ಅತ್ತೂರು ಸಂತ ಲಾರೆನ್ಸ್ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವದ ಪ್ರಯುಕ್ತ ದಿವ್ಯ ಬಲಿಪೂಜೆ ನೆರವೇರಿತು. ಅಲಹಬಾದ್ ಧರ್ಮಪ್ರಾಂತ್ಯದ ಲುವಿಸ್ ಮಸ್ಕರೇನ್ಹಸ್ ಇತರರ ಇದ್ದರು. 
ಉಡುಪಿ

ಅತ್ತೂರು ಚರ್ಚ್‌ನಲ್ಲಿ ಹತ್ತು ಬಲಿಪೂಜೆ

ಕಾರ್ಕಳ: ಅತ್ತೂರು ಸಂತ ಲಾರೆನ್ಸ್ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವದ ಮೂರನೇ ದಿನವಾದ ಮಂಗಳವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.
ಒಂದೇ ದಿನದಲ್ಲಿ ಹತ್ತು ದಿವ್ಯ ಬಲಿಪೂಜೆಗಳು ನೆರವೇರಿದವು. ಮಹೋತ್ಸವದ ಮುಖ್ಯ ಸಂದೇಶವಾಗಿರುವ 'ನಾನು ನಿನ್ನನ್ನು ಪ್ರೀತಿಸಿದ್ದೇನೆ' ಎಂಬ ಧ್ಯೇಯ ವಾಕ್ಯದ ಆಧಾರದಲ್ಲಿ ಬಡವರ ಬಗೆಗಿನ ಕಾಳಜಿ, ಮಾನವೀಯ ಸೇವೆ ಮತ್ತು ಸಮಾಜದತ್ತ ನಮ್ಮ ಜವಾಬ್ದಾರಿ ಕುರಿತು ಬೋಧಿಸಲಾಯಿತು.
ಆಡಂಬರದ ಸಾಂಭ್ರಮಿಕ ಬಲಿಪೂಜೆಯನ್ನು ಅಲಹಬಾದ್ ಧರ್ಮಪ್ರಾಂತ್ಯದ ಲುವಿಸ್ ಮಸ್ಕರೇನ್ಹಸ್ ಅರ್ಪಿಸಿ, ನಾವೆಲ್ಲರೂ ಬಡವೆರೆಡೆಗೆ ನಮ್ಮ ಏಕಾಗ್ರತೆ ನೀಡಬೇಕು. ಅವರೆಲ್ಲರೂ ಕ್ರಿಸ್ತನ ಪ್ರತಿರೂಪ. ಬಡವರೊಂದಿಗೆ ಕ್ರೈಸ್ತ ಜೀವನ ಸರಿದೂಗಿ ನಡೆಯಬೇಕು ಎಂದು ಸಂದೇಶ ನೀಡಿದರು. ಬಳಿಕ ಭಕ್ತರ ಸಮ್ಮುಖದಲ್ಲಿ ವಿವಿಧ ಯಾಜಕರು ಜತೆಯಾಗಿ ದಿವ್ಯ ಬಲಿಪೂಜೆ, ಆರಾಧನೆ ಮತ್ತು ವಿವಿಧ ಭಕ್ತಿಕಾರ್ಯಗಳನ್ನು ನೆರವೇರಿಸಿದರು.
ಮಾಜಿ ಸಚಿವರಾದ ರಮಾನಾಥ್ ರೈ, ವಿನಯ್ ಕುಮಾರ್ ಸೊರಕೆ, ಮುಖಂಡರಾದ ಪದ್ಮರಾಜ್ ಹೆಗ್ಡೆ, ದಿನೇಶ್ ಹೆಗ್ಡೆ, ಉಪಾಧ್ಯಕ್ಷ ಸಂತೋಷ್ ಡಿಸಿಲ್ವಾ, ಕಾರ್ಯದರ್ಶಿ ರೊನಾಲ್ಡ್ ನೊರೊನ್ಹ, ನಿಯೋಜಿತ ಉಪಾಧ್ಯಕ್ಷ ವಂದೀಶ್ ಮಥಾಯಸ್, ನಿಯೋಜಿತ ಕಾರ್ಯದರ್ಶಿ ಮೆಲ್ವಿನ್ ಕ್ಯಾಸ್ತಲಿನೊ, ಪಿಯುಸ್ ರೊಡ್ರಿಗಸ್ ಉಪಸ್ಥಿತರಿದ್ದರು. ಅತ್ತೂರು ಹಬ್ಬ ಹಾಗೂ ಪ್ರಖ್ಯಾತ ಸಾಂತ್ ಮೇರಿ ಸಂಭ್ರಮವನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡರು.
ಸರ್ವಧರ್ಮದ ಭಕ್ತರೂ ಭಾಗಿ: ಅತ್ತೂರು ಪುಣ್ಯಕ್ಷೇತ್ರವು ತನ್ನ ಕಾರ್ಣಿಕ ಹಾಗೂ ಪವಾಡಗಳಿಗೆ ಪ್ರಸಿದ್ಧವಾಗಿದ್ದು, ವಿವಿಧ ಧರ್ಮದ ಭಕ್ತರು ಭಾಗವಹಿಸಿದ್ದರು. ಭಕ್ತರು ಮೊಂಬತ್ತಿ ಬೆಳಗುವುದರ ಜತೆಗೆ ಹರಕೆ ಸಲ್ಲಿಸಿ, ಸಂತ ಲಾರೆನ್ಸ್ ಅವರ ವಿಶೇಷ ಅವಶೇಷಗಳನ್ನು ಕಂಡು ಆಶೀರ್ವಾದ ಪಡೆದರು. ಪವಿತ್ರ ನೀರಿನ ಕೊಳದ ಬಳಿ ನೀರನ್ನು ಚಿಮುಕಿಸಿ, ಪುಷ್ಪಪ್ರಸಾದ ಹಾಗೂ ಪ್ರೋಕ್ಷ ತೀರ್ಥ ಸ್ವೀಕರಿಸಿದರು.