ್ಲಿ ಆಯೋಜಿಸಿದ್ದ ಪೊಲೀಸ್​ ನಿರ್ಗಮನ ಪಥಸಂಚಲನದಲ್ಲಿ ಪಶ್ಚಿಮ ವಲಯ ಐಜಿಪಿ ಅಮಿತ್​ ಸಿಂಗ್​ ಗೌರವ ರಕ್ಷೆ ಪಡೆದರು. ಹರಿರಾಮ್​ ಶಂಕರ್​, ಸುಧಾಕರ್​ ನಾಯ್ಕ್​ ಇದ್ದರು. 
ಉಡುಪಿ

ಕಾನೂನು ಪಾಲನೆಗೆ ನೀಡಿ ಮೊದಲ ಪ್ರಾಶಸ್ತ್ಯ

* ಪಶ್ಚಿಮ ವಲಯ ಐಜಿಪಿ ಅಮಿತ್​ ಸಿಂಗ್​ ಕರೆ

* ಸಶಸ್ತ್ರ ಮೀಸಲು ಪಡೆಯ ನಿರ್ಗಮನ ಪಥಸಂಚಲನ

ಉಡುಪಿ: ಪೊಲೀಸ್​ ವೃತ್ತಿಯ ಕರ್ತವ್ಯದಲ್ಲಿ ಶ್ರದ್ಧೆ, ಜನರೊಂದಿಗೆ ಉತ್ತಮ ಸಂಪರ್ಕ, ಜ್ಞಾನ ಗುಣ ಹೊಂದಿರುವುದು ಅಗತ್ಯ. ಎಂತಹ ಒತ್ತಡದ ಸಂದರ್ಭದಲ್ಲಿಯೂ ವೃತ್ತಿಪರತೆ ಮತ್ತು ತಾಳ್ಮೆಯಿಂದ ವರ್ತಿಸಬೇಕು. ಸದಾಕಾಲ ತಮ್ಮ ವೃತ್ತಿಯಲ್ಲಿ ಸಂವಿಧಾನ ಎತ್ತಿ ಹಿಡಿಯುವುದರೊಂದಿಗೆ ಕಾನೂನು ಪಾಲನೆಗೆ ಮೊದಲ ಪ್ರಾಶಸ್ತ್ಯ ನೀಡಬೇಕು ಎಂದು ಪಶ್ಚಿಮ ವಲಯ ಪೊಲೀಸ್​ ಮಹಾ ನಿರೀಕ್ಷಕ ಅಮಿತ್​ ಸಿಂಗ್​ ಕರೆ ನೀಡಿದರು.
ಉಡುಪಿ ನಗರದಲ್ಲಿರುವ ಡಿಎಆರ್​ ಮೈದಾನದಲ್ಲಿ ಉಡುಪಿ ಜಿಲ್ಲಾ ತಾತ್ಕಾಲಿಕ ಪೊಲೀಸ್​ ತರಬೇತಿ ಶಾಲೆ ವತಿಯಿಂದ ಸೋಮವಾರ (ಜು.13) ಆಯೋಜಿಸಿದ್ದ ಸಶಸ್ತ್ರ ಮೀಸಲು ಪೊಲೀಸ್​ ಕಾನ್​ಸ್ಟೇಬಲ್​ಗಳ 14ನೇ ತಂಡದ ನಿರ್ಗಮನ ಪಥಸಂಚಲನದ ಕಾರ್ಯಕ್ರಮದಲ್ಲಿ ಗೌರವ ರಕ್ಷೆ ಸ್ವೀಕರಿಸಿ ಮಾತನಾಡಿದರು.
ವಿವಿಧ ತರಬೇತಿ
ತರಬೇತಿ ಶಾಲೆಯ ಪ್ರಾಂಶುಪಾಲ ಸುಧಾಕರ್​ ನಾಯ್ಕ್​ ಮಾತನಾಡಿ, ತರಬೇತಿ ಪಡೆದಿರುವ ಪ್ರಶಿಕ್ಷಣಾರ್ಥಿಗಳಲ್ಲಿ ಮಾಜಿ ಸೈನಿಕರೂ ಸೇರಿದಂತೆ ಉನ್ನತ ಪದವಿ ಹೊಂದಿದವರೂ ಸಹ ಸೇರಿದ್ದಾರೆ. 10 ತಿಂಗಳ ಅವಧಿಯಲ್ಲಿ ಕಾನೂನು, ಕಂಪ್ಯೂಟರ್​, ಮಾನಸಿಕ ಸ್ವಾಸ್ಥ್ಯ ಹಾಗೂ ಇನ್ನಿತರ ಪ್ರಚಲಿತ ವಿಷಯಗಳನ್ನು ಬೋಧಿಸಲಾಗಿದೆ. ದೈಹಿಕ ಶಿಕ್ಷಣ, ಯೋಗ ಕರಾಟೆ, ಕವಾಯತು ಹಾಗೂ ವಿವಿಧ ಶಸ್ತ್ರ ತರಬೇತಿಯನ್ನೂ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಉಡುಪಿ ಜಿಲ್ಲಾ ಪೊಲೀಸ್​ ವರಿಷ್ಠ ಹರಿರಾಮ್​ ಶಂಕರ್​ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ತರಬೇತಿ ಪಡೆದಿರುವ ತಾವುಗಳು ದೈಹಿಕ ಹಾಗೂ ಮಾನಸಿಕವಾಗಿ ಸದೃಢವಾಗಿರಲು ತಾಳ್ಮೆ ಮತ್ತು ಶಿಸ್ತು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಹೆಚ್ಚುವರಿ ಪೊಲೀಸ್​ ಅಧೀಕ್ಷಕ ಸುಧಾಕರ್​ ನಾಯ್ಕ್​ ವಂದಿಸಿದರು.

ಉತ್ತಮ ಪ್ರಶಿಕ್ಷಣಾರ್ಥಿಗಳಿಗೆ ಬಹುಮಾನ

ತರಬೇತಿಯ ಒಳಾಂಗಣ ವಿಭಾಗದಲ್ಲಿ ಶಿವಪ್ಪ ಚೆನ್ನಬಸವಪ್ಪ ಹಿಟ್ನಾಳ್​ ಪ್ರಥಮ, ಭುವನೇಶ್​ ಕೆ.ಸಿ. ದ್ವಿತೀಯ ಮತ್ತು ಅಮರೇಶ್​ ಪರಶುರಾಮ ಬೋಳಶೆಟ್ಟಿ ತೃತೀಯ ಸ್ಥಾನ ಗಳಿಸಿದರು. ಹೊರಾಂಗಣ ವಿಭಾಗದಲ್ಲಿ ಮಂಜುನಾಥ್​ ಕರಿಯಪ್ಪ ದೊಡ್ಡಮನಿ ಪ್ರಥಮ, ರುದ್ರೇಗೌಡ ಜಿ.ಎಂ., ದ್ವಿತೀಯ ಮತ್ತು ಮನೋಜ್​ ಕೆ. ತೃತೀಯ ಬಹುಮಾನ ಪಡೆದರು. ಗುರಿ ಪರೀಕ್ಷೆ ವಿಭಾಗದಲ್ಲಿ ರೇಣುಕಾಪ್ರಸಾದ್​ ಪಿ.ವಿ. ಪ್ರಥಮ, ಪಾಂಡುರಂಗ ಮಹಾದೇವಪ್ಪ ದೊಡ್ಡಮನಿ ಮತ್ತು ಸಂಗಮೇಶ ಮೇಟಿ ದ್ವಿತೀಯ ಸ್ಥಾನ ಗಳಿಸಿದರು. ಆಲ್​ರೌಂಡರ್​ ಆಗಿ ಶಿವಪ್ಪ ಚೆನ್ನಬಸಪ್ಪ ಹಿಟ್ನಾಳ್​ ಆಯ್ಕೆಯಾದರು