ಉಡುಪಿ ಕಲ್ಯಾಣಪುರದ ಕೆಂಚಮ್ಮದೇವಿ ದೇಗುಲದಲ್ಲಿ ಸಂರಕ್ಷಿತ ವೀರ ಮಾಸ್ತಿಕಲ್ಲನ್ನು ಯಶ್​ಪಾಲ್​ ಸುವರ್ಣ ಲೋಕಾರ್ಪಣೆಗೊಳಿಸಿದರು. ಪ್ರೊ. ಟಿ.ಮುರುಗೇಶಿ, ಡಾ. ಸುರೇಶ ಕೋಟ್ಯಾನ್​, ರಾಜಶೇಖರ ಕೋಟ್ಯಾನ್​, ಡಾ. ಆರ್​. ಶೇಜೇಶ್ವರ ಇದ್ದರು.  
ಉಡುಪಿ

ಮುಂದಿನ ತಲೆಮಾರಿಗೆ ತಿಳಿಸಿ ಕರಾವಳಿಯ ಇತಿಹಾಸ

* ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಸಲಹೆ

* ಕಲ್ಯಾಣಪುರ ಕೆಂಚಮ್ಮದೇಗುಲದಲ್ಲಿ ವೀರ ಮಾಸ್ತಿಕಲ್ಲು ಲೋಕಾರ್ಪಣೆ

ಉಡುಪಿ: ಕರಾವಳಿಯು ಭಗವಾನ್​ ಪರಶುರಾಮನಿಂದ ಸೃಷ್ಟಿಯಾಗಿದ್ದು, ನಾಗಾರಾಧನೆಗೆ ಇಲ್ಲಿ ವಿಶೇಷ ಮಹತ್ವವಿದೆ. ಜತೆಗೆ ಅನೇಕ ಮಠ-ಮಂದಿರಗಳ ಕೇಂದ್ರವೂ ಇದ್ದು ಪ್ರಾಚೀನ ವಿಷಯ ಇಲ್ಲಿ ಅಡಗಿದೆ. ಇಲ್ಲಿನ ಇತಿಹಾಸಕ್ಕೆ ಕೆಂಚಮ್ಮದೇವಿ ದೇವಸ್ಥಾನದ ಆವರಣದಲ್ಲಿ ಸಂರಕ್ಷಿತ ವೀರ ಮಾಸ್ತಿಕಲ್ಲು ಚಿಕ್ಕ ನಿದರ್ಶನವಾಗಿದೆ. ಇದಕ್ಕೆ ಸಂಬಂಧಿಸಿ ಪುಸ್ತಕ ರಚಿಸಿ ಮುಂದಿನ ತಲೆಮಾರಿಗೆ ಕರಾವಳಿಯ ಹಾಗೂ ದೇಶದ ಸ್ಪಷ್ಟ ಇತಿಹಾಸ ತಿಳಿಸಿಕೊಡುವ ಕೆಲಸ ಆಗಬೇಕಿದೆ ಎಂದು ಶಾಸಕ ಯಶ್​ಪಾಲ್​ ಸುವರ್ಣ ಹೇಳಿದರು.

ಉಡುಪಿ ಕಲ್ಯಾಣಪುರದ ಕೆಂಚಮ್ಮದೇವಿ ದೇವಸ್ಥಾನದ ಆವರಣದಲ್ಲಿ ಆದಿಮ ಕಲಾ ಟ್ರಸ್ಟ್​ ಉಡುಪಿ, ಪಡುನಾಡು ಕೂಟ ಬೆಂಗಳೂರು, ಗಜನಿ ಫೌಂಡೇಷನ್​ ಮುಲ್ಕಿ ಹಾಗೂ ರಾಣಿ ಚಿಕ್ಕಾಯಿ ತಾಯಿ ಚಾರಿಟೇಬಲ್​ ಟ್ರಸ್ಟ್​ ಗುಳ್ಳಾಡಿ ಸಹಕಾರದಲ್ಲಿ ಕಲ್ಯಾಣಪುರದ ಕೆಂಚಮ್ಮದೇವಿ ದೇವಸ್ಥಾನದ ಆವರಣದಲ್ಲಿ ಭಾನುವಾರ (ನ.15) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂರಕ್ಷಿತ ವೀರ ಮಾಸ್ತಿಕಲ್ಲು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಆದಿಮ ಕಲಾ ಟ್ರಸ್ಟ್​ ಉಡುಪಿಯ ಸ್ಥಾಪಕ ಸಂಚಾಲಕ ಪ್ರೊ. ಟಿ.ಮುರುಗೇಶಿ ಮಾತನಾಡಿ, ಕಲ್ಯಾಣಪುರದ ಕೆಂಚಮ್ಮ ದೇವಿ ದೇವಸ್ಥಾನವು ಕೆಳದಿ ಅರಸರ ಕಾಲದಲ್ಲಿ ನಿರ್ಮಾಣವಾಗಿದೆ. ಇಲ್ಲಿರುವ ಈ ಮಾಸ್ತಿಕಲ್ಲು ಕೆಳದಿ ಕಾಲದ್ದೇ ಆಗಿರಬೇಕು. ಎಲ್ಲ ವೀರಗಲ್ಲಿನಲ್ಲಿ ಯುದ್ಧದ ಚಿತ್ರಣ ಇರುತ್ತದೆ. ಆದರೆ, ಈ ಕಲ್ಲಿನಲ್ಲಿ ಯುದ್ಧದ ಚಿತ್ರಣದ ಬದಲಾಗಿ ವಾದ್ಯದವರು ಇದ್ದಾರೆ. ಇದು ವಿಶೇಷ ಭಂಗಿಯಲ್ಲಿದ್ದು, ವೇಳೆ ವಾಳಿ ಪದ್ಧತಿಯಲ್ಲಿರುವುದು ಅಧ್ಯಯನ ನಡೆಸಿದಾಗ ತಿಳಿದುಬಂದಿದೆ. ದಕ್ಷಿಣ ಭಾರತದಲ್ಲಿ 9ರಿಂದ 13ನೇ ಶತಮಾನದವರೆಗೆ ಈ ಪದ್ಧತಿ ಅಸ್ತಿತ್ವದಲ್ಲಿತ್ತು ಎಂದರು.

ಗಜನಿ ಫೌಂಡೇಷನ್​ ಮುಲ್ಕಿ ಹಾಗೂ ಪಡುನಾಡು ಕೂಟದ ಅಧ್ಯಕ್ಷ ಡಾ. ಸುರೇಶ ಕೋಟ್ಯಾನ್​ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ಜಿಯೋಸಿಸ್​ ಟೆಕ್​ ಪ್ರೈ.ಲಿ. ನಿರ್ದೇಶಕ ರಾಜಶೇಖರ ಕೋಟ್ಯಾನ್​, ಹಂಪಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ನಿರ್ದೇಶಕ ಡಾ. ಆರ್​. ಶೇಜೇಶ್ವರ ಉಪಸ್ಥಿತರಿದ್ದರು. ಉಪನ್ಯಾಸಕಿ ಸ್ಮಿತಾ ಕಾರ್ಯಕ್ರಮ ನಿರ್ವಹಿಸಿದರು.

ವೇಳೆ ವಾಳಿ ಪದ್ಧತಿಯ ಕಾಲದಲ್ಲಿ ರಾಜ ಸತ್ತಾಗ ಅವನ ಪತ್ನಿಯರೂ ಪ್ರಾಣ ತ್ಯಾಗ ಮಾಡಿದ ಸನ್ನಿವೇಶದ ಮಾಹಿತಿ ಈ ಕಲ್ಲಿನಲ್ಲಿದೆ. ಪಕ್ಕದಲ್ಲೇ ಕೆಂಚಮ್ಮ ದೇವಿ ದೇವಸ್ಥಾನವಿದ್ದು, ಇಲ್ಲಿ ಒಂದು ಸ್ತ್ರೀ ಶಿಲ್ಪ ಮತ್ತು ಪಕ್ಕದಲ್ಲಿ ಮತ್ತಿಬ್ಬರು ಸ್ತ್ರೀಯರು ಇದ್ದಾರೆ. ಇಂದಿಗೂ ಸಹ ಈ ಭಾಗದಲ್ಲಿ ಜನರು ಮೂವರು ದೇವಿಯರನ್ನು ಆರಾಧಿಸುತ್ತಾರೆ. ಇತಿಹಾಸ ಸಾರುವ ಈ ಕಲ್ಲಿನ ಸಂರಕ್ಷಣೆ ಅತ್ಯಗತ್ಯ.
ಪ್ರೊ. ಟಿ.ಮುರುಗೇಶಿ. ಆದಿಮ ಕಲಾ ಟ್ರಸ್ಟ್​ನ ಸ್ಥಾಪಕ ಸಂಚಾಲಕ.