ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ವಿಜಯಗೋಪುರವನ್ನು ಡಾ.ಡಿ.ವೀರೇಂದ್ರ ಹೆಗ್ಗಡೆ ಲೋಕಾರ್ಪಣೆಗೊಳಿಸಿದರು. ಎಡನೀರು ಮಠಾಧೀಶ ಸಚ್ಚಿದಾನಂದ ಶ್ರೀ, ಸಚಿವ ದಿನೇಶ್ ಗುಂಡೂರಾವ್, ಶಾಸಕ ಹರೀಶ್ ಪೂಂಜ ಇತರರಿದ್ದರು.
ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ವಿಜಯಗೋಪುರ ದೇವರ ಪಾದದ ಪ್ರತೀಕವಾಗಿದ್ದು, ಅದಕ್ಕೆ ನಾವು ನಮಸ್ಕರಿಸಿದರೆ ದೇವರಿಗೆ ನಮಸ್ಕರಿಸಿದಂತೆಯೇ ಆಗುತ್ತದೆ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದರು.
ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಬುಧವಾರ ನಡೆದ ಬ್ರಹ್ಮಕಲಶೋತ್ಸವ ಹಾಗೂ ವಿಜಯಗೋಪುರ ಲೋಕಾರ್ಪಣೆಯ ಸಭಾ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು. ಭಾರತೀಯ ಸಂಸ್ಕೃತಿಯಲ್ಲಿ ದೇವರ ಪಾದಕ್ಕೆ ವಿಶೇಷ ಮಹತ್ವವಿದ್ದು, ಭಕ್ತಿ ಮತ್ತು ವಿನಯದ ಸಂಕೇತವಾಗಿದೆ. ದಕ್ಷಿಣ ಭಾರತದ ತಮಿಳುನಾಡಿನಲ್ಲಿ ಗೋಪುರಗಳ ಮೂಲಕವೇ ದೇವಳಗಳನ್ನು ಗುರುತಿಸಲಾಗುತ್ತದೆ. ದೇವಾಲಯಗಳು ಸವಾಜವನ್ನು ಒಂದಾಗಿಸುವ ಪವಿತ್ರ ತಾಣಗಳು. ಇಂತಹ ಧರ್ಮಕಾರ್ಯಗಳು ಮುಂದಿನ ಪೀಳಿಗೆಗೂ ಮುಂದುವರಿಯಬೇಕಿದ್ದು, ಇದಕ್ಕಾಗಿ ಹಿರಿಯರು ಯುವಪೀಳಿಗೆಯನ್ನು ಒಟ್ಟುಗೂಡಿಸಿ ಪ್ರೇರೇಪಿಸಬೇಕು ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಸರ್ವಧರ್ಮೀಯರ ಶ್ರದ್ಧಾಕೇಂದ್ರಗಳಾದ ದೇವಸ್ಥಾನಗಳು ಹಾಗೂ ಮಠಮಂದಿರಗಳಂಥ ಆಧ್ಯಾತ್ಮಿಕ ಕೇಂದ್ರಗಳ ಜೀರ್ಣೋದ್ಧಾರದಿಂದ ಊರಿನ ಸರ್ವತೋಮುಖ ಪ್ರಗತಿಯಾಗಿ ಸುಖಶಾಂತಿ, ನೆಮ್ಮದಿ ನೆಲೆಸುತ್ತದೆ ಎಂದರು.
ಸಂಸ್ಕೃತಿ ಚಿಂತಕ ದಾಮೋದರ ಶರ್ಮ ಧಾರ್ಮಿಕ ಉಪನ್ಯಾಸ ನೀಡಿದರು. ವಿಜಯಗೋಪುರ ನಿರ್ವಾಣ ಸಮಿತಿ ಅಧ್ಯಕ್ಷ ಶಶಿಧರ ಶೆಟ್ಟಿ ಬರೋಡ ಅಧ್ಯಕ್ಷತೆ ವಹಿಸಿದ್ದರು.
ಉಜಿರೆ ಅಶೋಕ್ ಭಟ್ ವಿರಚಿತ ವಿಜಯ ಪಥ, ಸಾಂತೂರು ಶ್ರೀನಿವಾಸ ತಂತಿ ವಿರಚಿತ ಉಜಿರೆ ಜನಾರ್ದನ ದೇವಸ್ಥಾನದ ಇತಿಹಾಸ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು. ಬಳಿಕ ವಿಜಯಗೋಪುರ ನಿರ್ವಾಣ ಕಾರ್ಯದಲ್ಲಿ ಸಹಕರಿಸಿದವರನ್ನು ಗೌರವಿಸಲಾಯಿತು.
ಧರ್ಮಸ್ಥಳದ ಡಿ.ಹರ್ಷೇಂದ್ರ ಕುವಾರ್, ಶಾಸಕ ಹರೀಶ್ ಪೂಂಜ, ಮೆಸ್ಕಾಂ ಅಧ್ಯಕ್ಷ ಕೆ.ಹರೀಶ್ ಕುಮಾರ್, ವಿಧಾನಪರಿಷತ್ ಸದಸ್ಯ ಕೆ.ಪ್ರತಾಪಸಿಂಹ ನಾಯಕ್, ರಾಜ್ಯ ಕಾಂಗ್ರೆಸ್ ಮುಖಂಡ ಎಂ.ಶ್ರೀಕಾಂತ್, ವಾಜಿ ಶಾಸಕ ಎಚ್.ಎಂ.ರಮೇಶ್ ಗೌಡ, ಉದ್ಯಮಿ ಶ್ರೀಪತಿ ಭಟ್, ಹಿಂದೂ ರಾಷ್ಟ್ರಸಭಾ ರಾಜ್ಯಾಧ್ಯಕ್ಷ ಪ್ರತಾಪ್ ಆರ್. ಗೌಡ ಉಪಸ್ಥಿತರಿದ್ದರು.
ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡ್ವೆಟ್ನಾಯ ಸ್ವಾಗತಿಸಿದರು. ರಾಜೇಶ್ ಪೈ ವಂದಿಸಿದರು. ಎಸ್‌ಡಿಎಂ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಪ್ರೊ.ಶ್ರೀಧರ ಭಟ್ ಕಾರ್ಯಕ್ರಮ ನಿರೂಪಿಸಿದರು.
ಧರ್ಮಸ್ಥಳದ ಕಾರ್ಯಕ್ಷೇತ್ರ ಉಜಿರೆ
ವಿಜಯಗೋಪರ ಲೋಕಾರ್ಪಣೆಗೊಳಿಸಿ ಮಾತನಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ, ಉಜಿರೆಗೂ ಧರ್ಮಸ್ಥಳಕ್ಕೂ ಅವಿನಾಭಾವ ಸಂಬಂಧವಿದ್ದು, ಧರ್ಮಸ್ಥಳದ ಕರ್ಮಕ್ಷೇತ್ರ ಉಜಿರೆಯೇ ಆಗಿದೆ. ಶಾಲಾ, ಕಾಲೇಜುಗಳು ಹಾಗೂ ಇಂಜಿನಿಯರಿಂಗ್ ಕಾಲೇಜು ಸಹಿತ ಕೆ.ಜಿ.ಯಿಂದ ಪಿ.ಜಿ. ವರೆಗೆ ಅನೇಕ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿದ್ದರಿಂದ ಉಜಿರೆಯ ಸರ್ವತೋಮುಖ ಪ್ರಗತಿಯಾಗಿದೆ. ಉಜಿರೆಯ ಧಣಿಗಳೆಂದೇ ಚಿರಪರಿಚಿತರಾಗಿದ್ದ ಕೀರ್ತಿಶೇಷ ವಿಜಯರಾವ ಪಡ್ವೆಟ್ನಾಯರ ಸ್ಮರಣಾರ್ಥ ನಿರ್ಮಿಸಿದ ವಿಜಯಗೋಪುರ ಆಕರ್ಷಕವಾಗಿ ಮೂಡಿಬಂದಿದೆ ಎಂದರು.
ಭಾರತದ ಭವ್ಯ ಇತಿಹಾಸ, ಧರ್ಮ, ಕಲೆ ಮತ್ತು ಸಂಸ್ಕತಿಯ ಹಿನ್ನೆಲೆಯಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿ ವಿಶ್ವವಾನ್ಯತೆಯನ್ನು ಗಳಿಸಿದೆ. ಆಧುನಿಕತೆಯ ಪ್ರಗತಿಯೊಂದಿಗೆ ಧಾರ್ಮಿಕ, ಸಾವಾಜಿಕ ಹಾಗೂ ಆಧ್ಯಾತ್ಮಿಕ ಕ್ಷೇತ್ರದಲ್ಲಿಯೂ ಉತ್ತಮ ಪ್ರಗತಿಯಾಗುತ್ತಿರುವುದು ಶ್ಲಾನೀಯವಾಗಿದೆ.