ಉಡುಪಿ: ಬೆಳೆಯುತ್ತಿರುವ ಉದ್ಯೋಗಿಕ ಕ್ಷೇತ್ರದಲ್ಲಿ ಪದವೀಧರರಿಗೆ ಕೃತಕ ಬುದ್ಧಿಮತ್ತೆ (ಎಐ) ಬಳಸುವ ಕೌಶಲ ಇದ್ದರೆ ಸಾಲದು. ಅದು ನೀಡುವ ಫಲಿತಾಂಶ ಪರಿಶೀಲಿಸುವ ಜಾಣ್ಮೆಯೂ ಬೇಕು. ಕೇಳಿದ ಪ್ರಶ್ನೆಗಳಿಗೆಲ್ಲ ಎಐ ಉತ್ತರಿಸುವುದರಿಂದ ಅದಕ್ಕೆ ಸರಿಯಾದ ಪ್ರಶ್ನೆ ಕೇಳುವ ಬುದ್ಧಿವಂತಿಕೆ ನಮ್ಮಲ್ಲಿರಬೇಕು. ತಂತ್ರಜ್ಞಾನ ಒಂದು ಸಾಧನವಷ್ಟೇ. ಅದು ಸಮಾಜಕ್ಕೆ ಪೂರಕವಾಗಿರಬೇಕು ಎಂದು ಹಿತಾಚಿ ಸಿಸ್ಟಮ್ಸ್ ಇಂಡಿಯಾದ ನಿರ್ದೇಶಕ ಹಾಗೂ ಚೀಫ್ ಟ್ರಾನ್ಸ್ಫಾಮೇರ್ಷನ್ ಆಫೀಸರ್ ಕೋಜಿ ತ್ಸುಬೋಟಾ ಅಭಿಮತ ವ್ಯಕ್ತಪಡಿಸಿದರು.
ಮಣಿಪಾಲದಲ್ಲಿ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಮಾಹೆ)ನ 34ನೇ ಘಟಿಕೋತ್ಸವದ ಎರಡನೇ ದಿನವಾದ ಶುಕ್ರವಾರ (ನ.20) ಆಯೋಜಿಸಿದ್ದ ಸಮಾರಂಭದಲ್ಲಿ ಭಾಷಣ ಮಾಡಿದರು.
ಮಾಹೆ ಟ್ರಸ್ಟ್ನ ಟ್ರಸ್ಟಿ ವಸಂತಿ ಆರ್. ಪೈ, ಮಾಹೆ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ, ಕುಲಪತಿ ಡಾ. ಶರತ್ ಕೆ. ರಾವ್ ಉಪಸ್ಥಿತರಿದ್ದರು.
ಘಟಿಕೋತ್ಸವದ ಮೊದಲ ದಿನದಂದು 44 ಪಿಎಚ್.ಡಿ ಸಂಶೋಧನಾರ್ಥಿಗಳು ಸೇರಿದಂತೆ ಒಟ್ಟು 1,416 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಅಸಾಧಾರಣ ಶೈಕ್ಷಣಿಕ ಸಾಧನೆಗೈದ ಇಬ್ಬರು ಪ್ರತಿಭಾವಂತ ಪದವೀಧರರಾದ ನಿಶಾಲ್ ರಾಯ್ (ಬಿಎಸ್ಸಿ ನರ್ಸಿಂಗ್, ಎಂಕಾನ್ ಮಣಿಪಾಲ) ಮತ್ತು ಮೊಹಮ್ಮದ್ ಸೈಫ್ ಝಿದಾನ್ (ಮಾಸ್ಟರ್ ಆಫ್ ಹಾಸ್ಪಿಟಲ್ ಅಡ್ಮಿನಿಸ್ಟ್ರೆಷನ್, ಪಿಎಸ್ಪಿಎಚ್ ಮಣಿಪಾಲ) ಇವರಿಗೆ ಪ್ರತಿಷ್ಠಿತ 'ಡಾ. ಟಿಎಂಎ ಪೈ ಚಿನ್ನದ ಪದಕ' ನೀಡಿ ಗೌರವಿಸಲಾಯಿತು.
ಪದವೀಧರರಿಗೆ ಸಾಧನೆಯಷ್ಟೇ ಸಾಮಾಜಿಕ ಹೊಣೆಗಾರಿಕೆಯೂ ಮುಖ್ಯ. ಹೊಸ ಆಲೋಚನೆ, ಬದ್ಧತೆ ಮತ್ತು ನಿರಂತರ ಕಲಿಕೆಯಿಂದ ವೃತ್ತಿಪರತೆ ಮತ್ತು ಸಾಮಾಜಿಕ ಜವಾಬ್ದಾರಿಯುಳ್ಳ ವ್ಯಕ್ತಿತ್ವ ರೂಪಿಸಲು ಮಾಹೆ ಶ್ರಮಿಸುತ್ತಿದೆ. ಪದವೀಧರರು ತಮ್ಮ ಕೌಶಲ ಮತ್ತು ಜ್ಞಾನವನ್ನು ಸಮಾಜದ ಒಳಿತಿಗೆ ಬಳಸಬೇಕು.ಡಾ. ಶರತ್ ಕೆ. ರಾವ್. ಮಾಹೆ ಕುಲಪತಿ.